ಮೈಸೂರು

ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವಾಗಲೇ ರಾಜ್ಯ ಸರ್ಕಾರದಿಂದ ವಾರಾಂತ್ಯ ಕರ್ಫ್ಯೂ ಶಾಕ್ : ವರ್ತಕರಿಂದ ಅಸಮಾಧಾನ; ಕಟ್ಟುನಿಟ್ಟಿನ ಕ್ರಮ ಡಿಸಿ

ಮೈಸೂರು,ಆ.7:-  ಮೈಸೂರು ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಸಂಬಂಧ ಲಾಕ್ ಡೌನ್ ತೆರವಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಷ್ಟರಲ್ಲೇ ರಾಜ್ಯ ಸರ್ಕಾರ ಮತ್ತೆ ಶಾಕ್ ನೀಡಿದೆ.

ಪಕ್ಕದ ರಾಜ್ಯಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರು ಕೇರಳದ ಗಡಿ ಹಂಚಿಕೊಂಡಿರುವ ಜಿಲ್ಲೆಯಾದ್ದರಿಂದ ಇಲ್ಲಿಯೂ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದೆ. ನಿನ್ನೆ ರಾತ್ರಿಯಿಂದಲೇ ವಾರಾಂತ್ಯ ಕರ್ಫ್ಯೂ ಜಾರಿಯಾಗಿದ್ದು ಸೋಮವಾರ ಬೆಳಿಗ್ಗೆ 5ಗಂಟೆಯವರೆಗೂ ಮುಂದುವರಿಯಲಿದೆ.

ಇಂದು ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವುದರಿಂದ ಸರ್ಕಾರಿ ಬಸ್ ಗಳ ಓಡಾಟ ಎಂದಿನಂತೆ ಮುಂದುವರಿದಿತ್ತಾದರೂ ಜನರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಹಣ್ಣು, ತರಕಾರಿ, ಮೀನು, ಮಾಂಸ, ದಿನಸಿ ಅಂಗಡಿಗಳು, ನ್ಯಾಯಬೆಲೆ ಅಂಗಡಿಗಳು ಸೇರಿದಂತೆ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟಿಗೆ ಮಧ್ಯಾಹ್ನ 2ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೂ ಕೂಡ ಮಧ್ಯಾಹ್ನ 2ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್ ದಿನವಿಡೀ ಕಾರ್ಯ ನಿರ್ವಹಿಸಲಿವೆಯಾದರೂ ಪಾರ್ಸೆಲ್, ಹೋಂ ಡೆಲಿವರಿಗಷ್ಟೇ  ಅವಕಾಶ ಕಲ್ಪಿಸಲಾಗಿದ್ದು, ಕುಳಿತು ತಿನ್ನಲು ಅವಕಾಶವಿಲ್ಲ.

ವಾರಾಂತ್ಯ ಕರ್ಫ್ಯೂ  ಜಾರಿಯಾದ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಕಾರಂಜಿ ಕೆರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಷ್ಟೇ ಅಲ್ಲದೆ ಮೈಸೂರು ಮೃಗಾಲಯಕ್ಕೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಸರ್ಕಾರ ವಾರಾಂತ್ಯ ಕರ್ಫ್ಯೂ ಘೋಷಣೆ ಮಾಡಿರುವುದನ್ನು ಹೋಟೆಲ್ ಮಾಲೀಕರ ಸಂಘ ತೀವ್ರವಾಗಿ ಖಂಡಿಸಿದೆ. ಮೈಸೂರಿನಲ್ಲಿ 1500ಮಂದಿ ಹೋಟೆಲ್ ಉದ್ಯಮ ನಡೆಸುತ್ತಿದ್ದು 25,000ಮಂದಿ ನೌಕರರಿದ್ದಾರೆ. ವಾರಾಂತ್ಯ ಕರ್ಫ್ಯೂ ಜಾರಿಯಿಂದ ಉದ್ಯಮ ಸಂಕಷ್ಟಕ್ಕೆ ಸಿಲುಕಲಿದೆ. ಈಗಷ್ಟೇ ಲಾಕ್ ಡೌನ್ ತೆರವಿನಿಂದ ಚೇತರಿಸಿಕೊಳ್ಳುತ್ತಿದ್ದೆವು. ಕಳೆದೊಂದುವರೆ ವರ್ಷದಿಂದ ನಮ್ಮ ಉದ್ಯಮ ನೆಲಕಚ್ಚಿದೆ. ಅದನ್ನು ಇನ್ನಷ್ಟು ಪಾತಾಳಕ್ಕೆ ತಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವೇ ಅಲ್ಲ. ಪದೇ ಪದೇ ನಿರ್ಬಂಧ ವಿಧಿಸಿ ಜನರನ್ನು ಸಂಕಷ್ಟಕ್ಕೆ ದೂಡುವ ಬದಲು ಸರ್ಕಾರ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿದರು.

ಈ ಕುರಿತು  ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮಾತನಾಡಿ  ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೆಚ್.ಡಿ ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಮೈಸೂರಿನ ಪ್ರವಾಸಿ ತಾಣಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ದೈಹಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಂಗಡಿ ಮುಂಗಟ್ಟುಗಳನ್ನು 2ಗಂಟೆಗೆ ಮುಚ್ಚಲು ಆದೇಶಿಸಿರುವುದರಿಂದ ಮಳಿಗೆಗಳ ಮಾಲೀಕರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: