ಮೈಸೂರು

ಆತ್ಮ ಮತ್ತು ಪರಮಾತ್ಮಗಳ ಸಮ್ಮಿಲನವೇ ಯೋಗ : ಅಭಿನವ ಸಿದ್ಧಾರೂಢ ಸ್ವಾಮಿಗಳು

ಮೈಸೂರು,ಆ.2:- ಆತ್ಮ ಮತ್ತು ಪರಮಾತ್ಮಗಳ ಸಮ್ಮಿಲನವೇ ಯೋಗ ಎಂದು ವಿಜಯಪುರ ಶ್ರೀ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮಿಗಳು ಹೇಳಿದರು.
ಇಂದು ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನವಾರಿಧಿ-35’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ “ಪತಂಜಲಿ ಯೋಗ ಸೂತ್ರ” ಕುರಿತು ಉಪನ್ಯಾಸ ನೀಡಿದರು. ಯೋಗ ಭಾರತೀಯ ಸಂಸ್ಕೃತಿಯ ಒಂದು ವಿಶಿಷ್ಟವಾದ ಸಾಧನಾ ಪದ್ಧತಿ. ಪತಂಜಲಿ ಮಹರ್ಷಿಗಳಿಗಿಂತಲೂ ಪೂರ್ವದಲ್ಲಿ ಯೋಗ ಪ್ರಚಲಿತದಲ್ಲಿತ್ತು. ಆದರೆ ಅದನ್ನು ಶಾಸ್ತ್ರೀಯ ಚೌಕಟ್ಟಿಗೆ ತಂದು ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟವರು ಪತಂಜಲಿ ಮಹರ್ಷಿಗಳು. ಅವರಿಂದ ರಚಿತವಾದ ಗ್ರಂಥವೇ ‘ಪತಂಜಲಿ ಯೋಗ ಸೂತ್ರ’. ಯೋಗ ಎಂದರೆ ಕೂಡುವಿಕೆ ಎಂದರ್ಥ. ಜೀವ ಮತ್ತು ಶಿವ ಒಂದಾಗುವುದು ಎಂದರ್ಥ. ಇಂತಹ ಯೋಗದ ಸಾರಾಂಶವನ್ನೆಲ್ಲ ಸಂಕ್ಷಿಪ್ತಗೊಳಿಸಿ ಪತಂಜಲಿ ಮುನಿಗಳು 195 ಸೂತ್ರಗಳನ್ನು ರಚಿಸಿದ್ದಾರೆ. ಚಿತ್ತ-ವೃತ್ತಿಗಳ ನಿರೋಧವೇ ಯೋಗ. ಚಿತ್ತವೆಂದರೆ ಮನಸ್ಸು ಅದು ಸದಾ ಸಂಶಯದಲ್ಲೇ ತುಂಬಿರುತ್ತದೆ. ದ್ವಂದ್ವ ಭಾವದಿಂದ ಕೂಡಿರುತ್ತದೆ. ಅದು ಯಾವುದರ ಕುರಿತು ಸದಾ ಚಿಂತಿಸುತ್ತಿರುತ್ತದೆಯೋ ಅದು ಅದರ ವೃತ್ತಿಗಳು. ಇವುಗಳು ಮನುಷ್ಯನ ಸುಖವನ್ನು ಅಪಹರಣ ಮಾಡುತ್ತವೆ. ಇದರಿಂದ ಆತ ದುಃಖಿಯಾಗುತ್ತಾನೆ. ಇವೆಲ್ಲವನ್ನು ಆತ್ಯಂತಿಕವಾಗಿ ನಿವೃತ್ತಿಗೊಳಿಸುವುದೇ ಯೋಗ. ಇವೆಲ್ಲವನ್ನೂ ಜಯಸಿದರೇ ಮನುಷ್ಯ ತನ್ನ ನಿಜವಾದ ಸ್ಥಾನದಲ್ಲಿ ನಿಲ್ಲುತ್ತಾನೆ. ಆತ ಆನಂದಸ್ವರೂಪಿಯಾಗುತ್ತಾನೆ. ಮನುಷ್ಯನ ಆಸೆಗಳು ಅಪರಿಮಿತ. ಸುಖವನ್ನು ಅರಸುತ್ತಾ ಮನುಷ್ಯ ಅಲೆಮಾರಿಯಾಗುತ್ತಾನೆ. ಕ್ಷಣಿಕ ಸುಖಗಳು ಆಭಾಸವಾದವು. ಮನುಷ್ಯ ಶಾಶ್ವತವಾದ ಸುಖವನ್ನು ಬಯಸುತ್ತಾನೆ. ಅದು ಪ್ರಪಂಚದ ಯಾವ ವಸ್ತುಗಳಲ್ಲೂ ಇಲ್ಲ. ಅದು ಇರುವುದು ಅವನಲ್ಲೇ ಎಂಬುದನ್ನು ಅರಿಯಬೇಕಾಗಿದೆ. ಯೋಚನೆಗಳು ಅಕ್ಲಿಷ್ಟವಾಗಿರಬೇಕೆ ಹೊರತು ಕ್ಲಿಷ್ಟವಾಗಿರಬಾರದು. ಇದ್ದದ್ದನ್ನು ಬಿಟ್ಟು ಇಲ್ಲದ್ದನ್ನು ಚಿಂತಿಸುವುದು ಮನಸ್ಸಿನ ವಿಕಲ್ಪ. ಮನಸ್ಸು ಕನಸಿನ ಗೋಪುರವನ್ನು ಕಟ್ಟಿತ್ತಿರುತ್ತದೆ. ಮರೆಯಾಗಲಾದ ವಿಚಾರಗಳು ಮನಸ್ಸಿನಲ್ಲಿದ್ದರೆ ಅದು ಸ್ಮೃತಿ. ಅವುಗಳು ಸಂಸ್ಕಾರವನ್ನು ನೀಡುತ್ತವೆ ಎಂದು ತಿಳಿಸಿದರು.
ಉಪನ್ಯಾಸದ ನಂತರ ವೀಕ್ಷಕರ ಆಯ್ದ ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಆನ್‍ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಜಿಜ್ಞಾಸುಗಳು, ಸಾರ್ವಜನಿಕರು ಭಾಗವಹಿಸಿದ್ದರು. ಬಿ. ಭಾನುಮತಿ ಹಾಗೂ ಭಾರತಿ ಪ್ರಾರ್ಥಿಸಿದರು. ಡಾ. ದೇವನೂರು ಮಹೇಂದ್ರಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರತಿ ಸೋಮವಾರವೂ ನಡೆಯುವ ಈ ಉಪನ್ಯಾಸದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಧರ್ಮ, ಅಧ್ಯಾತ್ಮ, ಯೋಗ, ಆರೋಗ್ಯ, ಜೀವನಶೈಲಿ ಮುಂತಾದ ವಿಷಯಗಳು ಮತ್ತು ಪ್ರಚಲಿತ ವಿದ್ಯಮಾನಗಳನ್ನು ಕುರಿತು ದೇಶ ಮತ್ತು ವಿದೇಶದ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ಆನ್‍ಲೈನ್ ಮೂಲಕ ನಡೆಯುವ ಈ ಉಪನ್ಯಾಸ ಕಾರ್ಯಕ್ರಮವು ಸಾಕಷ್ಟು ಜನಪ್ರಿಯಗೊಂಡಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: