ಮೈಸೂರು

ಮದುವೆಗೆಂದು ಮನೆಯಲ್ಲಿ ತಂದಿರಿಸಿದ್ದ ಸುಮಾರು 35ಲಕ್ಷರೂ.ಮೌಲ್ಯದ ನಗ-ನಗದು ಕಳುವು

ಮೈಸೂರು,ಜು.28:- ಮದುವೆಯ ಖರ್ಚಿಗಾಗಿ ಮನೆಯಲ್ಲಿ ತಂದಿರಿಸಿದ್ದ ಇಪ್ಪತ್ತೈದು ಲಕ್ಷರೂಪಾಯಿ ನಗದು ಹಾಗೂ ಚಿನ್ನ ಬೆಳ್ಳಿಯ ಸಾಮಾಗ್ರಿಗಳು ಸೇರಿದಂತೆ ಒಟ್ಟು ಸುಮಾರು 35ಲಕ್ಷರೂ ಸ್ವತ್ತುಗಳನ್ನು ಕಳ್ಳರು ಎಗರಿಸಿರುವ ಘಟನೆ ದಟ್ಟಗಳ್ಳಿಯಲ್ಲಿ ನಡೆದಿದೆ.

ದಟ್ಟಗಳ್ಳಿಯ ಸಂಗಮ್ ಚೌಲ್ಟ್ರಿ ಬಳಿಯ ನಿವಾಸಿ ಕ್ವಾರಿ ಕ್ರಷರ್ ಮಾಲಿಕ ಮನು ಕುಮಾರ್ ಎಂಬವರೇ ಇಪ್ಪತ್ತೈದು ಲಕ್ಷರೂ.ವನ್ನು ವಿವಾಹದ ಸಮಾರಂಭದ ಖರ್ಚಿಗೆಂದು ಮನೆಯಲ್ಲಿ ತಂದಿರಿಸಿದ್ದರು. ಅದರ ಜೊತೆ ಚಿನ್ನ ಮತ್ತು ಬೆಳ್ಳಿಯ ಸಾಮಾಗ್ರಿಗಳನ್ನು ಕೂಡ ತಂದಿರಿಸಿದ್ದರು. ಇದೀಗ ಕಳುವಾದ ನಗ-ನಗದು ಮೌಲ್ಯ ಸುಮಾರು 35ಲಕ್ಷರೂ.ಗಳೆಂದು ಹೇಳಲಾಗುತ್ತಿದೆ. ಅದನ್ನು ತಿಳಿದ ಯಾರೋ ಈ ಕೃತ್ಯ ನಡೆಸಿರಬೇಕೆಂಬ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕುವೆಂಪುನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಷಣ್ಮುಗಂ, ಡಿಸಿಪಿ ಗೀತಾ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಡಿಸಿಪಿ ಗೀತಾ ಪ್ರಸನ್ನ ಮಾತನಾಡಿ ಮನೆಯಲ್ಲಿ ಅಧಿಕ ಮೌಲ್ಯದ ನಗ ಹಾಗೂ ನಗದನ್ನು ಇರಿಸಿಕೊಳ್ಳದಿರುವಂತೆ ಸಾರ್ವಜನಿಕರಲ್ಲಿ ಎಷ್ಟು ವಿನಂತಿಸಿದರೂ ಕೇಳುತ್ತಿಲ್ಲ. ಲಾಕ್ ಡೌನ್ ತೆರವಾದ ಬಳಿಕ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಮಳೆಗಾಲವಾದ್ದರಿಂದ ಶ್ವಾನದಳ, ಹಾಗೂ ಬೆರಳಚ್ಚು ತಜ್ಞರಿಗೂ ಪತ್ತೆ ಹಚ್ಚುವುದು ಕಷ್ಟವಾಗಲಿದೆ. ಗುರುತುಗಳು ನಾಶವಾಗುವ ಸಂಭವವೇ ಹೆಚ್ಚು. ಜನತೆ ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕು. ಹತ್ತಿರದ ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲಿಸಲಾಗುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ವಿಚಾರಣೆಗೊಳಪಡಿಸಲಾಗುವುದು. ಕಳ್ಳತನ ಕೃತ್ಯ ಯಾರೋ ಪರಿಚಯಸ್ಥರೇ ಮಾಡಿರಬಹುದೆಂಬ ಅನುಮಾನ ಮೂಡುತ್ತಿದೆ ಎಂದರು.

ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: