ದೇಶಪ್ರಮುಖ ಸುದ್ದಿ

ಗಡಿ ವಿವಾದ ಪರಿಹರಿಸಿಕೊಳ್ಳಲು ಅಸ್ಸಾಂ-ಮೇಘಾಲಯ ಸರ್ಕಾರದಿಂದ ಸಮಿತಿ ರಚನೆ

ಗುವಾಹಟಿ,ಆ.6-ಗಡಿ ವಿವಾದಗಳನ್ನು ಪರಿಹರಿಸಿಕೊಳ್ಳಲು ಸಮಿತಿ ರಚಿಸಲು ಅಸ್ಸಾಂ ಹಾಗೂ ಮೇಘಾಲಯ ಸರ್ಕಾರ ಮುಂದಾಗಿದೆ.

ಉಭಯ ರಾಜ್ಯಗಳು ತಮ್ಮ ಸಂಪುಟ ಸಚಿವರ ನೇತೃತ್ವದಲ್ಲಿ ಎರಡು ಸಮಿತಿಗಳನ್ನು ಸ್ಥಾಪಿಸಲಾಗುವುದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಮಿತಿ ಮೂಲಕ ಆರಂಭದಲ್ಲಿ 12 ವಿವಾದಿತ ಪ್ರದೇಶಗಳನ್ನು ಆರು ಹಂತಗಳಲ್ಲಿ ಗಡಿ ವಿವಾದಗಳನ್ನು ಪರಿಹರಿಸುವ ಗುರಿಯನ್ನು ಹೊಂದಿವೆ. ಪ್ರತಿ ಸಮಿತಿಯು ಐದು ಸದಸ್ಯರನ್ನು ಹೊಂದಿರುತ್ತದೆ. ಇದರಲ್ಲಿ ಪ್ರತಿ ರಾಜ್ಯದ ಸಂಪುಟದ ಮಂತ್ರಿ ಸೇರಿದಂತೆ ಅಧಿಕಾರಿಗಳು, ಸ್ಥಳೀಯ ಪ್ರತಿನಿಧಿಗಳು ಸಮಿತಿಯ ಭಾಗವಾಗಿರಬಹುದು ಎಂದು ಶರ್ಮಾ ಹೇಳಿದರು.

ಎರಡೂ ಸಮತಿಯ ಸದಸ್ಯರು ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ನಾಗರಿಕ ಸಮಾಜದ ಸದಸ್ಯರೊಂದಿಗೆ ಸಂವಹನ ನಡೆಸುತ್ತಾರೆ. ಅಲ್ಲದೆ 30 ದಿನಗಳಲ್ಲಿ ಚರ್ಚೆಗಳನ್ನು ಪೂರ್ಣಗೊಳಿಸುತ್ತಾರೆ. ಮೊದಲ ಹಂತದಲ್ಲಿ ತಾರಾಬಾರಿ, ಗಿಜಾಂಗ್, ಫಾಲಿಯಾ, ಬಕ್ಲಪರಾ, ಪಿಲಿಂಗ್‌ಕಟಾ ಮತ್ತು ಖಾನಾಪರ ಈ ಆರು ಪ್ರದೇಶಗಳ ಗಡಿ ಸಮಸ್ಯೆಯನ್ನು ತಾತ್ವಿಕವಾಗಿ ಪರಿಹರಿಸಿಕೊಳ್ಳಲಾಗುವುದು ಎಂದು ಹೇಳಿದರು.

ಐತಿಹಾಸಿಕ ಪುರಾವೆಗಳು, ಜನಾಂಗೀಯತೆ, ಆಡಳಿತಾತ್ಮಕ ಅನುಕೂಲತೆ, ಸಂಬಂಧಿತ ಜನರ ಮನಸ್ಥಿತಿ ಮತ್ತು ಭಾವನೆಗಳು ಮತ್ತು ಭೂಮಿಯ ಅನ್ಯೋನ್ಯತೆ ಈ ಐದು ಅಂಶಗಳ ಆಧಾರದ ಮೇಲೆ ವಿವಾದಗಳನ್ನು ಪರಿಹರಿಸಿಕೊಳ್ಳಲು ಯತ್ನಿಸುತ್ತೇವೆ ಎಂದು ಸಂಗ್ಮಾ ಹೇಳಿದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: