
ಕ್ರೀಡೆಪ್ರಮುಖ ಸುದ್ದಿ
ಶ್ರೀಲಂಕಾ ತೊರೆದ ಟೀಂ ಇಂಡಿಯಾ: ಕ್ವಾರಂಟೈನ್ನಲ್ಲೇ ಉಳಿದ ಕೃಣಾಲ್ ಪಾಂಡ್ಯ
ಕೊಲಂಬೊ,ಜು.30-ಲಂಕಾ ವಿರುದ್ಧದ ಏಕದಿನ ಮತ್ತು ಟಿ-20 ಪಂದ್ಯಗಳ ಸರಣಿಗಳ ಪೂರ್ಣಗೊಳಿಸಿದ ನಂತರ ಟೀಂ ಇಂಡಿಯಾ ಶ್ರೀಲಂಕಾದಿಂದ ಭಾರತಕ್ಕೆ ವಾಪಾಸ್ ಆಗುತ್ತಿದ್ದಾರೆ. ಆದರೆ ಕೋವಿಡ್ ಸೋಂಕಿಗೊಳಗಾಗಿರುವ ಆಲ್ ರೌಂಡರ್ ಕೃಣಾಲ್ ಪಂಡ್ಯಾ ಕ್ವಾರಂಟೈನ್ ನಲ್ಲೇ ಉಳಿದಿದ್ದಾರೆ.
ಒಂದು ವಾರದ ಕಡ್ಡಾಯ ಕ್ವಾರಂಟೈನ್ ಅವಧಿಯ ಕಾರಣದಿಂದಾಗಿ ಕೃಣಾಲ್ ಮಾತ್ರ ಸದ್ಯಕ್ಕೆ ಶ್ರೀಲಂಕಾದಲ್ಲಿ ಉಳಿಯಬೇಕಾಗುತ್ತದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾರದ ನಂತರ, ಅವರ ಆರ್ಟಿ-ಪಿಸಿಆರ್ ವರದಿಯಲ್ಲಿ ನೆಗೆಟಿವ್ ಬಂದರೆ ಮಾತ್ರ ಅವರನ್ನು ವಾಪಸ್ ತೆರಳಲು ಅನುಮತಿಸಲಾಗುತ್ತದೆ. ಪ್ರಸ್ತುತ, ಅವರು ತಮ್ಮ ಕ್ವಾರಂಟೈನ್ನ ನಾಲ್ಕನೇ ದಿನದಲ್ಲಿದ್ದಾರೆ. ಕೋವಿಡ್ ನೆಗೆಟಿವ್ ಬಂದಿರುವ ಉಳಿದ ಆಟಗಾರರೆಲ್ಲರೂ ನಿರ್ಗಮಿಸಲು ಮುಕ್ತರಾಗಿದ್ದಾರೆ ಎಂದು ಅವರು ಹೇಳಿದರು.
ಕೃಣಾಲ್, ಕೊರೊನಾ ಸೋಂಕಿಗೆ ಒಳಗಾದ ಬಳಿಕ ತಂಡದ ಹಲವು ಆಟಗಾರರು ಕ್ವಾರಂಟೈನ್ನಲ್ಲಿದ್ದರು. ಈ ಮಧ್ಯೆಯೇ ನಡೆದ ಟಿ-20 ಸರಣಿಯಲ್ಲಿ ಭಾರತ 1-2 ಅಂತರದಿಂದ ಸೋತಿತು.
ಇಂಗ್ಲೆಂಡ್ನಲ್ಲಿರುವ ಭಾರತ ತಂಡ ಸೇರಬೇಕಿರುವ ಸೂರ್ಯಕುಮಾರ್ ಯಾದವ್ ಮತ್ತು ಪೃಥ್ವಿ ಶಾ ಅವರು ಶ್ರೀಲಂಕಾ ರಾಜಧಾನಿಯಿಂದಲೇ ಹೊರಡುತ್ತಾರೆಯೇ ಅಥವಾ ಚಾರ್ಟರ್ ವಿಮಾನದಲ್ಲಿ ತಂಡದ ಜೊತೆ ಭಾರತಕ್ಕೆ ವಾಪಸ್ ಬರುತ್ತಿದ್ದಾರೆಯೇ ಎಂಬುದು ಖಚಿತಪಟ್ಟಿಲ್ಲ. (ಏಜೆನ್ಸೀಸ್, ಎಂ.ಎನ್)