ಕರ್ನಾಟಕಪ್ರಮುಖ ಸುದ್ದಿಮೈಸೂರು

 ಪ್ರಾಮಾಣಿಕವಾಗಿ ದುಡಿದಿದ್ದೇನೆ, ಸಾರ್ಥಕ ಭಾವ ಹೊಂದಿದ್ದೇನೆ” : ಅವಕಾಶ ನೀಡಿದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪರಿಗೆ , ವರಿಷ್ಠರಿಗೆ ಧನ್ಯವಾದ ತಿಳಿಸಿದ ಎಸ್ ಟಿ ಎಸ್

ಮೈಸೂರು,ಜು.26:-  ರಾಜ್ಯ ಸರ್ಕಾರ ಈ 2 ವರ್ಷದಲ್ಲಿ ಅನೇಕ ಸಾಧನೆಗಳನ್ನು ಮಾಡಿದೆ. ಸಹಕಾರ ಇಲಾಖೆ ಸಹ ಅದೇ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಕಾರ್ಯನಿರ್ವಹಣೆ ಮಾಡಿದ್ದು, ಹಲವು ಜನೋಪಕಾರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಕೊರೋನಾ ಸಂಕಷ್ಟದ ಕಾಲದಲ್ಲಿ ಸರ್ಕಾರಕ್ಕೆ ಆರ್ಥಿಕ ಬಲ ತುಂಬುವುದರ ಜೊತೆಗೆ ರೈತರ ಹಾಗೂ ವರ್ತಕರ ನೆರವಿಗೆ ಧಾವಿಸಲಾಯಿತು. ಸಾಲ-ಸೌಲಭ್ಯಗಳ ಮೂಲಕ ಸ್ವಾವಲಂಬನೆ ಸಾಧಿಸಲು ಅನುಕೂಲ ಮಾಡಿಕೊಡಲಾಯಿತು. ವರ್ಷಕ್ಕೆ 2 ಕಾರ್ಯಕ್ರಮಗಳಿಗೆ ಮಾತ್ರವೇ ಸೀಮಿತ ಎಂಬಂತೆ ಇದ್ದ ಸಹಕಾರ ಇಲಾಖೆಯಲ್ಲಿ ಎಷ್ಟೆಲ್ಲ ಜನಪರ ಕಾರ್ಯಕ್ರಮಗಳನ್ನು ರೂಪಿಸಬಹುದು, ಉಪಯೋಗ ಮಾಡಬಹುದು ಎಂಬಿತ್ಯಾದಿ ಅಂಶಗಳ ಮೂಲಕ ಇಲಾಖೆಯ ನಿಜವಾದ ಶಕ್ತಿ-ಸಾಮರ್ಥ್ಯ ಏನು ಎಂಬುದನ್ನು ತೋರಿಸಿಕೊಟ್ಟಿದ್ದೇವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ನನಗೆ ಸಂಪುಟದಲ್ಲಿ ಸಚಿವ ಸ್ಥಾನಮಾನ ನೀಡಿ ಜವಾಬ್ದಾರಿಯನ್ನು ನೀಡಿದ್ದ  ಮುಖ್ಯಮಂತ್ರಿಗಳಾದ   ಬಿ.ಎಸ್.ಯಡಿಯೂರಪ್ಪ ಅವರು ಸೇರಿದಂತೆ ಪಕ್ಷದ ವರಿಷ್ಠರಿಗೆ ಆಭಾರಿಯಾಗಿದ್ದೇನೆ. ಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ನೀಡಿರುವ ಉಸ್ತುವಾರಿ ಹೊಣೆಯನ್ನು ಸಹ ಸಮರ್ಥವಾಗಿ ನಿಭಾಯಿಸಿರುವ ತೃಪ್ತಿ ಇದ್ದು, ಕಳೆದ 15 ತಿಂಗಳಲ್ಲಿ 150ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದೇನೆ. ಅಲ್ಲದೆ, ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ 4 ಬಾರಿ ಭೇಟಿ ನೀಡಿ ಸ್ಥಳೀಯ ಜನತೆಯ ಹಾಗೂ ಜನಪ್ರತಿನಿಧಿಗಳಿಗೆ ಸ್ಪಂದಿಸಿದ್ದೇನೆ. ಸಚಿವನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೂ ನಿರಂತರವಾಗಿ ಕ್ಷೇತ್ರದ ಜನತೆ ಸೇರಿದಂತೆ ರಾಜ್ಯದ ಜನತೆಯ ಅಭ್ಯುದಯಕ್ಕೆ ಪ್ರಾಮಾಣಿಕವಾಗಿ ಹಾಗೂ ಮನಃಪೂರ್ವಕವಾಗಿ ದುಡಿದ್ದೇನೆ ಎಂಬ ಸಾರ್ಥಕ ಭಾವನೆ ನನ್ನದಾಗಿದೆ. ನನಗೆ ಸಹಕಾರ ನೀಡಿದ ಸಂಪುಟ ಸಹೋದ್ಯೋಗಿಗಳ ಸಹಿತ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಬಯಸುತ್ತೇನೆ ಎಂದಿದ್ದಾರೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 58 ಕೋಟಿ ರೂ.

ಕೊರೋನಾ ಸಂಕಷ್ಟ ಕಾಲದಲ್ಲಿ ಮುಖ್ಯಮಂತ್ರಿಗಳ ವೈದ್ಯಕೀಯ ಪರಿಹಾರ ನಿಧಿಗೆ ಎಪಿಎಂಸಿಗಳು ಹಾಗೂ ಸಹಕಾರ ಸಂಸ್ಥೆಗಳ ಮೂಲಕ ದೇಣಿಗೆ ಸಂಗ್ರಹಿಸಿ 58 ಕೋಟಿ ರೂಪಾಯಿಗಳ ಗರಿಷ್ಠ ಮೊತ್ತವನ್ನು ದೇಣಿಗೆಯಾಗಿ ಕೊಡಲಾಗಿದೆ. ಈ ಮೂಲಕ ಸಾರ್ವಜನಿಕ ಸಂಕಷ್ಟ ಎಂದು ಬಂದಾಗ ಎಂದೂ ಸಹ ಸಹಕಾರ ಇಲಾಖೆ, ಸಹಕಾರಿಗಳು ಕೈಬಿಡುವುದಿಲ್ಲ ಎಂಬುದನ್ನು ತೋರಿಸಿಕೊಡಲಾಗಿದೆ.

ಆಶಾ ಕಾರ್ಯಕರ್ತೆಯರಿಗೆ 12.75 ಕೋಟಿ ರೂ. ಪ್ರೋತ್ಸಾಹಧನ

ಕೊರೋನಾ ಸಂಕಷ್ಟ ಕಾರ್ಯದಲ್ಲಿ ಹೊರಬರಲು ಸಹ ಹೆದರುತ್ತಿದ್ದ ಸಂದರ್ಭದಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೆ ಜನರ ಆರೋಗ್ಯದ ಕಾಳಜಿ ಮಾಡಿರುವ ಕೊರೋನಾ ವಾರಿಯರ್ಸ್‌ಗಳಾಗಿ ಕಾರ್ಯನಿರ್ವಹಿಸಿದ ರಾಜ್ಯದ 42,500 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿಯಂತೆ 12 ಕೋಟಿ 75 ಲಕ್ಷ ರೂಪಾಯಿಗಳನ್ನು ಸಹಕಾರ ಇಲಾಖೆ ಮೂಲಕ ವಿತರಿಸಲಾಗಿದೆ. ಇದನ್ನು ಲಾಭದಲ್ಲಿರುವ ಸಹಕಾರ ಸಂಘ-ಸಂಸ್ಥೆಗಳ ಮುಖಾಂತರ ಹಣವನ್ನು ಸಂಗ್ರಹಿಸಲಾಗಿದೆ. ಅಲ್ಲದೆ, ಪ್ರತಿ ಜಿಲ್ಲೆಗಳಿಗೂ ಖುದ್ದು ಭೇಟಿ ನೀಡಿ ಸಹಾಯಧನವನ್ನು ವಿತರಣೆ ಮಾಡಿದ್ದೇನೆ.

ಎಪಿಎಂಸಿಗಳ ಸಮಸ್ಯೆಗಳಿಗೆ ಪರಿಹಾರ

ಕೊರೋನಾ ಸಮಯದಲ್ಲಿ ರಾಜ್ಯದೆಲ್ಲೆಡೆ ಸಂಚರಿಸಿ ಎಲ್ಲ ಜಿಲ್ಲೆಗಳ ಎಪಿಎಂಸಿಗಳಿಗೆ ಭೇಟಿ ನೀಡಿ ರೈತರ ಹಾಗೂ ವರ್ತಕರ ಅಹವಾಲುಗಳನ್ನು ಆಲಿಸಲಾಗಿದೆ. ಮಾರಾಟ ಹಾಗೂ ಸಾಗಾಟದಲ್ಲಿ ಆಗುತ್ತಿದ್ದ ತೊಂದರೆಗಳು, ಸರ್ಕಾರದ ಮಟ್ಟದಲ್ಲಿನ ನ್ಯೂನತೆಗಳ ಬಗ್ಗೆ ಸಮಸ್ಯೆಗಳನ್ನು ಆಲಿಸಿ ಅಲ್ಲಿಯೇ ಪರಿಹಾರಗಳನ್ನು ಸೂಚಿಸಲಾಗಿದೆ.

ಮೈಸೂರು ಮೃಗಾಲಯಕ್ಕೆ 3.65 ಕೋಟಿ

ಕೋವಿಡ್ ಸಂದರ್ಭದಲ್ಲಿ ಲಾಕ್ಡೌನ್ ಇದ್ದರಿಂದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಬರುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೈಸೂರಿನ ಮೃಗಾಲಯವೂ ಸಹ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿತ್ತು. ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಸಹ ಲಭ್ಯವಾಗುತ್ತಿರಲಿಲ್ಲ. ಈ ಕಾರಣಕ್ಕೆ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಮೃಗಾಲಯಕ್ಕೆ ವೈಯುಕ್ತಿಕ ನೆರವು ನೀಡಿದ್ದಲ್ಲದೆ, ಯಶವಂತಪುರ ಕ್ಷೇತ್ರದ ಜನತೆ, ಆಪ್ತರು, ಸಚಿವ ಸಹೋದ್ಯೋಗಿಗಳಿಂದ ದೇಣಿಗೆ ಸಂಗ್ರಹಿಸಿ 3.65 ಕೋಟಿ ರೂಪಾಯಿಯನ್ನು ನೀಡಲಾಗಿದೆ. ಇದು ಮೈಸೂರು ಜಿಲ್ಲೆಯ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗಿದೆ.

ರೈತರ ಅಭಿವೃದ್ಧಿಯೇ ನಮ್ಮ ಲಕ್ಷ್ಯ; 20 ಸಾವಿರ ಕೋಟಿ ರೂ. ಸಾಲದ ಗುರಿ

ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಕೊರೋನಾ ಪ್ರಕರಣಗಳು ಉತ್ತಂಗದಲ್ಲಿತ್ತು. ಲಾಕ್ಡೌನ್‌ನಿಂದ ಆರ್ಥಿಕ ಚಟುವಟಿಕೆಗಳು ಸಂಪೂರ್ಣಸ್ತಬ್ಧಗೊಂಡಿದ್ದವು. ಈ ಸಂದರ್ಭದಲ್ಲಿ ರೈತರಿಗೆ ಪ್ರತಿ ವರ್ಷ ನೀಡುತ್ತಿದ್ದ ಸಾಲವನ್ನು ನೀಡುವುದು ಅನುಮಾನ ಎಂಬಷ್ಟರ ಮಟ್ಟಿಗೆ ಆರ್ಥಿಕ ಪರಿಸ್ಥಿತಿ ಇತ್ತು. ಇಷ್ಟಾದರೂ ಮಾನ್ಯ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ, ರಾಜ್ಯದ ಯಾವುದೇ ರೈತರಿಗೆ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ದಿಟ್ಟ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿತು.

2019-20ನೇ ಸಾಲಿನಲ್ಲಿ ರೈತರಿಗೆ ಅಲ್ಪಾವಧಿ, ಮಧ್ಯಮಾವಧಿ ಸೇರಿದಂತೆ 13,577 ಕೋಟಿ ರೂಪಾಯಿ ಬೆಳೆ ಸಾಲವನ್ನು ನೀಡಲಾಗಿತ್ತು. ಆದರೆ, ಕೋವಿಡ್ ಸಂಕಷ್ಟವನ್ನೂ ಮೀರಿ 2020-21ರ ಆರ್ಥಿಕ ವರ್ಷದಲ್ಲಿ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಸಾಲವನ್ನು ವಿತರಣೆ ಮಾಡಬೇಕೆಂದು ನಿರ್ಧರಿಸಲಾಯಿತು. ಇದರನ್ವಯ ಕಾಲ ಕಾಲಕ್ಕೆ ಎಲ್ಲ 21 ಡಿಸಿಸಿ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ಫಲವಾಗಿ 25.67 ಲಕ್ಷ ರೈತರಿಗೆ 17,108 ಕೋಟಿ ರೂಪಾಯಿ ಸಾಲ ನೀಡುವ ಮೂಲಕ ಶೇ.114 ಗುರಿ ಸಾಧನೆಯನ್ನು ಮಾಡಲಾಗಿತ್ತು. ಪ್ರಸಕ್ತ ಸಾಲಿನ (2021-22) ಆರ್ಥಿಕ ವರ್ಷದಲ್ಲಿ 30 ಲಕ್ಷ ರೈತರಿಗೆ 20810 ಕೋಟಿ ರೂಪಾಯಿ ಸಾಲ ನೀಡಿಕೆ ಗುರಿ ಹೊಂದಲಾಗಿದೆ.

ಸ್ವಾವಲಂಬನೆ ಪ್ರತೀಕ “ಆರ್ಥಿಕ ಸ್ಪಂದನ”

ಆತ್ಮನಿರ್ಭರ ಯೋಜನೆಯ ಜೊತೆಗೆ ರಾಜ್ಯ ಸರ್ಕಾರದ ಹಲವು ಯೋಜನೆಗಳನ್ನು ಸೇರಿಸಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಹಕಾರ ಇಲಾಖೆ ಮುಖಾಂತರ ಆರ್ಥಿಕ ಸ್ಪಂದನ ಕಾರ್ಯಕ್ರಮವನ್ನು ಘೋಷಿಸಿತು. ಇದರಡಿ ರಾಜ್ಯದಲ್ಲಿ 39,300 ಕೋಟಿ ರೂಪಾಯಿ ಸಾಲವನ್ನು ನೀಡಿ, ರೈತರು ಹಾಗೂ ಇತರ ಕ್ಷೇತ್ರದ ನಾಗರಿಕರಿಗೆ ಆರ್ಥಿಕ ಚೇತರಿಕೆ ನೀಡಿದ್ದಲ್ಲದೆ, ಸ್ವಾವಲಂಬನೆ ಸಾಧಿಸಲು ಅನುಕೂಲ ಮಾಡಿಕೊಡಲಾಗಿದೆ. ರಾಜ್ಯದ ನಾಲ್ಕು ವಿಭಾಗಗಳಾದ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಯೋಜನೆಗೆ ಚಾಲನೆ ನೀಡಿ, ರಾಜ್ಯದ ಜನತೆಗೆ ಅನುಕೂಲ ಮಾಡಿಕೊಡಲಾಗಿದೆ.

ಕೋಲ್ಡ್ ಸ್ಟೋರೇಜ್‌ಗೆ ಅನುಮತಿ

ರೈತರು ಬೆಳೆದ ಬೆಳೆಗೆ ಬೆಲೆ ಸಿಗುವುದಿಲ್ಲ, ಇದು ನಷ್ಟದ ಕ್ಷೇತ್ರ ಎಂಬ ಆರೋಪ ಯಾವಾಗಲೂ ಕೇಳಿಬರುತ್ತಲೇ ಇದೆ. ಇದಕ್ಕೆ ಹಲವು ಕಾರಣಗಳೂ ಇವೆ. ಬಹುಮುಖ್ಯವಾಗಿ ರೈತರಿಗೆ ತಾವು ಬೆಳೆದ ಬೆಳೆಯನ್ನು ತಮ್ಮಿಚ್ಛೆಯ ದರಕ್ಕೆ ಮಾರಾಟ ಮಾಡಲು ಕಾಯಲು ಸಾಧ್ಯವಾಗುವಂತೆ ಮಾಡುವುದಾಗಿದೆ. ಅಂದರೆ, ಅವರ ಬೆಳೆಯನ್ನು ಕೆಡದಂತೆ ರಕ್ಷಿಸುವ ಮೂಲಕ ಬೆಲೆ ಬಂದಾಗ ಮಾರಾಟ ಮಾಡಲು ಅನುಕೂಲ ಮಾಡಿಕೊಡುವ ಕೆಲಸವಾಗಿ ಪ್ರತಿ ಜಿಲ್ಲೆಗಳ ಅವಶ್ಯಕತೆ ಇದ್ದಲ್ಲಿ ಕೋಲ್ಡ್ ಸ್ಟೋರೇಜ್ ಅನ್ನು ನಿರ್ಮಾಣ ಮಾಡಬೇಕಿತ್ತು. ಈ ಕೆಲಸವನ್ನು ನಮ್ಮ ಸಹಕಾರ ಇಲಾಖೆ ಮಾಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ಮೈಸೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಚಾಮರಾಜನಗರ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಪಿಪಿ ಮಾದರಿಯಲ್ಲಿ ಕೋಲ್ಡ್ ಸ್ಟೋರೇಜ್ ತೆರೆಯಲು ಅನುಮತಿ ನೀಡಲಾಗಿದೆ.

ಇನ್ನಿತರ ಅಭಿವೃದ್ಧಿ ಕಾರ್ಯಗಳು

ರಾಜ್ಯದ 162 ಎಪಿಎಂಸಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು 206 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರಾಜ್ಯ ಉಗ್ರಾಣ ನಿಗಮದಿಂಧ ವೇರ್ ಹೌಸ್ ಗಳಿಗೆ ಆದ್ಯತೆ ನೀಡಲಾಗಿದ್ದು, 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಕ್ಕೆ   ಚಾಲನೆ ನೀಡಲಾಗಿದೆ. ಏರ್ಪೋರ್ಟ್ ರಸ್ತೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೂ (Flower market) ಮಾರುಕಟ್ಟೆ ಸ್ಥಾಪನೆಗೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಆತ್ಮನಿರ್ಭರ ಯೋಜನೆಯಲ್ಲಿ ಪ್ರತಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮಾರ್ಕೆಟಿಂಗ್ ಫೆಡರೇಶನ್ ಮೂಲಕ ಪ್ರಧಾನ ಮಂತ್ರಿ ಜನೌಷಧ ಮಳಿಗೆಯನ್ನು ಪ್ರಾರಂಭಿಸಲು ಚಾಲನೆ ನೀಡಲಾಗಿದೆ. ಸಹಕಾರ ಇಲಾಖೆಯ ವಿವಿಧ ಸಹಕಾರ ಸಂಘಗಳು, ಪತ್ತಿನ ಸಂಘಗಳ ಮತ್ತು ಹಾಲು ಒಕ್ಕೂಟ ಮೂಲಕ 5 ಸಾವಿರ ಉದ್ಯೋಗ ಸೃಷ್ಟಿಗೆ ಕ್ರಮ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣಕ್ಕೆ ಬರುವ ರೈತರು ಹಾಗೂ ವರ್ತಕರಿಗೆ ಅನುಕೂಲವಾಗುವಂತೆ, ರಾಜ್ಯದ ಎಲ್ಲ 162 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಘಟಕವನ್ನು ಅಳವಡಿಸಲಾಗಿದೆ. ರಾಜ್ಯದ ಎಲ್ಲ 162 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.  ರಾಜ್ಯದ ಎಲ್ಲ 162 ಮಾರುಕಟ್ಟೆ ಪ್ರಾಂಗಣದಲ್ಲಿ ಕೇಂದ್ರ ಸರ್ಕಾರದ ನೀತಿಯಂತೆ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರದ ಇ-ನ್ಯಾಮ್ ಪೋರ್ಟಲ್‌ಗೆ ಕಲಬುರಗಿ ಹಾಗೂ ಚಿಂಚೋಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಜೋಡಣೆಗೊಳಿಸಲಾಗಿರುತ್ತದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಪ್ರಾಂಗಣದಲ್ಲಿನ ನಿವೇಶನ, ಗೋದಾಮು, ಅಂಗಡಿ, ಅಂಗಡಿ- ಗೋದಾಮುಗಳ ಹಂಚಿಕೆಯಲ್ಲಿ ರೈತರ ಉತ್ಪಾದಕರ ಸಂಸ್ಥೆಗೆ ಶೇ.10 ರಷ್ಟು ಮೀಸಲಾತಿ ನೀಡಲು ಹಾಗೂ ಶೇ.50ರ ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲು ಆದೇಶ ಹೊರಡಿಸಲಾಗಿದೆ. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹೆಸರುಕಾಳು, ತೊಗರಿ, ಶೇಂಗಾ, ಕಡಲೆಕಾಳು, ಕೊಬ್ಬರಿ ಇತ್ಯಾದಿ ಉತ್ಪನ್ನಗಳನ್ನು 4,44,389 ರೈತರಿಂದ 41,13,694 ಕ್ವಿಂಟಾಲ್‌ಗಳನ್ನು ರೂ.2379.92 ಕೋಟಿ ಮೌಲ್ಯದಲ್ಲಿ ಖರೀದಿಸಿ ಉತ್ಪನ್ನಗಳ ಬೆಲೆ ಕುಸಿತದ ಸಂಕಷ್ಟದ ಸಂದರ್ಭದಲ್ಲಿ ರೈತರ ನೆರವಿಗೆ ಸರ್ಕಾರ ಧಾವಿಸಿದೆ.

Leave a Reply

comments

Related Articles

error: