
ಕರ್ನಾಟಕಪ್ರಮುಖ ಸುದ್ದಿಮೈಸೂರು
ಮುಂದಿನ ಬಾರಿ ರಾಷ್ಟ್ರವಾದಿ ಮುಖ್ಯಮಂತ್ರಿಯಾಗುತ್ತಾರೆ, ಆಗ ಜಾತಿ ವಿಚಾರ ಬರೋದಿಲ್ಲ : ಸಚಿವ ಕೆ.ಎಸ್.ಈಶ್ವರಪ್ಪ
ಮೈಸೂರು,ಆ.5:- ಮುಂದಿನ ಬಾರಿ ರಾಷ್ಟ್ರವಾದಿ ಮುಖ್ಯಮಂತ್ರಿಯಾಗುತ್ತಾರೆ ಹೇಳಿಕೆಗೆ ಸಚಿವ ಕೆ.ಎಸ್.ಈಶ್ವರಪ್ಪ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಬೇಕೆಂದು ಬೆಂಬಲಿಗರು ಬಯಸಿದ್ದರು. ಆದರೆ ಸಚಿವನೂ ಆಗುವುದಿಲ್ಲ ಅಂತ ಬಿಂಬಿಸಲಾಗಿತ್ತು. ಹೈಕಮಾಂಡ್ ನನ್ನನ್ನು ಹೇಗೆ ಪರಿಗಣಿಸಿದೆ ಅಂತ ಈಗ ಎಲ್ಲರಿಗೂ ಗೊತ್ತಾಗಿದೆ. ಈವರೆಗೆ ಬಿಜೆಪಿಗೆ ಸಂಪೂರ್ಣ ಬಹುಮತ ಬಂದಿಲ್ಲ. ಹೊರಗಿನವರ ಸಹಕಾರ ಪಡೆದುಕೊಂಡು ಸರ್ಕಾರ ರಚನೆ ಮಾಡಿದ್ದೇವೆ. ಮುಂದಿನ ಬಾರಿ ಬಿಜೆಪಿಗೆ ಸಂಪೂರ್ಣ ಬಹುಮತ ಸಿಗುತ್ತೆ. ಆಗ ಜಾತಿ ವಿಚಾರ ಬರೋದಿಲ್ಲ. ರಾಷ್ಟ್ರವಾದಿಯನ್ನು ಬಿಜೆಪಿ ಮುಖ್ಯಮಂತ್ರಿ ಮಾಡುತ್ತೆ ಎಂದರು.
ಬೊಮ್ಮಾಯಿ ಬೆಟ್ಟ ಅಗೆದು ಇಲಿ ಹಿಡಿದಿದ್ದಾರೆ ಎಂದಿರುವ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ ಅವರು ಸಿದ್ದರಾಮಯ್ಯ ಹಸಿವಿನಿಂದ ಒದ್ದಾಡುತ್ತಿರುವ ಇಲಿ. ಸಿದ್ದರಾಮಯ್ಯ ಹುಲಿಯಾಗುತ್ತಾರೆ ಅಂದುಕೊಂಡಿದ್ದೆವು. ಆದರೆ ಅವರು ಇಲಿಯಾಗಿ ವಿಲ ವಿಲ ಒದ್ದಾಡುತ್ತಿದ್ದಾರೆ. ಅವರು ರಾಜ್ಯಕ್ಕೆ ಹುಲಿಯಾಗುವ ಬದಲು ಡಿ ಕೆ ಶಿವಕುಮಾರ್ ಮೇಲೆ ಹುಲಿಯಾಗಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ನಿಂತು ಹೇಳುತ್ತಿದ್ದೇನೆ. ಪರಮೇಶ್ವರ್ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ. ತಮ್ಮ ಸಿಎಂ ಸ್ಥಾನಕ್ಕೆ ಅಡ್ಡಿಯಾಗುತ್ತಾರೆ ಎಂದು ಸೋಲಿಸಿದರು. ಸಿದ್ದರಾಮಯ್ಯ ಒಬ್ಬ ಕುರುಬರನ್ನು ಬೆಳೆಸಲಿಲ್ಲ. ನೆಪ ಮಾತ್ರಕ್ಕೆ ತಾತ್ಕಾಲಿಕವಾಗಿ ಕೆಲವು ಕುರುಬರನ್ನು ಸಚಿವರನ್ನಾಗಿ ಮಾಡಿದ್ದರು. ಪೂರ್ಣಾವಧಿಯಲ್ಲಿ ಯಾರಿಗೂ ಸಚಿವ ಸ್ಥಾನ ನೀಡಲಿಲ್ಲ. ನಮ್ಮಲ್ಲಿ ಹಿಂದುಳಿದವರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ ಪಕ್ಷ ನಿಷ್ಠ ಕಾರ್ಯಕರ್ತರೊಂದಿಗೆ ಅಧಿಕಾರಕ್ಕೆ. ಇದುವರೆಗೂ ಯಾವತ್ತು ಬಿಜೆಪಿ ಪೂರ್ಣಪ್ರಮಾಣದಲ್ಲಿ ಅಧಿಕಾರ ನಡೆಸಿಲ್ಲ. ಇದರಿಂದರಿಂದಾಗಿಯೇ ಸಣ್ಣ ಪುಟ್ಟ ಗೊಂದಲಗಳಿದ್ದವು ಮುಂದೆ ಈ ರೀತಿ ಆಗುವುದಿಲ್ಲ ಎಂದರು.
ಮತ್ತೊಮ್ಮೆ ಸಚಿವರಾದ ಸಂಭ್ರಮದಲ್ಲಿ ಕೆ.ಎಸ್.ಈಶ್ವರಪ್ಪನವರು ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಕಳೆದ ಆಷಾಢ ಶುಕ್ರವಾರವೂ ಬೆಟ್ಟಕ್ಕೆ ಬಂದು ಹೋಗಿದ್ದರು. ಬಳಿಕ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಶಾಖಾ ಮಠಕ್ಕೂ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದು ಶೀಗಳ ಜೊತೆ ಉಭಯಕುಶಲೋಪರಿ ನಡೆಸಿದರು. (ಕೆ.ಎಸ್,ಎಸ್.ಎಚ್)