ಕರ್ನಾಟಕಪ್ರಮುಖ ಸುದ್ದಿ

ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಿ.ಎಸ್.ಯಡಿಯೂರಪ್ಪ: ಹಂಗಾಮಿ ಸಿಎಂ ಆಗಿರುವಂತೆ ಸೂಚನೆ

ಬೆಂಗಳೂರು,ಜು.26- ಬಿ.ಎಸ್.ಯಡಿಯೂರಪ್ಪನವರು ರಾಜ್ಯಪಾಲರನ್ನು ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜಭವನಕ್ಕೆ ತೆರಳಿದ ಬಿಎಸ್ವೈ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ವೇಳೆ ರಾಜ್ಯಪಾಲರು ಮುಂದಿನ ಮುಖ್ಯಮಂತ್ರಿಗಳ ನೇಮಕವಾಗುವವರೆಗೆ ಹಂಗಾಮಿ ಸಿಎಂ ಆಗಿ ಮುಂದುವರಿಯುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಬಿಜೆಪಿ ಸರ್ಕಾರದ ಸಾಧನಾ ಪರ್ವ ಸಮಾವೇಶದಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ನಂತರ ನೇರವಾಗಿ ರಾಜಭವನಕ್ಕೆ ತೆರಳಿದ ಅವರು ರಾಜೀನಾಮೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜಭವನ ಸುತ್ತಮುತ್ತ ತೀವ್ರ ಭದ್ರತೆ ಕಲ್ಪಿಸಲಾಗಿತ್ತು.

ಯಡಿಯೂರಪ್ಪ ಅಭಿಮಾನಿಗಳಿಗೆ ಇಂದು ನಿಜಕ್ಕೂ ಅತ್ಯಂತ ದುಃಖದ ದಿನವೇ ಎನ್ನಬಹುದು. 4 ಬಾರಿ ಕರ್ನಾಟಕದ ಸಿಎಂ ಆದರೂ ಒಮ್ಮೆ ಕೂಡ ಅವರು ಅಧಿಕಾರಾವಾಧಿ ಪೂರ್ಣಗೊಳಿಸಲಿಲ್ಲ. ಹೀಗಾಗಿ ಅವರ ಅನುಯಾಯಿಗಳು, ಅಭಿಮಾನಿಗಳು ಅತ್ಯಂತ ಭಾವುಕರಾಗಿದ್ದಾರೆ.

ಜುಲೈ 26ರಂದೇ ರಾಜೀನಾಮೆ: ಸರಿಯಾಗಿ ಎರಡು ವರ್ಷಗಳ ಹಿಂದೆ 2019ರ ಜುಲೈ 26ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಅಧಿಕಾರಕ್ಕೆ ಏರಿದ್ದರು. ಆಪರೇಷನ್ ಕಮಲ ಮೂಲಕ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಕೆಡವಿ ದಕ್ಷಿಣ ಭಾರತದಲ್ಲಿ ಕೇಸರಿ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡುವಂತೆ ಮಾಡಿದ ಕೀರ್ತಿ, ಯಶಸ್ಸು ಯಡಿಯೂರಪ್ಪನವರಿಗೆ ಸಲ್ಲಬೇಕು.

ದೆಹಲಿಯಲ್ಲಿ ಗರಿಗೆದರಿದ ಚಟುವಟಿಕೆ: ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪನವರು ರಾಜೀನಾಮೆ ನೀಡಿದ ಬೆನ್ನಲ್ಲೇ ಅತ್ತ ದೆಹಲಿಯಲ್ಲಿ ಮುಂದಿನ ಸಿಎಂ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ, ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡ ಮತ್ತು ಅಮಿತ್ ಶಾ ಗಾಢವಾದ ಚರ್ಚೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. (ಎಂ.ಎನ್)

Leave a Reply

comments

Related Articles

error: