ಕರ್ನಾಟಕಪ್ರಮುಖ ಸುದ್ದಿ

ಯಡಿಯೂರಪ್ಪ ಬದಲು ಸಂತೋಷ್ ಸಿಎಂ : ದಿನೇಶ್ ಗುಂಡೂರಾವ್ ರಾಜಕೀಯ ಬಾಂಬ್!

ಬೆಂಗಳೂರು : ಬಿಜೆಪಿ ಬಣಗಳ ಜಗಳ ಆ ಪಕ್ಷದ ಆಂತರಿಕ ವಿಚಾರ. ಆದರೆ ಈಶ್ವರಪ್ಪ ಅವರಿಗೆ ಕಾಂಗ್ರೆಸ್ ಬೆಂಬಲ ಇದೆ ಎಂಬ ಬಿಜೆಪಿ ನಾಯಕರ ಆರೋಪ ಸತ್ಯಕ್ಕೆ ದೂರವಾದ ಮಾತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಾಹುಬಲಿ ಆರ್ಭಟದ ಜೊತೆ ಬಿಜೆಪಿಯಲ್ಲಿ ಬಲಿ ಆಟ ನಡೆಯುತ್ತಿದೆ. ಕಳೆದ ಎರಡುಮೂರು ದಿನದಿಂದ ರಾಜ್ಯದಲ್ಲಿ ವರ್ಣರಂಜಿತ ಪ್ರದರ್ಶನ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.

ಆರೆಸ್ಸೆಸ್ ಪ್ಲಾನ್ !

“ಆಡಳಿತ ಪಕ್ಷಗಳು ಕಿತ್ತಾಟ ನಡೆಸೋದು ಸಹಜ. ಆದ್ರೆ ರಾಜ್ಯದ ಇತಿಹಾಸದಲ್ಲಿ ವಿರೋಧ ಪಕ್ಷದ ಜಗಳ ಬೀದಿಗೆ ಬಿದ್ದಿದೆ. ಬಿಜೆಪಿಯ ಆಂತರಿಕ ಕಚ್ಚಾಟದ ಹಿಂದೆ ಆರೆಸ್ಸೆಸ್‍ನ ಸಂತೋಷ್ ಇದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಇದೆಲ್ಲ ಗಮನಿಸಿದರೆ ಉತ್ತರ ಭಾರದಲ್ಲಿ ಆರ್‍ಎಸ್‍ಎಸ್‍ ವ್ಯಕ್ತಿಗಳನ್ನು ಸಿಎಂ ಮಾಡಿದ ರೀತಿಯಲ್ಲೇ ಸಂತೋಷ್ ಅವರನ್ನು ಕರ್ನಾಟಕದಲ್ಲಿ ಸಿಎಂ ಮಾಡಲು ಪ್ಲಾನ್ ಮಾಡಿದ್ದಾರೆ ಎಂದೆನಿಸುತ್ತಿದೆ ಎಂದರು.

ಕಾಂಗ್ರೆಸ್ ಸಮಾಲೋಚನಾ ಸಭೆ :

“ನಿಮ್ಮ ಜಗಳ ನಿಮ್ಮ ಮನೆ ಮುಂದೆ ಇಟ್ಟುಕೊಳ್ಳಿ. ಅದನ್ನ ಬಿಟ್ಟು ಕಾಂಗ್ರೆಸ್ ಮೇಲೆ ಆರೋಪ ಮಾಡಬೇಡಿ” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಗುಂಡೂರಾವ್, ಮುಂದಿನ ಚುನಾವಣೆಗೆ ನಾವು ರೆಡಿಯಾಗಿದ್ದೇವೆ. ನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಸಂಘಟನೆ ಮತ್ತು ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ಶ್ರಮಿಸುತ್ತಿದ್ದೇವೆ. ಇದಕ್ಕಾಗಿ ಮೇ 22 ರಿಂದ 26 ರ ವರೆಗೆ 5 ದಿನಗಳ ಸಮಾಲೋಚನಾ ಸಭೆ ನಡೆಯಲಿದೆ. ಆ ಸಭೆಯಲ್ಲಿ ಮುಂದಿನ ಚುನಾವಣೆಗೆ ಕಾರ್ಯತಂತ್ರ, ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲಿದ್ದೇವೆ. ಎಐಸಿಸಿ ನಾಯಕರು, ಕೆಪಿಸಿಸಿ ನಾಯಕರು, ಮುಖ್ಯಮಂತ್ರಿಗಳು, ಸಚಿವರು, ಹಿರಿಯ ನಾಯಕರು ಚರ್ಚೆ ನಡೆಸಲಿದ್ದೇವೆ” ಎಂದು ದಿನೇಶ್ ಗುಂಡುರಾವ್ ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಎಐಸಿಸಿಗೆ ಬಿಟ್ಟದ್ದು. ನಮ್ಮ ಹೈ ಕಮಾಂಡ್ ಏನೇ ತೀರ್ಮಾನ ಮಾಡಿದರೂ ನಾವು ಅದರಂತೆ ನಡೆಯುತ್ತೇವೆ. ನಾಯಕತ್ವದ ವಿರುದ್ಧ ಇದುವರೆಗೆ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಮುಂದೆಯೂ ಯಾವುದೇ ಭಿನ್ನಮತೀಯ ಚಟುವಟಿಕೆ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಲು ಸಾಧ್ಯವಿಲ್ಲ ಎಂದರು.

ಜೆಡಿಎಸ್ ಜೊತೆ ಮೈತ್ರಿ ಇಲ್ಲ :

ಕಾಂಗ್ರೆಸ್ ಪಕ್ಷ ಸ್ವತಂತ್ರವಾಗಿ ಎಲ್ಲ 224 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಮೈತ್ರಿಯ ಬಗ್ಗೆ ಈಗಾಗಲೇ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರೂ ಸ್ಪಷನೆ ನೀಡಿದ್ದಾರೆ. ಬೆಂಗಳೂರಲ್ಲಿ ನಾವು ಮೈತ್ರಿ ಮಾಡಿಕೊಂಡಿದ್ದೇವೆ ಅಷ್ಟೆ ಎಂದರು.

ಆದರೆ, “ಮುಂದಿನ ಚುನಾವಣೆಯಲ್ಲಿ ಸೌಹಾರ್ದ ಸ್ಪರ್ಧೆ ಇರುತ್ತದೆ” ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್ ಜೊತೆ ಮೈತ್ರಿಯ ಸುಳಿವು ನೀಡಿದರು.

ವಿಶ್ವನಾಥ್ ಜೆಡಿಎಸ್ ಸೇರಲ್ಲ :

ಎಚ್. ವಿಶ್ವನಾಥ್ ಅವರು ಜೆಡಿಎಸ್ ಸೇರಲ್ಲ. ಪಕ್ಷ ಅವರಿಗೆ ಎಲ್ಲ ಸ್ಥಾನಗಳನ್ನೂ ಕೊಟ್ಟಿದೆ. ಅವರನ್ನು ಪಕ್ಷದಲ್ಲಿ ಕಡೆಗಣಿಸಿಲ್ಲ. ಅಶಿಸ್ತು ತೋರಿಸಿದಾಗ ನೋಟೀಸ್ ಕೊಟ್ಟಿರಬಹುದು ಅಷ್ಟೇ ಎಂದ ಗುಂಡೂರಾವ್, “ವಿಶ್ವನಾಥ್ ಅವರ ಮುಂದಿನ ನಿರ್ಧಾರದ ಬಗ್ಗೆ ಹೇಳೋದು ಕಷ್ಟ” ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು.

(ಎಸ್.ಎನ್/ಎನ್.ಬಿ.ಎನ್)

Leave a Reply

comments

Related Articles

error: