ಮೈಸೂರು

ಮೈಸೂರು ವಿವಿ ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಕೇಂದ್ರವಾಗಿದೆ : ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ

ಮೈಸೂರು,ಜು.27:-  ಮೈಸೂರು ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ಆತ್ಮವಿಶ್ವಾಸ ತುಂಬುವ ಕೇಂದ್ರವಾಗಿದೆ ಎಂದು ಇನ್ಫೋಸಿಸ್‌ ನ ಮುಖ್ಯಸ್ಥೆ ಸುಧಾಮೂರ್ತಿ ಮೈಸೂರು ವಿವಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯ  105 ವರ್ಷ ಪೂರೈಸಿದ್ದು,  ಮೈಸೂರು ವಿಶ್ವವಿದ್ಯಾನಿಲಯ ಸಂಸ್ಥಾಪನಾ ದಿನಾಚರಣೆ  ಪ್ರಯುಕ್ತ ವಿಶ್ವವಿದ್ಯಾಲಯ ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಭಾವಚಿತ್ರಕ್ಕೆ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಪುಷ್ಪಾರ್ಚನೆಗೈದು ಗೌರವ ಸಮರ್ಪಣೆ ಮಾಡಿದರು.

ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಮೈಸೂರು ವಿಶ್ವವಿದ್ಯಾಲಯದ ಕಾರ್ಯಸೌಧಲ್ಲಿ ಹಮ್ಮಿಕೊಳ್ಳಲಾದ ವರ್ಚುವಲ್ ಕಾರ್ಯಕ್ರಮದಲ್ಲಿ ಇನ್ಫೋಸಿಸ್‌ ನ ಮುಖ್ಯಸ್ಥೆ ಸುಧಾಮೂರ್ತಿ ಭಾಗವಹಿಸಿದ್ದರು. ಮೈಸೂರು ವಿಶ್ವವಿದ್ಯಾಲಯದ ಕುರಿತು    ಇನ್ಫೋಸಿಸ್‌ ನ ಮುಖ್ಯಸ್ಥೆ ಸುಧಾಮೂರ್ತಿ ಅವರು ಮೆಚ್ಚುಗೆಯ ಮಾತುಗಳನ್ನು ಆಡಿ ಆನ್ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ನಾಲ್ವಡಿಯವರ ಗುಣಗಾನ ಮಾಡಿದರು.

ಮೈಸೂರು ವಿವಿಯ ಕಾರ್ಯವೈಖರಿಗೆ ಸುಧಾಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡದ ಉಳಿವಿಗೆ ಶ್ರಮಿಸಿದವರು ಮೈಸೂರು ಮಹಾರಾಜರು. ಅದರಂತೆಯೇ ವಿಶ್ವವಿದ್ಯಾಲಯವನ್ನು  ಸ್ಥಾಪಿಸಿ ಅದನ್ನು ಬೆಳೆಸಿ, ನಮಗೆಲ್ಲಾ ದಾರಿ ದೀಪವಾದವರು ಮಹಾರಾಜರು. ನಮಗೂ ಮೈಸೂರು ವಿಶ್ವವಿದ್ಯಾಲಯ  ಡಾಕ್ಟರೇಟ್ ನೀಡಿ ಗೌರವಿಸಿದೆ. ನಮ್ಮ ಮೈಸೂರು ವಿಶ್ವವಿದ್ಯಾಲಯವು ಬಹಳಷ್ಟು ಜನರಿಗೆ ದಾರಿ ದೀಪವಾಗಿದೆ.   ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ಆತ್ಮವಿಶ್ವಾಸ ತುಂಬುವ ಕೇಂದ್ರವಾಗಿದೆ. ಉತ್ತಮವಾದ ವ್ಯಕ್ತಿತ್ವ ರೂಪಿಸುವ ಕೆಲಸವನ್ನ ಮೈಸೂರು ವಿಶ್ವವಿದ್ಯಾಲಯ ಮಾಡುತ್ತಿದೆ. ಮೈಸೂರು ವಿಶ್ವವಿದ್ಯಾಲಯ ಇಲ್ಲದಿದ್ದರೆ ನಾರಾಯಣ ಮೂರ್ತಿಯವರು ಇನ್ಫೋಸಿಸ್ ಕಟ್ಟುತ್ತಿರಲಿಲ್ಲ ಎಂದರು.

ಮೈಸೂರು ವಿಶ್ವವಿದ್ಯಾಲಯ ನಮಗೆ ಧೈರ್ಯ ಕೊಟ್ಟಿತು. ನಾನು ಒಂದು ಸಣ್ಣ ಗ್ರಾಮದಿಂದ ಬಂದವಳು.ನಾನು ಉತ್ತರ ಕರ್ನಾಟಕದವಳು, ನಮ್ಮಂತವರಿಗೆಲ್ಲಾ ಜ್ಞಾನ ತುಂಬುವ ಕೇಂದ್ರಗಳೇ ವಿಶ್ವವಿದ್ಯಾಲಯಗಳು.  ನಾನು ಉತ್ತರ ಕರ್ನಾಟಕದಲ್ಲೇ ವ್ಯಾಸಂಗ ಮಾಡಿರಬಹುದು. ಆದರೆ ಮೈಸೂರು ವಿಶ್ವವಿದ್ಯಾಲಯದ  ಸಂಪನ್ಮೂಲ ವ್ಯಕ್ತಿಗಳನ್ನು ಅನುಸರಿಸುವ ಪ್ರಯತ್ನ ಮಾಡಿದ್ದು ಬಹಳಷ್ಟಿದೆ. ಇದೆಲ್ಲವೂ ನಮ್ಮ ಸಾಧನೆಗೆ ಸಹಕಾರವಾಗುತ್ತದೆ ಎಂದರು.

ಸಂಸ್ಥಾಪನಾ ದಿನಾಚರಣೆಯಲ್ಲಿ ಕುಲಸಚಿವ ಶಿವಪ್ಪ, ಕೇಂದ್ರೀಯ ಕೃಷಿ ವಿವಿಯ ಅಧ್ಯಕ್ಷ ಅಯ್ಯಪ್ಪನ್ ಸೇರಿದಂತೆ ಹಲವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: