ಮೈಸೂರು

ಜಯಂತಿಗಳನ್ನು ಆಚರಣೆಗೆ ಸೀಮಿತಗೊಳಿಸದೇ, ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಿ : ಐಲಪುರ ರಾಮು

ಬೈಲಕುಪ್ಪೆ : ಮಹಾನ್ ಪುರುಷರ  ಜಯಂತಿಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ತತ್ವ ಸಿದ್ದಾಂತ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರು ಹಾಕಿಕೊಟ್ಟ ಹೆಜ್ಜೆಯಲ್ಲಿ ನಡೆದಾಗ ಮಾತ್ರ ಆಚರಣೆಗೆ ನಿಜವಾದ ಅರ್ಥ ದೊರೆತಂತಾಗುತ್ತದೆ ಎಂದು ಸ್ಥಾಯಿ ಸಮಿತಿ ಅದ್ಯಕ್ಷ ಐಲಪುರ ರಾಮು ಅಭಿಪ್ರಾಯಪಟ್ಟರು.

ಪಿರಿಯಾಪಟ್ಟಣ ತಾಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 126ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೂರ್ಯ ಉದಯಿಸಿ ಜಗತ್ತನ್ನು ಬೆಳಗುವ ರೀತಿ ಅಂಬೇಡ್ಕರ್ ಅವರು ಜನಿಸಿ ದೀನ ದಲಿತರು, ಬಡವರು, ಹಾಗೂ ಧ್ವನಿ ಇಲ್ಲದವರ ಪಾಲಿಗೆ ಉದಯ ಸೂರ್ಯನಂತಾದರು. ಅಂಬೇಡ್ಕರ್ ಅವರು ಕಡು ಬಡತನದಲ್ಲಿ ಹುಟ್ಟಿ ವಿಶ್ವದ ಗಮನ ಸೆಳೆದ ಶ್ರೇಷ್ಠ ನಾಯಕ ಎಂದು ಬಣ್ಣಿಸಿದರು.

ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫ್ರೌಡಶಾಲಾ ಸಹಕಾರ ಶಿಕ್ಷಕರ ಸಂಘದ ಉಪಾಧ್ಯಕ್ಷ ಎನ್. ಆರ್. ಕಾಂತ್‍ರಾಜ್ ಮಾತನಾಡಿ ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ವ್ಯಾಸಂಗ ಮಾಡಿದ ಮಹಾನ್ ಜ್ಞಾನಿ, ಅವರು ರಚಿಸಿಕೊಟ್ಟಂತಹ ಸಂವಿಧಾನ ಅತಿ ಶ್ರೇಷ್ಠವಾದ ಸಂವಿಧಾನವಾಗಿದ್ದು, ಇದಕ್ಕೆ ವಿಶ್ವದ ಇತರೆ ರಾಷ್ಟ್ರಗಳೂ ಅಭಿಮತ ವ್ಯಕ್ತಪಡಿಸಿವೆ. ಇಂದು ಓರ್ವ ಜನ ಸಾಮಾನ್ಯ ಕೂಡ ಗ್ರಾಪಂ ಸದಸ್ಯತ್ವದಿಂದ ರಾಷ್ಟ್ರಪತಿ ಹುದ್ದೆಯವರೆಗೆ ಸ್ಥಾನ ಅಲಂಕರಿಸಲು ಸಾಧ್ಯವಾಗಿದ್ದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿಕೊಟ್ಟ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ ಎಂದು ಹೇಳಿದರು. ಉಪಾನ್ಯಸಕ ಎಚ್.ಕೆ. ಮಹೇಶ್ ಮಾತನಾಡಿ ಅಂಬೇಡ್ಕರ್ ಅವರು ಶೋಷಿತ ವರ್ಗದ ಜನರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದ ಮಹಾನ್  ನಾಯಕರಾಗಿದ್ದು ಅಂತಹ ಮಹಾನ್ ಪುರುಷರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ತಾಪಂ ಸದಸ್ಯ ಎ.ಟಿ. ರಂಗಸ್ವಾಮಿ ಮಾತನಾಡಿ ದೇಶದಲ್ಲಿ ಶೋಷಿತ ವರ್ಗದ ಜನರ ಪರವಾಗಿ ಕೆಲಸ ಮಾಡಿದವರೆಲ್ಲರೂ ಮಹಾನ್ ನಾಯಕರು. ಇವರಲ್ಲಿ ಅಂಬೇಡ್ಕರ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅಂಬೇಡ್ಕರ್ ಆಶಯದಂತೆ ಶಿಕ್ಷಣವನ್ನು ಪಡೆದವರು ಸಮಾಜದಲ್ಲಿ ಗೌರವಕ್ಕೆ ಒಳಗಾಗುತ್ತಾರೆ. ಆದುದರಿಂದ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಯುವಕರು ಶಿಕ್ಷಣ ಬಿಟ್ಟು ದುಶ್ಚಟಕ್ಕೆ ಹೊಂದಿಕೊಳ್ಳಬಾರದು  ಎಂದು ಮನವಿ ಮಾಡಿದರು. ಆಲನಹಳ್ಳಿಯ ಮುಖ್ಯ ದ್ವಾರದ ಶ್ರೀ ಬಸವೇಶ್ವರ ದೇವಾಲಯದಿಂದ ಅಂಬೇಡ್ಕ್‍ರ್ ಅವರ ಭಾವಚಿತ್ರವನ್ನು  ಅಲಂಕೃತಗೊಂಡ ಟ್ರ್ಯಾಕ್ಟರ್ ಮೂಲಕ, ಕಳಶ ಮೆರವಣಿಗೆಯೊಂದಿಗೆ ಕರೆತರಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಚನ್ನಪ್ಪ, ಸದಸ್ಯ ಅಂಗಡಿ ರಾಜಣ್ಣ, ಗ್ರಾಮಸ್ಥರಾದ ಕಾಳಣ್ಣ, ಬೆಂಡಯ್ಯ, ಶಿವಯ್ಯ, ಲೊಕೇಶ್, ಗ್ರಾಮದ ಯುವಕರು, ಮಹಿಳೆಯರು ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು. (ಆರ್.ಬಿ.ಆರ್-ಎಸ್.ಎಚ್)

Leave a Reply

comments

Related Articles

error: