
ಮೈಸೂರು
ಸಂಸದ ಪ್ರತಾಪ್ ಸಿಂಹರಿಂದ ಸಾಮಾಜಿಕ ಜಾಲತಾಣಗಳ ದುರುಪಯೋಗ : ಸುಧಾ ಮುದ್ದಯ್ಯ ಆರೋಪ
ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಕೇವಲ ವಿವಾದಾತ್ಮಕ ಹೇಳಿಕೆಗಳನ್ನು ಹಾಕುವುದರ ಮೂಲಕ ವ್ಯರ್ಥ ಕಾಲಹರಣ ನಡೆಸಿದ್ದು. ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಎಂದು ಮೈಸೂರು-ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಧಾ ಮುದ್ದಯ್ಯ ಸುದ್ದಿಗೋಷ್ಠಿಯಲ್ಲಿ ನೇರವಾಗಿ ಆರೋಪಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ಸುದ್ದಿಗಾರರನ್ನುದ್ದೇಶಿ ಮಾತನಾಡಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಡಾ.ಗೀತಾ ಮಹದೇವಪ್ರಸಾದ್, ದೆಹಲಿ ಯೂನವರ್ಸಿಟಿ ವಿದ್ಯಾರ್ಥಿನಿ ಗುರುಮೇಹರ್ ಕೌರ್, ಮಹಿಳಾ ಆಯೋಗದ ಸದಸ್ಯೆ ಪ್ರಭಾ ಬೆಳವಂಗಲ್ ಹೀಗೆ ಮಹಿಳೆಯರ ವಿರುದ್ಧ ಲಘುವಾಗಿ ಪ್ರತಿಕ್ರಿಯಿಸಿ ಸಾಮಾಜಿಕ ಜಾಲತಾಣ ಟ್ವಿಟರ್, ಫೇಸ್ಬುಕ್ ಗಳಲ್ಲಿ ತಮ್ಮ ಸಂದೇಶಗಳನ್ನು ಹಾಕುತ್ತಿರುವುದು ಖಂಡಿಸಿ, ಮಲೆನಾಡಿಗರಿಗೆ ಮಾರಕವಾದ ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳಿಸದಂತೆ ಕೇಂದ್ರದ ಮೇಲೆ ಒತ್ತಡ ಹೇರಲು ವಿಫಲರಾಗಿದ್ದಾರೆ. ಅಲ್ಲದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಶಾಂತಿಪ್ರಿಯರಾದ ಮೈಸೂರು-ಕೊಡಗಿನ ಮತದಾರರಲ್ಲಿ ಗೊಂದಲ ಮೂಡಿಸಿ ಶಾಂತಿ ಸೌಹಾರ್ದತೆಗೆ ಧಕ್ಕೆ ತರುತ್ತಿರುವುದು ಅಕ್ಷಮ್ಯವೆಂದು ದೂರಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರದಿಂದ ಬಿಡುಗಡೆಯಾಗುವ ಅನುದಾನದ ಬಳಕೆಯ ಖರ್ಚು ವೆಚ್ಚ, ಕೈಗೊಂಡ ಕಾಮಗಾರಿಗಳ ವಿವರಗಳ ನಿಖರ ಮಾಹಿತಿಯನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಿ ಚರ್ಚೆ ನಡೆಸಲಿ ಹಾಗೂ ಕ್ಷೇತ್ರದ ಅಭಿವೃದ್ಧಿ ಮತ್ತು ಸಾಧನೆಯ ಬಗ್ಗೆ ಜನಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಿ ಎಂದು ಆಶಿಸಿದರು. (ಕೆ.ಎಂ.ಆರ್)