ಕರ್ನಾಟಕಪ್ರಮುಖ ಸುದ್ದಿ

ಭಿನ್ನಮತ ಸೂತ್ರಧಾರ ಸಂತೋಷ್ ಮೇಲೆ ಯಡಿಯೂರಪ್ಪ ಕೆಂಗಣ್ಣು : ಬೆಂಬಲಿಗನ ವಜಾ!

ಬೆಂಗಳೂರು : ಈಶ್ವರಪ್ಪ ನೇತೃತ್ವದಲ್ಲಿ ನಡೆದ ಭಿನ್ನಮತ ಸಮಾವೇಶವನ್ನು ಸಂಘಟಿಸಲು ಪಕ್ಷದ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಬಿಜೆಪಿ ಕಚೇರಿಯ ಸಿಂಬದ್ದಿಯೊಬ್ಬರನ್ನು ಯಡಿಯೂರಪ್ಪ ವಜಾ ಮಾಡಿದ್ದಾರೆ.

ಪಕ್ಷದ ಬೆಂಗಳೂರು ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ್ ಎಂಬಾತನನ್ನು ಯಡಿಯೂರಪ್ಪ ವಜಾ ಗೊಳಿಸಿದ್ದಾರೆ.

ಈತನು ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್. ಸಂತೋಷ್ ಅವರ ಬೆಂಬಲಿಗ ಎನ್ನಲಾಗಿದ್ದು, ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವನು.

ಸಂತೋಷ್ ಸೂಚನೆಯಂತೆ ಭಿನ್ನಮತ ಸಮಾವೇಶದ ಡ್ರಾಫ್ಟ್ ತಯಾರಿ ಪಕ್ಷದ ನಾಯಕರಿಗೆ ಇ-ಮೇಲ್ ಮಾಡಿದ ಆರೋಪದ ಮೇಲೆ ಮಲ್ಲಿಕಾರ್ಜುನ್ ಅವರನ್ನು ಯಡಿಯೂರಪ್ಪ ವಜಾ ಮಾಡಿದ್ದಾರೆ. ನಿನ್ನೆ ಸಂಜೆಯೇ ಮಲ್ಲಿಕಾರ್ಜುನನ್ನು ವಜಾಗೊಳಿಸಲು ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಬಿ.ಎಲ್. ಸಂತೋಷ್ ಆರ್‍ಎಸ್‍ಎಸ್‍ ಹಿನ್ನೆಲೆಯವರಾಗಿದ್ದು, ಪಕ್ಷದ ಒಳಗೆ ಸಂತೋಷ್ ಜೀ ಎಂದೇ ಹೆಸರಾಗಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಸಂತೋಷ್ ಸಕ್ರಿಯವಾಗಿ ಪಕ್ಷದ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದರು.

ಇದೀಗ ಈಶ್ವರಪ್ಪ ಜೊತೆಗೆ ಭಿನ್ನಮತಕ್ಕೆ ಸಹಕರಿಸಿದ ಕಾರಣ ಸಂತೋಷ್ ಮೇಲೆ ಯಡಿಯೂರಪ್ಪ ಸಿಟ್ಟಿಗೆದ್ದಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಲು ಹೈಮಾಂಡ್ ಮೇಲೆ ಒತ್ತಡ ತರಲಿದ್ದಾರೆ ಎನ್ನಲಾಗಿದೆ.

ಇದರ ಮೊದಲ ಕ್ರಮವಾಗಿ 10 ವರ್ಷದಿಂದ ಬಿಜೆಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನನನ್ನು ವಜಾಗೊಳಿಸಿದ್ದಾರೆ ಎಂದು ಯಡಿಯೂರಪ್ಪ ಬೆಂಬಲಿಗರು ತಿಳಿಸಿದ್ದಾರೆ.

(ಎನ್.ಬಿ.ಎನ್)

Leave a Reply

comments

Related Articles

error: