ಕರ್ನಾಟಕಪ್ರಮುಖ ಸುದ್ದಿ

  ಶಿವಮೊಗ್ಗ ಜಿಲ್ಲೆ ಕೃಷಿ ಕ್ಲಸ್ಟರ್ ಆಗಿ ಹೊರಹೊಮ್ಮಬೇಕು : ಬಿ.ವೈ.ರಾಘವೇಂದ್ರ

ಸಂಸದರು- ಅಧ್ಯಕ್ಷರಿಂದ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ

ರಾಜ್ಯ( ಶಿವಮೊಗ್ಗ), ಆ.9:- ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಕೃಷಿ ಕ್ಲಸ್ಟರ್ ಎಂದು ಗುರುತಿಸಬೇಕು. ಆ ನಿಟ್ಟಿನಲ್ಲಿ ಕೃಷಿ ಸೇರಿದಂತೆ ಇತರೆ ಪೂರಕ ಚಟುವಟಿಕೆಗಳು ನಡೆಯಬೇಕು. ಈ ಕಾರ್ಯಸಾಧನೆಗೆ ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡೋಣ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಆಶಯ ವ್ಯಕ್ತಪಡಿಸಿದರು.
ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಚನ್ನಪಟ್ಟಣವನ್ನು ಮರದ ಗೊಂಬೆ ತಯಾರಿಕೆಗೆ, ಬೆಂಗಳೂರನ್ನು ಸಾಫ್ಟ್‍ವೇರ್ ಕ್ಲಸ್ಟರ್ ಹೀಗೆ ವಿವಿಧ ಜಿಲ್ಲೆಗಳನ್ನು ಕ್ಲಸ್ಟರ್ ಆಗಿ ಗುರುತಿಸಲಾಗಿದ್ದು, ಶಿವಮೊಗ್ಗ ಜಿಲೆಯನ್ನು ಕೃಷಿ ಕ್ಲಸ್ಟರ್ ಎಂದು ಹೆಮ್ಮೆಯಿಂದ ಹೇಳಬೇಕು ಆ ರೀತಿಯಲ್ಲಿ ಕೆಲಸಗಳು ಆಗಬೇಕು ಹಾಗೂ ರೈತರು ಸ್ವಾಭಿಮಾನದಿಂದ ಬದುಕಲು ಅನುವಾಗುವಂತೆ ಕೆಲಸ ಮಾಡಿ ದೇವರು ಕೊಟ್ಟ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ 1940 ರಲ್ಲಿ 48 ಕೋಟಿ ವೆಚ್ಚದಲ್ಲಿ ಇಂತಹ ಒಂದು ಬೃಹತ್ ಜಲಾಶಯವನ್ನು ನಿರ್ಮಿಸಲಾಗಿದ್ದು ಪ್ರಸ್ತುತ ಸುಮಾರು 2 ಲಕ್ಷ ಎಕರೆಗೆ ನೀರುಣಿಸುವ ಪುಣ್ಯದ ಕೆಲಸ ಈ ಜಲಾಶಯದಿಂದ ಆಗುತ್ತಿದೆ. ರಾಜ್ಯದ ದೊಡ್ಡ ಜಲಾಶಯಗಳ ಪೈಕಿ ಭದ್ರಾ ಕೂಡ ಒಂದಾಗಿದ್ದು ಇಂತಹ ಜಲಾಶಯ ಹೊಂದಿರುವ ಜಿಲ್ಲೆಯ ರೈತರಿಗೆ ನೀರಿನ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಎಚ್ಚರಿಕೆಯಿಂದ ಸಂಬಂಧಿಸಿದವರೆಲ್ಲ ಕೆಲಸ ಮಾಡಬೇಕು ಎಂದರು.
ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರ, ಚಿತ್ರದುರ್ಗ, ಹಾವೇರಿ ಗದಗ್, ವಿಜಯನಗರ ಸೇರಿ 8 ಜಿಲ್ಲೆಗಳಿಗೆ ಈ ಜಲಾಶಯದಿಂದ ನೀರಾವರಿ ಕಲ್ಪಿಸಿರುವುದು ಹೆಮ್ಮೆಯ ವಿಚಾರ. ಪ್ರಕೃತಿ ವಿರುದ್ದ ಮನಷ್ಯನ ದರ್ಪ ಮತ್ತು ವಿನಾಶಕಾರಿ ಪ್ರವೃತ್ತಿಗೆ ಪ್ರಕೃತಿ ಸಾಕಷ್ಟು ಬಾರಿ ಸುನಾಮಿ ,ಇತರೆ ಪ್ರಾಕೃತಿಕ ವಿಕೋಪಗಳ ಮೂಲಕ ಸೇಡನ್ನು ತೀರಿಸಿಕೊಳ್ಳುತ್ತಿದೆ. ಪ್ರಸ್ತುತ ಕೋವಿಡ್ ಕೂಡ ಪ್ರಕೃತಿಯ ಉತ್ತರವೇ ಆಗಿದ್ದು, ನಾವೆಲ್ಲ ಸಾಕಷ್ಟು ಎಚ್ಚರಿಕೆಯಿಂದ ಪ್ರಕೃತಿ ಜೊತೆ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಯಡಿಯೂರಪ್ಪನವರ ನೇತೃತ್ವದ ಸರ್ಕಾರದಲ್ಲಿ ಕಳೆದ 2 ವರ್ಷಗಳಲ್ಲಿ ಬೃಹತ್ ನೀರಾವರಿ ಇಲಾಖೆಯಿಂದ ಜಿಲ್ಲೆಗೆ ಸುಮಾರು 3 ಸಾವಿರ ಕೋಟಿಗೂ ಹೆಚ್ಚು ಅನುದಾನ ತಂದು ಅನೇಕ ಅಭಿವೃದ್ದಿ ಕೆಲಸ ಕೈಗೊಳ್ಳಲಾಗಿದೆ. ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ 350 ಕೋಟಿ ಅನುದಾನದಲ್ಲಿ ಹೊಸಹಳ್ಳಿ ಏತನೀರಾವರಿ, ಸೊರಬ ತಾಲ್ಲೂಕಿನ ಮೂಗೂರು, ಮೂಡಿ ಏತ ನೀರಾವರಿ, ಶಿಕಾರಿಪುರ ತಾಲ್ಲೂಕಿನ ಉಡುಗಣಿ ತಾಳಗುಂದ ಹೊಸೂರು ಹೋಬಳಿ, ಬೈಂದೂರು ಕ್ಷೇತ್ರದ ಸಿದ್ದಾಪುರ ನೀರಾವರಿ ಯೋಜನೆ ಕಾಮಗಾರಿಗಳು ನಡೆಯುತ್ತಿವೆ. ಹಲವು ಕ್ಷೇತ್ರಗಳಲ್ಲಿ ಸುಮಾರು 200 ಕೋಟಿ ವೆಚ್ಚ ರೈತ ಸಮುದಾಯ ಭವನಗಳ ನಿರ್ಮಾಣ, ರಸ್ತೆ ಕಾಮಗಾರಿ, ಅಚ್ಚುಕಟ್ಟು ಪ್ರದೇಶದ ಕೆರೆಗಳಲ್ಲಿ ಹೂಳು ತೆಗೆಯುವುದು, ಚಾನಲ್ ಗಳ ದುರಸ್ತಿ ಸೇರಿದಂತೆ ಅನೇಕ ಕೆಲಸ ಆಗುತ್ತಿವೆ. ಬಯಲುಸೀಮೆ ಭಾಗದಲ್ಲಿ 20 ಟಿಎಂಸಿ ನೀರು ನೀಡುವ ಉದ್ದೇಶದಿಂದ ಭದ್ರಾ ಮೇಲ್ಚಂಡೆ ಯೋಜನೆಯಡಿ ಚಿತ್ರದುರ್ಗ,ಹೊಸದುರ್ಗ ,ಹಿರಿಯೂರು ಭಾಗದಲ್ಲಿ ಮೊದಲನೇ ಹಂತದ ಕೆಲಸ ಆಗಿದೆ.
75 ಟಿಂಎಂಸಿ ನೀರಿನ ಸಾಮಥ್ರ್ಯ ಹೊಂದಿರುವ ಭದ್ರಾ ಜಲಾಶಯ ರಾಜ್ಯದಲ್ಲಿ ಇರುವ ಬೃಹತ್ ಜಲಾಶಯಗಳಲ್ಲಿ ಒಂದಾಗಿದ್ದು, ಇಲ್ಲಿ ಗುಣಮಟ್ಟದದ ಕಾಮಗಾರಿಗಳು ಆಗಬೇಕು. ಅಧಿಕಾರಿಗಳು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಕಳಪೆ ಕಾಮಗಾರಿ ಬಗ್ಗೆ ಕೆಲ ಸಂಘಟನೆಗಳು ಪ್ರಶ್ನಿಸಿದ್ದು, ಅದನ್ನು ತಿದ್ದಿಕೊಂಡು ಅಗತ್ಯವಿರುವ ಸಣ್ಣ ಪುಟ್ಟ ರಿಪೇರಿಗಳನ್ನು ಸಹ ಅತಿ ಎಚ್ಚರಿಕೆಯಿಂದ ಮಾಡಬೇಕು ಎಂದ ಅವರು ಕೋವಿಡ್ ಸಂಕಷ್ಟದಲ್ಲಿ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ಸಾಧ್ಯವಾಗಲಿಲ್ಲ. ಆರ್ಥಿಕ ಸವಾಲಿನ ನಡುವೆಯೂ ಸಮಪರ್ಕಕವಾಗಿ ಎಲ್ಲ ಜಲಾಶಯಗಳ ನೀರನ್ನು ಉಪಯೋಗಿಸಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದರು.
ಈಗಾಗಲೇ ಕೋವಿಡ್ 3ನೇ ಅಲೆ ಆತಂಕ ಎದುರಾಗಿದೆ. ರಾತ್ರಿ ಕರ್ಫ್ಯೂ ಜಾರಿಯಾಗಿದೆ. ಕೋವಿಡ್‍ನಿಂದ ಮುಕ್ತರಾದಂತಹ ನಮ್ಮ ಈ ನಡವಳಿಕೆ ಬೇಡ. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದ್ದಂತಹ ಅನುದಾನ ಉಪಯೋಗಿಸಿಕೊಂಡು ಕಾಡಾ ಅಧ್ಯಕ್ಷರು ಅತ್ಯುತ್ತಮವಾಗಿ ರೈತ ಪರ ಕೆಲಸ ಮಾಡುತ್ತಿದ್ದಾರೆ. ಕಳೆದ ವಾರ ಪ್ರಾಧಿಕಾರದ ಸಭೆ ನಡೆಸಿ ಭದ್ರಾ ಯೋಜನೆಗೆ ಮೊದಲನೇ ಹಂತದಲ್ಲಿ ರೂ. 50 ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸಚಿವ ಸಂಪುಟದ ಖಾತೆ ಹಂಚಿಕೆ ಆದ ಮೇಲೆ ಮಂತ್ರಿಗಳನ್ನು ಭೇಟಿ ಮಾಡಿ ಹೆಚ್ಚಿನ ಅನುದಾನ ತಂದು ಅಭಿವೃದ್ದಿ ಕೆಲಸ ಮಾಡುವ ಭರವಸೆ ವ್ಯಕ್ತಪಡಿಸಿದರು.
ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಮಾತನಾಡಿ, ಯೋಜನೆಯ ಕೊನೆ ಭಾಗದ ರೈತರಿಗೆ ನೀರು ಕೊಡಬೇಕೆಂದು ನನ್ನ ಹಠವಾಗಿದ್ದು ಈ ನಿಟ್ಟಿನಲ್ಲಿ ಕಾರ್ಯಗತಳಾಗಿದ್ದೇನೆ. ರೈತರು ಮತ್ತು ಅಧಿಕಾರಿಗಳ ನಡುವಿನ ಕಂದಕದಿಂದ ಇದು ಸಾಧ್ಯವಾಗುತ್ತಿರಲಿಲ್ಲ. ರೈತರು ಮತ್ತು ಅಧಿಕಾರಿಗಳನ್ನು ಸೇರಿಸುವ ಕೆಲಸ ಮಾಡುತ್ತಿದ್ದೇನೆ. ಭದ್ರಾ ಮೇಲ್ದಂಡೆಗೆ ನೀರು ಕೊಡುವ ಬಗ್ಗೆ ವಿರೋಧವಿಲ್ಲ. ಆದರೆ ನಮ್ಮ ಜಲಾಶಯದ ಪರಿಸ್ಥಿತಿ ಬಗ್ಗೆ ನಾನು ಸಂಸದರಿಗೆ ಹೇಳಲೇಬೇಕು. 15 ಟಿಎಂಸಿ ಭದ್ರಾದಿಂದ 16 ಟಿಎಂಸಿ ತುಂಗಾದಿಂದ ನೀರೆತ್ತಬೇಕೆಂದು ಡಿಪಿಆರ್ ಆಗಿದೆ. ಆದರೆ 29 ಟಿಎಂಸಿ ನೀರನ್ನೂ ತುಂಗಾದಿಂದಲೇ ಲಿಫ್ಟ್ ಮಾಡಿದರೆ ಅನುಕೂಲ ಆಗುತ್ತದೆ. ನಾಲ್ಕು ಮೋಟಾರ್ ಶುರು ಮಾಡಿದರೆ ನಮ್ಮ ರೈತರಿಗೆ ತೊಂದರೆ ಆಗಲಿದೆ. ಆದ ಕಾರಣ ಡಿಪಿಆರ್ ನಲ್ಲಿ 29 ಟಿಎಂಸಿ ನೀರನ್ನು ತುಂಗಾದಿಂದಲೇ ಲಿಫ್ಟ್ ಮಾಡುವಂತೆ ಬದಲಾವಣೆ ಮಾಡಬೇಕೆಂದು ಆಗ್ರಹಿಸಿದರು.
1980 ರಿಂದಲೇ ರೈತ ಚಳವಳಿಯಲ್ಲಿ ಪಾಲ್ಗೊಂಡ ನಾನು ಕುಟುಂಬ, ಮಕ್ಕಳೊಂದಿಗೆ ಕಾಲ ಕಳೆದದ್ದಕ್ಕಿಂತ ಹೆಚ್ಚಾಗಿ ರೈತರೊಂದಿಗೆ ಕಳೆದಿದ್ದೇನೆ. ಯಡಿಯೂರಪ್ಪನವರು ನನಗೆ ಮಾದರಿಯಾಗಿದ್ದು ಈ ಜವಾಬ್ದಾರಿ ನೀಡಿದ್ದಾರೆ. ನಾನು ಪ್ರಾಮಾಣಿಕೆಯಿಂದ ಈ ಜವಾಬ್ದಾರಿ ನಿರ್ವಹಿಸುತ್ತೇನೆ ಹಾಗೂ ಎಂದಿಗೂ ರೈತರಿಗೆ ತೊಂದರೆ ಆಗದಂತೆ ಕೆಲಸ ಮಾಡುತ್ತೇನೆ ಎಂದರು.
ಮಲೆನಾಡು ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪದ್ಮನಾಭ ಭಟ್ ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ನೀರಿಗೆ ತಾಯಿ ಸ್ಥಾನ ನೀಡಿದ್ದು, ಬಾಗಿನ ಅರ್ಪಿಸುವ ಮೂಲಕ ತಾಯಿಯನ್ನು ಭಕ್ತಿಪೂರ್ವಕವಾಗಿ ನಮಿಸುವ ಕೆಲಸ ಇಂದು ಆಗಿದೆ. ಸಾಮಾನ್ಯವಾಗಿ ಆಗಸ್ಟ್ ಕೊನೆಯಲ್ಲಿ ಭದ್ರಾ ಜಲಾಶಯ ತುಂಬುತಿತ್ತು. ಈ ವರ್ಷ ಮಾಹೆಯ ಆರಂಭದಲ್ಲೇ ಜಲಾಶಯ ತುಂಬಿದ್ದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ರೈತ ಸಂಘದ ಹಿನ್ನೆಲೆಯಿಂದ ಬಂದಿರುವ ಭದ್ರ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಅಭಿವೃದ್ದಿ ನಿಗಮದ ಉಪಾಧ್ಯಕ್ಷ ದತ್ತಾತ್ರಿ, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಭದ್ರ ಕಾಡಾ ಸದಸ್ಯರಾದ ಷಡಕ್ಷರಪ್ಪ ನಾಗಸಮುದ್ರ, ಕೆಎಸ್.ರುದ್ರಮೂರ್ತಿ, ಹರಿಹರದ ರಾಜಪ್ಪ, ಹೊನ್ನಾಳಿಯ ಹನುಮಂತಪ್ಪ, ಶಿಕಾರಿಪುರದ ಮಂಜುನಾಥ್, ತರೀಕೆರೆಯ ವಿನಾಯಕ್, ರಾಜ್ಯ ರೈತಮುಖಂಡರು, ಜನಪ್ರತಿನಿಧಿಗಳು, ಕಾಡ ಆಡಳಿತಾಧಿಕಾರಿ ಪ್ರಸಾದ್, ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರ ಶಿವಾನಂದ ಬಣಕಾರ್, ಬಿ.ಆರ್ ಪ್ರಾಜೆಕ್ಟ್ ಅಧೀಕ್ಷಕ ಅಭಿಯಂತರ ಚಂದ್ರಹಾಸ್ , ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: