Uncategorized

ತೆಲುಗು ನಟ ಪೊಸಾನಿ ಕೃಷ್ಣ ಮುರಳಿಗೆ ಕೋವಿಡ್ ಪಾಸಿಟಿವ್

ಹೈದರಾಬಾದ್,ಜು.31- ತೆಲುಗು ಚಿತ್ರರಂಗದ ಹಿರಿಯ ನಟ ಪೊಸಾನಿ ಕೃಷ್ಣ ಮುರಳಿ ಅವರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಸೋಂಕು ತಗುಲಿರುವುದು ದೃಢಪಟ್ಟ ಬಳಿಕ ಕೃಷ್ಣ ಮುರಳಿ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೃಷ್ಣ ಮುರಳಿ ಅವರ ಪತ್ನಿ ಹಾಗೂ ಕುಟುಂಬದ ಇತರೆ ಸದಸ್ಯರಿಗೂ ಕೊರೊನಾ ಸೋಂಕು ತಗುಲಿದೆ. ಆಸ್ಪತ್ರೆಗೆ ದಾಖಲಾದ ಬಳಿಕ ಕೃಷ್ಣ ಮುರಳಿ ಅವರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ನಿರ್ಮಾಪಕರಲ್ಲಿ ಕ್ಷಮೆ ಕೋರಿದ್ದಾರೆ.

ನನಗೆ ಕೋವಿಡ್ ಪಾಸಿಟಿವ್ ಬಂದ ನಂತರ ನಾನು ನಟಿಸುತ್ತಿದ್ದ ಎರಡು ಚಿತ್ರಗಳ ಶೂಟಿಂಗ್ ಮುಂದೂಡಲಾಗಿದೆ. ಇದರಿಂದ ನಷ್ಟ ಆಗಿದೆ. ಅದಕ್ಕಾಗಿ ನಾನು ನಿರ್ಮಾಪಕರಲ್ಲಿ ಕ್ಷಮೆಯಾಚಿಸುತ್ತೇನೆ. ಶೀಘ್ರದಲ್ಲೇ ನಾನು ಹಿಂತಿರುಗುತ್ತೇನೆ. ನನ್ನ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುವುದು ಬೇಡ ಎಂದು ಪ್ರತಿಯೊಬ್ಬರಲ್ಲೂ ಮನವಿ ಮಾಡುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ತೇಜ ನಟಿಸುತ್ತಿರುವ ಆಚಾರ್ಯ ಚಿತ್ರದಲ್ಲಿ ಪೊಸಾನಿ ಕೃಷ್ಣ ಮುರಳಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸುತ್ತಿದ್ದಾರೆ.

ಗೋಪಿಚಂದ್-ತಮನ್ನಾ ಭಾಟಿಯ ನಟಿಸಿರುವ ಕ್ರೀಡಾ ಆಧಾರಿತ ‘ಸೀಟಿಮಾರ್’ ಚಿತ್ರದಲ್ಲಿ ಕೃಷ್ಣಮುರಳಿ ಅಭಿಯಿಸಿದ್ದಾರೆ. ಈ ಚಿತ್ರ ಸಂಪತ್ ನಂದಿ ನಿರ್ದೇಶಿಸಿದ್ದಾರೆ. ನಾಗಚೈತನ್ಯ ಹಾಗು ಸಾಯಿ ಪಲ್ಲವಿ ಕಾಣಿಸಿಕೊಂಡಿರುವ ‘ಲವ್‌ಸ್ಟೋರಿ’ ಚಿತ್ರದಲ್ಲೂ ಕೃಷ್ಣ ಮುರಳಿ ಇದ್ದಾರೆ. ಈ ಸಿನಿಮಾವನ್ನು ಶೇಕರ್ ಕಮ್ಮುಲಾ ನಿರ್ದೇಶಿಸಿದ್ದಾರೆ. ಈ ಎಲ್ಲಾ ಚಿತ್ರಗಳ ಬಿಡುಗಡೆ ಕೊರೊನಾ ವೈರಸ್ ಕಾರಣದಿಂದ ಮುಂದೂಡಿಕೆಯಾಗಿದೆ. ಹೊಸ ದಿನಾಂಕಗಳನ್ನು ಸದ್ಯಕ್ಕೆ ಪ್ರಕಟಿಸಿಲ್ಲ.

ಮೇ 27 ರಂದು ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದ್ದ ‘ಏಕ್ ಮಿನಿ ಕತಾ’ ಚಿತ್ರದಲ್ಲಿ ಪೊಸಾನಿ ಕೃಷ್ಣ ಮುರಳಿ ಕಾಣಿಸಿಕೊಂಡಿದ್ದರು. ಕಾವ್ಯ ತಪ್ಪರ್, ಬ್ರಹ್ಮಾಜಿ, ಶ್ರದ್ಧಾ ದಾಸ್, ಸಪ್ತಗಿರಿ, ಹರ್ಷವರ್ಧನ್ ಸೇರಿದಂತೆ ಹಲವರು ನಟಿಸಿದ್ದರು. ಮೇರ್ಲಪಾಕ ಗಾಂಧಿ ಕಥೆ ರಚಿಸಿದ್ದು, ಕಾರ್ತಿಕ್ ರಾಪೋಲು ನಿರ್ದೇಶಿಸಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: