ಮೈಸೂರು

ನಿಸ್ವಾರ್ಥ ಸೇವೆಯನ್ನು ಸಮಾಜ ಎಂದಿಗೂ ಮರೆಯುವುದಿಲ್ಲ : ಡಾ. ಪಿ.ಆರ್.ಎಸ್. ಚೇತನ್

ಮೈಸೂರು,ಜು.27:- ನಿಸ್ವಾರ್ಥ ಸೇವೆಯನ್ನು ಸಮಾಜ ಎಂದಿಗೂ ಮರೆಯುವುದಿಲ್ಲ ಎಂದು ಕರ್ನಾಟಕ ಸಿವಿಲ್ ಡಿಫೆನ್ಸ್ ಕೋರ್‍ ನ ಹೆಚ್ಚುವರಿ ಕಮ್ಯಾಂಡಿಂಗ್ ಅಧಿಕಾರಿಗಳಾದ ಡಾ. ಪಿ.ಆರ್.ಎಸ್. ಚೇತನ್‍ ಅವರು ಹೇಳಿದರು.

ಸೋಮವಾರ ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ   ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನವಾರಿಧಿ-34’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ  “ನಮ್ಮ ಶಕ್ತಿಯೇ ನಮ್ಮ ಸಾಧನೆ” ವಿಷಯ ಕುರಿತು ಉಪನ್ಯಾಸ ನೀಡಿದರು.  ಭಾರತೀಯರು ಎಂದಿಗೂ ಮರೆಯದ, ಯುವಕರಲ್ಲಿ ಕಿಚ್ಚನ್ನು ಹೆಚ್ಚಿಸುವಂತಹ ದಿನ ಕಾರ್ಗಿಲ್ ವಿಜಯ್ ದಿವಸ. ಕಾರ್ಗಿಲ್ ವೀರಯೋಧರ ನಿಸ್ವಾರ್ಥ ತ್ಯಾಗವನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಎತ್ತರದ ಗುಡ್ಡಗಾಡು ಪ್ರದೇಶಗಳನ್ನು ಹೊಂದಿರುವ ಕಾರ್ಗಿಲ್ ಪ್ರದೇಶದಲ್ಲಿ ನವಯುವಕರಾದ ಮನೋಜ್‍ ಕುಮಾರ್ ಪಾಂಡೆ ಮತ್ತು ಸೌರಭ್ ಕಾಲಿಯಾರಂತಹ ಯುವಕರ ನೇತೃತ್ವದಲ್ಲಿ ಸೈನಿಕರು ಹೋರಾಡಿ ದೇಶಕ್ಕೆ ಜಯವನ್ನು ತಂದಿತ್ತರು. ಇಂತಹ ಧೈರ್ಯ-ಶೌರ್ಯ ಎಲ್ಲ ಭಾರತೀಯ ತರುಣರಲ್ಲೂ ಮೂಡಬೇಕು. ದೇಶದ ಬಗ್ಗೆ ಎಲ್ಲರೂ ಕಾಳಜಿ ಹೊಂದಬೇಕು. ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಂತಹ ಸಂದರ್ಭದಲ್ಲಿ ಜೀವನ್ಮರಣದ ನಡುವೆ ಹೋರಾಡಿ ನಾವು ಸಹ ಜನರ ರಕ್ಷಣೆ ಮಾಡಿದ್ದೇವೆ. ಜೀವನದಲ್ಲಿ ಸಣ್ಣಸಣ್ಣ ಸೋಲುಗಳು ಎದುರಾಗುತ್ತವೆ. ಅವುಗಳಿಗೆ ಎದೆಗುಂದದೆ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ಎತ್ತರದ ಗುರಿಯಿರಬೇಕು. ಅದನ್ನು ದೃಢನಿಶ್ಚಯದಿಂದ ಸಾಧಿಸಲು ಸತತ ಪ್ರಯತ್ನವಿರಬೇಕು. ಬಡತನದಲ್ಲಿ ಹುಟ್ಟಿಬೆಳೆದವರು ಇಂದು ದೊಡ್ಡದೊಡ್ಡ ಅಧಿಕಾರಿಗಳಾಗಿದ್ದಾರೆ.  ನಮ್ಮಲ್ಲಿ ಏನೂ ಇಲ್ಲ ಎಂದು ಚಿಂತಿಸುವುದರ ಬದಲು, ಇರುವುದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಯೋಚಿಸಬೇಕು. ನಾಸಾ, ಗೂಗಲ್‍ನಂತಹ ಕಂಪನಿಗಳಲ್ಲಿ ಭಾರತೀಯರೇ ಹೆಚ್ಚಾಗಿರುವುದೇ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿ. ನಮ್ಮಲ್ಲಿ ನಾವು ನಂಬಿಕೆಯನ್ನು ಬೆಳೆಸಿಕೊಳ್ಳಬೇಕು. ಕೆಳಗೆ ಬಿದ್ದಾಗ ಫಿನಿಕ್ಸ್‍ ನಂತೆ ಏಳಬೇಕು. ದೇಶಕ್ಕಾಗಿ ದುಡಿಯುವ ಪ್ರತಿಜ್ಞೆ ಮಾಡಬೇಕು. ಮಹಿಳೆಯರಿಗೂ ಇಂದು ಸೈನ್ಯದಲ್ಲಿ ಸೇರಲು ಅವಕಾಶ ನೀಡಲಾಗಿದೆ. ತರುಣರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಿ ದೇಶಸೇವೆ ಮಾಡಬೇಕು ಎಂದು ತಿಳಿಸಿದರು.

ಉಪನ್ಯಾಸದ ನಂತರ ವೀಕ್ಷಕರ ಆಯ್ದ ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಆನ್‍ ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಜಿಜ್ಞಾಸುಗಳು, ಸಾರ್ವಜನಿಕರು ಭಾಗವಹಿಸಿದ್ದರು.  ಸುರೇಶ್ ಪ್ರಾರ್ಥಿಸಿದರು.   ಎಸ್. ನಾಗೇಂದ್ರ ಕಾರ್ಯಕ್ರಮ ನಿರ್ವಹಿಸಿದರು.

ಪ್ರತಿ ಸೋಮವಾರವೂ ನಡೆಯುವ ಈ ಉಪನ್ಯಾಸದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಧರ್ಮ, ಅಧ್ಯಾತ್ಮ, ಯೋಗ, ಆರೋಗ್ಯ, ಜೀವನಶೈಲಿ ಮುಂತಾದ ವಿಷಯಗಳು ಮತ್ತು ಪ್ರಚಲಿತ ವಿದ್ಯಮಾನಗಳನ್ನು ಕುರಿತು ದೇಶ ಮತ್ತು ವಿದೇಶದ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ಆನ್‍ಲೈನ್ ಮೂಲಕ ನಡೆಯುವ ಈ ಉಪನ್ಯಾಸ ಕಾರ್ಯಕ್ರಮವು ಸಾಕಷ್ಟು ಜನಪ್ರಿಯಗೊಂಡಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: