ಮೈಸೂರು

ವಿಶ್ರಾಂತ ಕುಲಪತಿ ಪ್ರೊ.ಎಚ್‌.ಜೆ.ಲಕ್ಕಪ್ಪಗೌಡ  ನಿಧನ

ಮೈಸೂರು,ಜು.27:-   ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಚ್‌.ಜೆ.ಲಕ್ಕಪ್ಪಗೌಡ   ಅವರು ನಿನ್ನೆ ಸಂಜೆ ನಗರದ ತಮ್ಮ ಮನೆಯಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಅವರಿಗೆ 83ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.  ಇಂದು  ಮಧ್ಯಾಹ್ನ  ಒಂದು ಗಂಟೆಗೆ  ಕುವೆಂಪು ನಗರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ, ಕರ್ನಾಟಕ ರಾಜ್ಯ ಭಾಷಾ ಆಯೋಗದ ಸದಸ್ಯರಾಗಿ, ಕರ್ನಾಟಕದ ಜಾನಪದ ಮತ್ತು ಯಕ್ಷಗಾನ ಆಕಾಡೆಮಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕನ್ನಡ ಜಾನಪದ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ದಕ್ಷಿಣ ಭಾರತದ ಭಾಷೆಗಳ ಜಾನಪದ ಅಧ್ಯಯನ ಕೇಂದ್ರದ ಅಧ್ಯಕ್ಷರಾಗಿದ್ದರು.

ಅಕಾಡೆಮಿ ಅಧ್ಯಕ್ಷರಾಗಿದ್ದಾಗಲೇ ಅಜ್ಞಾತ ಕಲಾವಿದರಿಗೆಕರ್ನಾಟಕ ಜಾನಪದ ರತ್ನಪ್ರಶಸ್ತಿ ನೀಡುವ ಕಾರ್ಯಕ್ರಮವನ್ನು ಆರಂಭಿಸಿದ್ದರು. ಕುಲಪತಿಯಾಗಿದ್ದಾಗ ಅಧ್ಯಯನ ಪೀಠಗಳನ್ನು ಸ್ಥಾಪಿಸಿದ್ದರು. ಸ್ನಾತಕೋತ್ತರ ಪದವಿ ಸಂಯೋಜಿತ ಪಿಎಚ್‌.ಡಿ ಕೋರ್ಸ್ಗಳನ್ನೂ ಆರಂಭಿಸಿದ್ದರು. ಪ್ರಾಧಿಕಾರದ ಅಧ್ಯಕ್ಷರಾಗಿ ಕಾಲೇಜಿನಿಂದ ಕಾಲೇಜಿಗೆ, ಮನೆಯಿಂದ ಮನೆಗೆ ಪುಸ್ತಕ ಯಾತ್ರೆ, ಪುಸ್ತಕ ಸಂಸ್ಕೃತಿ, ಸಂವಾದ, ಕನ್ನಡ ಪುಸ್ತಕ ವೈವಿಧ್ಯ, ಕನ್ನಡದಲ್ಲಿ ವಿಜ್ಞಾನ ಪುಸ್ತಕಗಳು, ವಿಚಾರ ಸಾಹಿತ್ಯ, ಕನ್ನಡ ಪುಸ್ತಕ ಸಂವಹನ ಮಾಧ್ಯಮಗಳು ಎಂಬ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದ್ದರು.

ಕಾವ್ಯ, ಸಣ್ಣಕತೆ, ನಾಟಕ, ಜೀವನ ಚರಿತ್ರೆ, ಸಾಹಿತ್ಯ ವಿಮರ್ಶೆ, ಜಾನಪದ, ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿ ಅವರು ಗಮನ ಸೆಳೆಯುವಂಥ ಕೃತಿಗಳನ್ನು ರಚಿಸಿದ್ದರು. ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿಯನ್ನು ಆರಂಭಿಸಿದ್ದ ಅವರು ಹಾಸನ, ಮೈಸೂರು, ಮಂಗಳೂರು, ಶಿವಮೊಗ್ಗದಲ್ಲಿ ಬೋಧನೆಯಿಂದ ಗಮನ ಸೆಳೆದಿದ್ದರು.

ಮೈಸೂರು ಸರ್ಕಾರದ ದೇವರಾಜ ಬಹದ್ದೂರ್ ಪ್ರಶಸ್ತಿ, ವಿಶ್ವಮಾನವ ಸಾಹಿತ್ಯ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಕುರಿತು ಇಂಗ್ಲಿಷ್ನಲ್ಲೂ ಕೃತಿಗಳನ್ನು ರಚಿಸಿದ್ದರು. ಅವರನ್ನು ಕುರಿತುಹೊನ್ನಾರುಅಭಿನಂದನ ಗ್ರಂಥ ಪ್ರಕಟವಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: