ಮೈಸೂರು

ಕುಕ್ಕರಹಳ್ಳಿ ಕೆರೆಗೆ ನೀರು ಒದಗಿಸುವ ಮೂಲಗಳಿಂದ ಅಡೆತಡೆಗಳ ಕುರಿತು ಪರಿಶೀಲಿಸಬೇಕಿದೆ : ಡಿ.ರಂದೀಪ್

ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಪಡಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ಪರಿಸರ ಪ್ರೇಮಿಗಳ ವಿರೋಧದಿಂದ ತಜ್ಞರ ಸಮಿತಿಯನ್ನು ನೇಮಿಸಿ ಅವರಿಂದ ಪರಿಶೀಲನೆ ನಡೆಸುವಂತೆ ತಿಳಿಸಲಾಗಿತ್ತು. ಇದೀಗ ತಜ್ಞರ ವರದಿ ಕೈ ಸೇರಿದ್ದು, ಅವರ ವರದಿಯ ಆಧಾರದ ಮೇಲೆ ಕಾರ್ಯತಂತ್ರ ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು 4.14ಕಿ.ಮೀ ಸುತ್ತಳತೆ ಇದ್ದು, ಜಾಗಿಂಗ್ ಮಾಡುವವರಿಗೆ, ನಡೆದಾಡುವವರಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಕುಕ್ಕರಹಳ್ಳಿಕೆರೆಗೆ ಹರಿದು ಬರುವ ನೀರಿನ ಮೂಲದ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಕುಕ್ಕರಹಳ್ಳಿ ಕೆರೆಗೆ ನೀರು ಒದಗಿಸುವ ಮೂಲಗಳಿಂದ ಅಡೆತಡೆಗಳ ಕುರಿತು ಪರಿಶೀಲಿಸಬೇಕಾಗುತ್ತದೆ. ಕೆರೆಗೆ ಹರಿದುಬರುತ್ತಿದ್ದ ಕೊಳಚೆ ನೀರನ್ನು ಬೇರೆ ಕಡೆಗೆ ತಿರುಗಿಸಿರುವುದರಿಂದ ಕೆರೆಯ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿದುಬಂದಿದ್ದು, ಈ ಕೊಳಚೆ ನೀರನ್ನು ಎಸ್ ಟಿ.ಪಿ ಮೂಲಕ ಶುದ್ಧೀಕರಿಸಿ ಕೆರೆಗೆ ಬಿಡುವುದರಿಂದಾಗುವ ಪರಿಣಾಮಗಳ ಕುರಿತು ಯೋಚಿಸಬೇಕಾಗಲಿದೆ ಎಂದರು.

ಕೆರೆಯಲ್ಲಿನ ಹೂಳನ್ನು ತೆಗೆಯಲು ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಹೂಳು ತೆಗೆಯುವುದರಿಂದಾಗುವ ಪರಿಣಾಮಗಳ ಕುರಿತು ವಾಸ್ತವಾಂಶಗಳನ್ನು ಗಮನದಲ್ಲಿಟ್ಟುಕೊಂಡು ಸಲಹೆ ನೀಡಲಾಗುವುದು. ಹೂಳು ತೆಗೆಯುವ ಜಾಗದ ಕುರಿತು ಪರಿಶೀಲನೆ ನಡೆಸಬೇಕಾಗಲಿದೆ. ಹೂಳು ತೆಗೆಯುವ ಪ್ರಮಾಣದ ಕುರಿತೂ ಪರಿಶೀಲಿಸಬೇಕಾಗಲಿದೆ. ಹೂಳು ತೆಗೆಯುವುದರಿಂದ ಜಲಚರ, ಸಸ್ಯ, ಪ್ರಾಣಿಗಳ ಮೇಲಾಗುವ ಪರಿಣಾಮಗಳ ಕುರಿತೂ ಪರಿಶೀಲಿಸಬೇಕಾಗಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕುಕ್ಕರಹಳ್ಳಿ ಕೆರೆಯ ಅಭಿವೃದ್ಧಿಗೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: