Uncategorized

ಟೀಂ ಇಂಡಿಯಾ ಕೋಚ್‌ ಹುದ್ದೆಗೆ ರವಿಶಾಸ್ತ್ರಿ ಗುಡ್ ಬೈ? ಮುಂದಿನ ಕೋಚ್ ರಾಹುಲ್ ದ್ರಾವಿಡ್?

ನವದೆಹಲಿ,ಆ.11-ಟೀಂ ಇಂಡಿಯಾದ ಹೆಡ್‌ ಕೋಚ್‌ ರವಿಶಾಸ್ತ್ರಿ ಸ್ಥಾನವನ್ನು ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅಲಂಕರಿಸಲಿದ್ದಾರೆ ಎನ್ನಲಾಗುತ್ತಿದೆ.

ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ಸ್ಥಾನಕ್ಕೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಅರ್ಜಿ ಆಹ್ವಾನಿಸಿದ ಬೆನ್ನಲ್ಲೆ ಭಾರತ ಕ್ರಿಕೆಟ್‌ ಹಿರಿಯರ ತಂಡದಲ್ಲಿ ಮಾಜಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್ ಪ್ರಮುಖ ಹುದ್ದೆ ಅಲಂಕರಿಸಲಿದ್ದಾರೆಂಬ ವದಂತಿಗಳು ಶುರುವಾಗಿವೆ.

ಅಲ್ಲದೆ, ಯುಎಇನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಮುಖ್ಯ ತರಬೇತುದಾರನ ಸ್ಥಾನವನ್ನು ರವಿಶಾಸ್ತ್ರಿ ತೊರೆಯಲಿದ್ದಾರೆ ಎಂದು ವರದಿಯಾಗಿದೆ.

ಒಂದು ವೇಳೆ ರವಿಶಾಸ್ತ್ರಿ ಅವರು ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಹುದ್ದೆಯಿಂದ ಕೆಳಗೆ ಇಳಿಯಲು ನಿರ್ಧರಿಸಿದರೆ ಈ ರೇಸ್‌ನಲ್ಲಿ ಭಾರತದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಮುಂಚೂಣಿಯಲ್ಲಿರುತ್ತಾರೆ. ಆದರೆ, ಇತ್ತೀಚೆಗೆ ಮುಕ್ತಾಯವಾಗಿದ್ದ ಶ್ರೀಲಂಕಾ ಪ್ರವಾಸದ ಸಮಯದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಾಹುಲ್‌ ದ್ರಾವಿಡ್‌, ಪೂರ್ಣಾವಧಿ ಕೋಚ್ ಆಗುವ ಬಗ್ಗೆ ನಾನು ಯೋಚಿಸಿಲ್ಲ ಹಾಗೂ ಸದ್ಯ ತಾನು ಮಾಡುತ್ತಿರುವ ಕಾರ್ಯವನ್ನು ಆನಂದಿಸುತ್ತಿದ್ದೇನೆ ಎಂದಷ್ಟೇ ಹೇಳಿದ್ದರು.

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜೇ ಶಾ ಹಾಗೂ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಅವರು ಇಂದು(ಬುಧವಾರ) ಲಂಡನ್‌ಗೆ ತೆರಳಲಿದ್ದಾರೆ ಹಾಗೂ ಹೆಡ್‌ ಕೋಚ್‌ ರವಿಶಾಸ್ತ್ರಿ ಹಾಗೂ ಟೀಮ್‌ ಇಂಡಿಯಾದೊಂದಿಗೆ ಪ್ರಸಕ್ತ ಪ್ರವಾಸದ ಬಗ್ಗೆ ಹಾಗೂ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಆದರೆ, ರವಿಶಾಸ್ತ್ರಿ ಮುಖ್ಯ ಕೊಚ್‌ ಆಗಿ ಮುಂದುವರಿಯಲು ಎದುರು ನೋಡುತ್ತಿಲ್ಲವಾದರೆ, ಖಂಡಿತಾ ಈ ವಿಷಯದ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಉದ್ಯಾನ ನಗರಿ ಬೆಂಗಳೂರಿನಲ್ಲಿರುವ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯ ಮುಖಸ್ಥ ಹುದ್ದೆಗೆ ಬಿಸಿಸಿಐ ಮಂಗಳವಾರ ಅರ್ಜಿ ಆಹ್ವಾನಿಸಿದೆ ಹಾಗೂ ಅರ್ಜಿ ಸಲ್ಲಿಸಲು ಆಗಸ್ಟ್‌ 15 ಕೊನೆಯ ದಿನಾಂಕವಾಗಿದೆ.

ಪ್ರಸ್ತುತ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ, ಇಂಗ್ಲೆಂಡ್‌ ಪ್ರವಾಸದಲ್ಲಿದ್ದು, ಆಗಸ್ಟ್‌ 12 ರಿಂದ ಇತಿಹಾಸ ಪ್ರಸಿದ್ಧ ಲಾರ್ಡ್ಸ್‌ ಅಂಗಣದಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದೆ. ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ಇತ್ತೀಚೆಗೆ ಮುಗಿದಿದ್ದ ಮೊದಲನೇ ಟೆಸ್ಟ್‌ ಡ್ರಾ ಆಗಿತ್ತು. ಬಹುತೇಕ ಗೆಲುವಿನ ಸನಿಹದಲ್ಲಿದ್ದ ಭಾರತ ತಂಡಕ್ಕೆ ಪಂದ್ಯದ ಕೊನೆಯ ದಿನ ಮಳೆ ಬಂದಿದ್ದರಿಂದ ಕೊಹ್ಲಿ ಪಡೆಯ ಗೆಲುವಿನ ಕನಸು ಭಗ್ನವಾಗಿತ್ತು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: