ದೇಶಪ್ರಮುಖ ಸುದ್ದಿ

ದೆಹಲಿಯಲ್ಲಿ ಸಿಎಂ ಮಮತಾ ಬ್ಯಾನರ್ಜಿ: ಪ್ರಧಾನಿ ಮೋದಿ ಭೇಟಿ ಸಾಧ್ಯತೆ

ನವದೆಹಲಿ,ಜು.27-ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರ ರಾಜಧಾನಿ ದೆಹಲಿ ತಲುಪಿದ್ದು, ಇಂದು (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಪಶ್ಚಿಮ ಬಂಗಾಳಕ್ಕೆ ಅಗತ್ಯವಿರುವಷ್ಟು ಕೋವಿಡ್‌ ಲಸಿಕೆ ಪೂರೈಸಬೇಕು. ಲಸಿಕೆ ಪೂರೈಕೆಗೆ ತಡೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮಮತಾ ಅವರು ಪ್ರಧಾನಿಗೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಜತೆಗೆ, ಕೇಂದ್ರದಿಂದ ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಹಣಕಾಸು ನೆರವು ನೀಡುವಂತೆ ಒತ್ತಾಯಿಸುವ ಸಾಧ್ಯತೆ ಇದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮೇ 28ರಂದು ಪಶ್ಚಿಮ ಬಂಗಾಳದ ಕಲೈಕುಂಡಾ ಏರ್‌ಫೋರ್ಸ್‌ ಸ್ಟೇಷನ್‌ನಲ್ಲಿ ಮೋದಿಯವರನ್ನು ಮಮತಾ ಕೆಲವು ನಿಮಿಷಗಳ ಕಾಲ ಭೇಟಿ ಮಾಡಿದ್ದರು. ಚಂಡಮಾರುತದಿಂದ ಸಂಭವಿಸಿದ ಹಾನಿ ಕುರಿತು ಪರಿಶೀಲನೆಗೆ ಪ್ರಧಾನಿಯವರು ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾಗ ಉಭಯ ನಾಯಕರೂ ಭೇಟಿಯಾಗಿದ್ದರು.

ಆದರೆ, ಬಳಿಕ ಪ್ರಧಾನಿಯವರು ನಡೆಸಿದ ಸಭೆಗೆ ಮಮತಾ ಹಾಜರಾಗಿರಲಿಲ್ಲ. ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡ ಪ್ರಧಾನಿ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು. ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂದೋಪಾಧ್ಯಾಯ ಅವರನ್ನು ಕೇಂದ್ರ ಸರ್ಕಾರವು, ಕೇಂದ್ರ ಸೇವೆಗೆ ನೇಮಿಸಿ ಆದೇಶಿಸಿತ್ತು. ಆದರೆ, ಬಂದೋಪಾಧ್ಯಾಯ ಅವರನ್ನು ಕೇಂದ್ರದ ಸೇವೆಗೆ ಕಳುಹಿಸಿಕೊಡಲಾಗದು ಎಂದು ಮಮತಾ ಬ್ಯಾನರ್ಜಿ ಪ್ರಧಾನಿಗೆ ಪತ್ರ ಬರೆದಿದ್ದರು. ಬಳಿಕ ಸರ್ಕಾರಿ ಸೇವೆಗೆ ಬಂದೋಪಾಧ್ಯಾಯ ರಾಜೀನಾಮೆ ನೀಡಿದ್ದು, ಅವರನ್ನು ಸಲಹೆಗಾರನನ್ನಾಗಿ ಮಮತಾ ನೇಮಕ ಮಾಡಿಕೊಂಡಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: