ಕರ್ನಾಟಕಪ್ರಮುಖ ಸುದ್ದಿ

ಕೋವಿಡ್ ಲಸಿಕೆಗೆ ನೆರವು : ಖಾಸಗಿ ಸಹಭಾಗಿತ್ವಕ್ಕೆ ಜಿಲ್ಲಾಧಿಕಾರಿ ಎಸ್.ಅಶ್ವಥಿ ಕರೆ

ರಾಜ್ಯ( ಮಂಡ್ಯ), ಆ.5:- ಮೊದಲನೇ ಹಾಗೂ ಎರಡನೇ ಕೋವಿಡ್ ಅಲೆಯಲ್ಲಿ ಖಾಸಗಿ ಸಂಘ ಸಂಸ್ಥೆಗಳು ಜಿಲ್ಲೆಯ ನೆರವಿಗೆ ಸ್ಪಂದಿಸಿದ್ದು, ಮುಂಬರುವ ಮೂರನೇ ಅಲೆಯನ್ನು ಎದುರಿಸಲು ಲಸಿಕೆ ಅವಶ್ಯಕವಿದ್ದು ಈ ಲಸಿಕಾಕರಣಕ್ಕೆ ಖಾಸಗಿಯವರು ಕೈಜೋಡಿಸಿ ಎಂದು ಜಿಲ್ಲಾಧಿಕಾರಿ ಎಸ್ ಅಶ್ವಥಿ ಕರೆ ನೀಡಿದರು.
ಇಂದು ನಗರದ ಕಲಾಮಂದಿರದಲ್ಲಿ ಲಸಿಕಾಕರಣದ ನೆರವಿಗೆ ಸಂಬಂಧಿಸಿದಂತೆ ಖಾಸಗಿ ಸಂಘ ಸಂಸ್ಥೆಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಎರಡು ವರ್ಷಗಳಿಂದ ಲಾಕ್‍ ಡೌನ್‍ನಿಂದಾಗಿ ಖಾಸಗಿ ಕಂಪನಿಗಳಿಗೂ ನಷ್ಟವಾಗಿದ್ದರೂ ಕೋವಿಡ್ ಮೊದಲನೇ ಅಲೆ ಹಾಗೂ ಎರಡನೆ ಅಲೆಗಳನ್ನು ಎದುರಿಸಲು ಈ ಎರಡು ವರ್ಷಗಳಲ್ಲಿ ಪೆಟ್ರೋಲ್ ಬಂಕ್ ಅಸೋಸಿಯೇಷನ್, ರೆಡ್‍ಕ್ರಾಸ್, ಮದ್ಯಮಾರಾಟಗಾರರ ಅಸೋಸಿಯೇಷನ್, ಸಕ್ಕರೆ ಕಾರ್ಖಾನೆ ಹಾಗೂ ಇತರೆ ಸಂಘಸಂಸ್ಥೆಗಳು ತುಂಬಾ ಸಹಕಾರ ನೀಡುತ್ತಿದ್ದು, ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಆಕ್ಸಿಜನ್ ಜನರೇಟರ್ ಪ್ಲಾಂಟ್ಸ್‍ಗಳನ್ನು ಜಿಲ್ಲೆಯ ಸಿಎಸ್‍ಆರ್ ಚಟುವಟಿಕೆಗಳಡಿಯಲ್ಲಿ ಕೈಗಾರಿಕೋದ್ಯಮಿಗಳ ಸಹಾಯದೊಂದಿಗೆ ಯೋಜಿಸಲಾಗಿದೆ ಎಂದರು.
ಕಳೆದ ಒಂದು ವಾರಗಳಿಂದ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಮೂರನೆ ಅಲೆಯು ಈ ತಿಂಗಳಿನಲ್ಲಿ ಬರಬಹುದೆಂಬ ವರದಿಯಿದೆ ಹಾಗಾಗಿ ನಾವು ನಮ್ಮ ಜಿಲ್ಲಾ ಹಂತದಲ್ಲಿ ಜಿಲ್ಲೆಯನ್ನು ರಕ್ಷಿಸುವಲ್ಲಿ ಸತತ ಪ್ರಯತ್ನ ಮಾಡುತ್ತಿದ್ದು ಲಸಿಕೆ ಅದರ ಒಂದು ಭಾಗವಾಗಿದೆ ಎಂದರು.
ನಮ್ಮಲ್ಲಿ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ನಮಗೆ ಲಭ್ಯವಾಗುತ್ತಿರುವ ಲಸಿಕೆಯನ್ನು ಶೇ.100 ರಷ್ಟು ಸಂಪೂರ್ಣವಾಗಿ ನೀಡಿದ್ದೇವೆ. ಜಿಲ್ಲೆಯಲ್ಲಿ 18 ಲಕ್ಷ ಜನಸಂಖ್ಯೆಯಿದ್ದು 8.5ಲಕ್ಷ ಜನಸಂಖ್ಯೆಗೆ ಮಾತ್ರ ಲಸಿಕೆ ನೀಡಲಾಗಿದ್ದು ದಿನಕ್ಕೆ 3000-4000 ಲಸಿಕೆ ನೀಡುತ್ತಿದ್ದರೆ ಮೂರನೆ ಅಲೆ ಆರಂಭವಾಗುತ್ತದೆ ಹಾಗಾಗಿ ದಿನದಲ್ಲಿ ನೀಡುತ್ತಿರುವ ಲಸಿಕೆಯನ್ನು ಹೆಚ್ಚಿಸುವುದು ಅಗತ್ಯವಿದೆ ಎಂದರು.
ಈ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಗಳ ಸಹಕಾರಕ್ಕಾಗಿ ಕರೆ ನೀಡುತ್ತಿದ್ದೇವೆ. 18-45 ವರ್ಷದವರಿಗೆ ಸರ್ಕಾರದಿಂದ ದೊರೆಯುತ್ತಿರುವ ಲಸಿಕೆಯನ್ನು ನೀಡುತ್ತಿದ್ದು, ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬಹುದು ಎಂದರು.
ನಿಮಗೆ ಸಹಕಾರವಾಗುವ ಹಂತದಲ್ಲಿ ಸಾರ್ವಜನಿಕರಿಗೆ ಲಸಿಕೆ ನೀಡಬಹುದಾಗಿದ್ದು ನಿಮ್ಮ ಸಂಸ್ಥೆಗಳಲ್ಲಿ ಚರ್ಚೆ ಮಾಡಿ ಜಿಲ್ಲಾಡಳಿತಕ್ಕೆ ತಿಳಿಸಿ ಹಾಗೂ ನಿಮ್ಮಿಂದ ಒಳ್ಳೆ ಸ್ಪಂದನೆ ಬರುವುದೆಂದು ನಿರೀಕ್ಷಿಸಿದ್ದೇವೆ ಎಂದರು.
ಸಭೆಯಲ್ಲಿ ಜಿ.ಪಂ ಸಿಇಒ ದಿವ್ಯಪ್ರಭು, ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ, ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥೆ ಮೀರಾ ಶಿವಲಿಂಗಯ್ಯ, ಛೇಂಬರ್ ಆಫ್ ಕಾಮರ್ಸ್ ನ ಪ್ರಭಾಕರ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು,ಖಾಸಗಿ ಕಂಪನಿಗಳ ಮಾಲೀಕರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: