ಕರ್ನಾಟಕಪ್ರಮುಖ ಸುದ್ದಿ

ಒಂದು ಜಿಲ್ಲೆ ಒಂದು ಉತ್ಪನ್ನ; ರೈತರಿಗೆ ನೆರವಾಗಿ: ಜಿಲ್ಲಾಧಿಕಾರಿ ಅಶ್ವಥಿ

ರಾಜ್ಯ( ಮಂಡ್ಯ).ಆ.5:- ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ರೈತರ ಕಲ್ಯಾಣಕ್ಕಾಗಿ ಅಗತ್ಯ ದಾಖಲಾತಿಗಳನ್ನು ಪಡೆದುಕೊಂಡು ರೈತರಿಗೆ ಅನುಕೂಲವಾಗಲು ಸಹಕರಿಸಿ ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ಬ್ಯಾಂಕುಗಳ ಮುಖ್ಯಸ್ಥರುಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಆತ್ಮ ನಿರ್ಭರ ಭಾರತ ಅಭಿಯಾನದ ಪ್ರಧಾನಮಂತ್ರಿಗಳ ಅತಿ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಅನುಷ್ಠಾನ ಹಾಗೂ ಪ್ರಗತಿ ಕುರಿತು ಮಾತನಾಡಿದ ಅವರು ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ 2021-22 ನೇ ಸಾಲಿನಲ್ಲಿ ಒಟ್ಟು 29 ಅರ್ಜಿ ಸಲ್ಲಿಕೆಯಾಗಿದ್ದು, 12 ಅರ್ಜಿಗಳ ದಾಖಲೆಗಳು ಸರಿಯಾಗಿದ್ದು, ಡ್ರಾಫ್ಟ್ ನಲ್ಲಿರುವ 17 ಅರ್ಜಿಗಳು, ಡಿಎಲ್ ಸಿ ಅನುಮೋದಿಸಿ ಬ್ಯಾಂಕುಗಳಲ್ಲಿರುವ 7 ಅರ್ಜಿಗಳು, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಲಾಗಿನ್ ನಲ್ಲಿರುವ 2 ಅರ್ಜಿಗಳನ್ನು ಕೂಡಲೇ ಸರಿಪಡಿಸಿ ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಕೃಷಿ ಉತ್ಪನ್ನದ ಲಭ್ಯತೆ, ಹಾಲಿ ಇರುವ ಕಿರು ಆಹಾರ ಸಂಸ್ಕರಣ ಘಟಕಗಳು, ಗುಚ್ಚ ಬೆಳೆ, ಮಾರುಕಟ್ಟೆ ಸಾಮರ್ಥ್ಯ ಕುರಿತು ಪರಿಶೀಲಿಸಿದರು.
ಅತಿಸಣ್ಣ ಆಹಾರ ಸಂಸ್ಕರಣ ಉದ್ಯಮಿಗಳು, ಎಪ್.ಪಿ.ಒಗಳು, ಸ್ವಸಹಾಯ ಗುಂಪುಗಳು ಹಾಗೂ ಸಹಕಾರಿಗಳ ಸೌಲಭ್ಯಗಳನ್ನು ಹೆಚ್ಚಿಸುವುದು ಮತ್ತು ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್ ಅನ್ನು ಬಲಪಡಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.
ತಾಂತ್ರಿಕ ಸಂಸ್ಥೆಗಳನ್ನು ಬಲಪಡಿಸಿ, ಆಹಾರ ಸಂಸ್ಕರಣಾ ವಲಯದಲ್ಲಿ ಸಂಶೋಧನೆ ಹಾಗೂ ತರಬೇತಿಗೆ ಪ್ರೋತ್ಸಾಹ ನೀಡಿ, ಉದ್ದಿಮೆಗಳಿಗೆ ವೃತ್ತಿಪರ ಹಾಗೂ ತಾಂತ್ರಿಕ ಬೆಂಬಲ ದೊರೆಯುವಿಕೆಯನ್ನು ಹೆಚ್ಚಿಸಿ ಎಂದರು.
ಆಹಾರ ಸಂಸ್ಕರಣಾ ಕೈಗಾರಿಕೆಯ ಹಾಲಿ ಅಸಂಘಟಿತ ವಲಯದಲ್ಲಿರುವ ಉದ್ದಿಮೆಗಳ ಸ್ಪರ್ಧಾತ್ಮಕತೆಯನ್ನು ವೃದ್ಧಿಸುವುದು ಹಾಗೂ ನಿಯಮಬದ್ಧಗೊಳಿಸುವಿಕೆಯನ್ನು ಪ್ರೋತ್ಸಾಹಿಸುವುದು ಯೋಜನೆಯ ಗುರಿ ಎಂದರು.
ಯೋಜನೆಗೆ ಸಂಬಂಧಿಸಿದಂತೆ ರೈತರಿಗೆ ಸರಿಯಾದ ಮಾಹಿತಿಯನ್ನು ನೀಡಿ, ರೈತರು ಯಾವ ದಾಖಲಾತಿಗಳನ್ನು ನೀಡಬೇಕು ಎಂಬುದಾಗಿ ರೈತರೊಂದಿಗೆ ಸಮನ್ವಯ ಸಾಧಿಸಿ ಆತ್ಮ ನಿರ್ಭರ ಯೋಜನೆಯ ಸಪಲಗೊಳಿಸಲು ಹಾಗೂ ರೈತರಿಗೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ಒದಗಿಸಿ, ಅಗತ್ಯವಿರುವ ದಾಖಲೆಗಳನ್ನು ಪಡೆದುಕೊಂಡು ಆತ್ಮ ನಿರ್ಧಾರ ಯೋಜನೆಯಡಿ ರೈತರು ಸಬಲರಾಗಲು ಸಹಕರಿಸಿ ಎಂದು ಬ್ಯಾಂಕುಗಳ ವ್ಯವಸ್ಥಾಪಕರುಗಳಿಗೆ ಸೂಚಿಸಿದರು.
ಕೇಂದ್ರ ಪುರಸ್ಕೃತ ಯೋಜನೆ “ಕೃಷಿ ಮೂಲಭೂತ ಸೌಕರ್ಯ ನಿಧಿ”ಯಡಿ ಒಂದು ಲಕ್ಷ ಕೋಟಿ ಆರ್ಥಿಕ ಸಹಾಯ ಒದಗಿಸಲಾಗುತ್ತಿದ್ದು, ಕರ್ನಾಟಕ ರಾಜ್ಯಕ್ಕೆ ನಾಲ್ಕು ವರ್ಷಗಳ ಅವಧಿಗೆ 4525 ಕೋಟಿ ರೂ.ಗಳ ಗುರಿ ನಿಗದಿಪಡಿಸಲಾಗಿದೆ. ಕೊಯ್ಲೋತ್ತರ ಮೂಲಭೂತ ಸೌಕರ್ಯ ಮತ್ತು ಸಾಮೂಹಿಕ ಕೃಷಿ ಆಸ್ತಿ ಸೃಷ್ಟಿಸಲು ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮೇಲಿನ ಶೇ.9 ರ ಬಡ್ಡಿಗೆ ಶೇ.3 ರ ಬಡ್ಡಿ ಸಹಾಯಧನವನ್ನು ನೀಡಲಾಗುವುದು. ಫಲಾನುಭವಿಗಳಿಗೆ ಸಾಲ ವಿತರಣೆ ನಂತರ ಬಡ್ಡಿ ಸಹಾಯಧನ ಹಾಗೂ ಸಾಲದ ಖಾತರಿಯನ್ನು ಕೇಂದ್ರ ಸರ್ಕಾರ ಸಂಬಂಧಿಸಿದ ಸಾಲ ವಿತರಣಾ ಸಂಸ್ಥೆಗಳಿಗೆ ಒದಗಿಸುತ್ತದೆ ಎಂದು ತಿಳಿಸಿದರು.
ಸದರಿ ಸಭೆಯಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಬಿ.ಎಸ್.ಚಂದ್ರಶೇಖರ್, ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕರಾದ ಷಣ್ಮುಗಂ ಎಚ್.ಎ, ಜಿಲ್ಲೆಯಲ್ಲಿನ ವಿವಿಧ ಬ್ಯಾಂಕುಗಳ ಮುಖ್ಯಸ್ಥರುಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: