ಮೈಸೂರು

ವಿವೇಕದ ಹೆಸರಿನಲ್ಲಿ ಅವಿವೇಕತನ ಮಾಡುವುದು ಸರಿಯಲ್ಲ : ಜ್ಞಾನ ಪ್ರಕಾಶ ಸ್ವಾಮೀಜಿ

ಮುಂದುವರಿದ ಎನ್ ಟಿ ಎಂ ಶಾಲೆ ಉಳಿಸಿ ಹೋರಾಟ

ಮೈಸೂರು,ಆ.11:-ವಿವೇಕದ ಹೆಸರಿನಲ್ಲಿ ಅವಿವೇಕತನ ಮಾಡುವುದು ಸರಿಯಲ್ಲ ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಕಿಡಿಕಾರಿದರು.

ಎನ್ ಟಿ ಎಂ ಶಾಲೆ ಉಳಿಸಿ ಹೋರಾಟ ಇಂದೂ ಕೂಡ ಮುಂದುವರಿದಿದ್ದು, ವಿವಿಧ ಮಠಾಧೀಶರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು  ಇಡೀ ಭಾರತ ದೇಶದಲ್ಲಿ ಎನ್ ಟಿ ಎಂ ಶಾಲೆ ಒಂದು ಇತಿಹಾಸ. ಇದು ಹೆಣ್ಣು ಮಕ್ಕಳ ಶಾಲೆ.  ಯೋಗ್ಯತೆ ಇದ್ದರೆ ಇಂತಹ ನೂರು ಶಾಲೆ ತೆರೆಯಿರಿ, ಹೆಣ್ಣುಮಕ್ಕಳಿಗೋಸ್ಕರ, ಹೆಣ್ಣು ಮಕ್ಕಳ ಸಬಲೀಕರಣಕ್ಕೋಸ್ಕರ ಹಲವಾರು ಕಾರ್ಯಕ್ರಮ ಕೈಗೊಳ್ಳಿ. ವಿವೇಕಾನಂದರನ್ನು ಸ್ಮಾರಕದ ರೂಪದಲ್ಲಿ ನೋಡಬೇಡಿ ಎಂದು ರಾಮಕೃಷ್ಣಾಶ್ರಮದವರಿಗೆ ಕಿವಿ ಮಾತು ಹೇಳಿದರು. ವಿವೇಕಾನಂದರ ಹೆಸರಿನಲ್ಲಿ ಅಪಚಾರ ಮಾಡಲಾಗುತ್ತಿದೆ. ಸಮಾಧಿಯನ್ನು ಉರುಳಿಸಿ , ಅದರ ಮೇಲೆ ಇನ್ನೊಂದು ಸಮಾಧಿಯನ್ನು ಮಾಡುವುದು ಇತಿಹಾಸಕ್ಕೆ ಮಾಡುವ ಅವಮಾನ ಅಲ್ವಾ? ರಾಮಕೃಷ್ಣಾಶ್ರಮದ ಸ್ವಾಮೀಜಿಗಳಿಗೆ ಪ್ರಜ್ಞೆ, ಕರುಣೆ, ಮೈತ್ರಿ ಅನ್ನುವುದು ಇದೆಯಾ? ಕಳೆದ 45ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಆ ಹೋರಾಟಗಾರರನ್ನು ಕರೆಯೋಣ, ನಮಗೆ ಸ್ಮಾರಕದ ಸಹವಾಸನೇ ಬೇಡ, ಆ ಶಾಲೆಯನ್ನು ನಾನೇ ದತ್ತು ತಗೋತೆನೆ. ಆ ಶಾಲೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿ ಮಾಡುತ್ತೇನೆ. ನನಗೆ ಯಾವ ಸ್ಮಾರಕವೂ ಬೇಡ ಎನ್ನುವ ಕನಿಷ್ಠ ಜ್ಞಾನವಾದರೂ ಬೇಡವಾ? ಇದು ಬಹಳ ದುಃಖದ ವಿಷಯವಾಗಿದೆ. ಏನೋ 50 ಮಂದಿ ಪೇಪರಲ್ಲಿ ಫೋಟೋ ಬರತ್ತೆ ಅಂತ ಅದಕ್ಕೆ ಪ್ರತಿಭಟನೆಗೆ  ಕೂತ್ಕೊಂಡಿದ್ದಾರೆ ಅಂದ್ಕೋಬಹುದು,  ಹೋರಾಟಗಾರರು ಸಭೆ ನಡೆಸಿ ಸ್ಪಷ್ಟ ಮಾಡಬೇಕು.   ಜಿಲ್ಲಾಧಿಕಾರಿಗಳು ಸ್ಪಷ್ಟ ವರದಿ ಕೊಟ್ಟಿದ್ದಾರೆ. ಪಕ್ಕದಲ್ಲೇ ನಿರಂಜನ ಮಠ ಇದೆ. ಬಹಳ ಪುರಾತನವಾದಂತಹ ಮಠ ಅದು, ಅದರ ಇತಿಹಾಸವೂ ನಾಶವಾಗಲಾ? ಶಾಲೆನೂ ನಾಶವಾಗಲಾ? ಯಾಕಿಷ್ಟು ಅವಿವೇಕ? ವಿವೇಕದ ಹೆಸರಲ್ಲಿ ಯಾಕಿಷ್ಟು ಅವಿವೇಕ? ಯಾವುದು ವಿವೇಕ, ಯಾವುದು ಅವಿವೇಕ ಎನ್ನುವ ಚರ್ಚೆಯಾಗಬೇಕಲ್ವಾ ಎಂದು ಪ್ರಶ್ನಿಸಿದರು.

ವಿವೇಕ ಯಾವುದಪ್ಪಾ ಅಂದರೆ ಅಕ್ಷರ ಕೊಡತಕ್ಕಂತದ್ದು, ಅರಿವು ಕೊಡತಕ್ಕಂತದ್ದು . ಇತಿಹಾಸ ಪ್ರಸಿದ್ಧ ಶಾಲೆಯನ್ನು ಉರುಳಿಸಿ ಸ್ಮಾರಕ ಕಟ್ಟುತ್ತೇನೆ ಎನ್ನುವುದು ವಿವೇಕ ಅಲ್ಲ, ಗುಡಿಗೋಪುರಗಳ ಸಂಸ್ಕೃತಿಯನ್ನು ವಿವೇಕಾನಂದರು ವಿರೋಧಿಸಿದ್ದರು. ಗುಡಿಗೋಪುರಗಳ ಹೆಸರಲ್ಲಿ ನರಬಲಿ ನಡೆಯುತ್ತಿದೆ ಎಂದು ಮೊಟ್ಟಮೊದಲು ತಿರುಗಿಬಿದ್ದವರು ವಿವೇಕಾನಂದರು. ಅಂತಹವರ ಹೆಸರಲ್ಲಿ ನೀವೆಷ್ಟು ಅಪಚಾರ ಮಾಡುತ್ತಿದ್ದೀರಿ, ನಿಜವಾಗಲೂ ನಿಮಗೆ ಬದ್ಧತೆ, ಕಾಳಜಿ, ಇತಿಹಾಸದ ಬಗ್ಗೆ ಗೌರವವಿದ್ದರೆ ದಯಮಾಡಿ ಶಾಲೆಯ ವಿಷಯಕ್ಕೆ ಬರಬೇಡಿ. ಸ್ಮಾರಕಕ್ಕೆ ಅಗತ್ಯವಾದ 64ಎಕ್ರೆ ಜಾಗ ಇದೆ. ಅಲ್ಲಿಯೇ ಕಟ್ಟಿಸಿ. ವಿವೇಕಾನಂದರ ಹೆಸರೇಳಿದರೆ ಯಾವ ಸರ್ಕಾರ ಬೇಕಾದರೂ ಕೊಡತ್ತೆ.  ಶಾಲೆಯ ಒಂದು ಇಟ್ಟಿಗೆಯನ್ನೂ ಮುಟ್ಟಲು ಬಿಡಲ್ಲ, ಹೈಕೋರ್ಟ್ ಸುಪ್ರೀಂ ಅಲ್ಲ, ಜನರೇ ಸುಪ್ರೀಂ. ಜನರ ಭಾವನೆಗೆ ವಿರುದ್ಧವಾದಾಗ ಕೋರ್ಟ್ ಕೂಡ ಏನೂ ಆದೇಶ ಮಾಡಲಿಕ್ಕಾಗಲ್ಲ. ಮಹಾರಾಣಿಯವರ ಇತಿಹಾಸ ಉಳಿಯಬೇಕು. ಶಾಲೆಯನ್ನು ಉಳಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಬೇಕು. ಪಕ್ಕದಲ್ಲಿರುವ ನಿರಂಜನ ಮಠವನ್ನು ಉಳಿಸಬೇಕು. ಇವೆಲ್ಲವನ್ನೂ ಉಳಿಸುವುದು ಮೈಸೂರಿನ ಕನ್ನಡಪ್ರೇಮಿಗಳಾದ ನಮ್ಮ ಜವಾಬ್ದಾರಿ.  ಪ್ರತಿದಿನ ಒಂದೊಂದು ಸಂಘಟನೆಗಳು ಹೋರಾಟ ನಡೆಸುತ್ತಿವೆ. ಉಸ್ತುವಾರಿ ಸಚಿವರಿಗೆ ಹೋರಾಟ ನಡೆಯುತ್ತಿರುವುದು ಗೊತ್ತೇ ಇಲ್ಲ. ರಾಜಕೀಯ ಪಕ್ಷಗಳ ಬಗ್ಗೆ ಮಾತನಾಡಲ್ಲ, ರಾಜಕೀಯೇತರ ಹೋರಾಟವಾಗಿರುವುದರಿಂದ ಯಾವುದೇ ಪಕ್ಷಗಳು ತಮ್ಮ ಬೆಳೆಯನ್ನು ಬೇಯಿಸಿಕೊಳ್ಳುವುದು ಬೇಡ. ರಾಮಕೃಷ್ಣಾಶ್ರಮದವರು ಈ ಜಾಗವನ್ನು ಕಬಳಿಸಲು ಕುತಂತ್ರ ನಡೆಸಿದ್ದಾರೆ. ಅದು ಸಫಲವಾಗಲ್ಲ. ವಿವೇಕಾನಂದರನ್ನು ಗೌರವದಿಂದ ಕರೆಯಿಸಿ ಚಿಕಾಗೋಗೆ ಹೋಗುವಂತೆ ಮಾಡಿದ್ದು ಗೌರವವಲ್ಲವೇ? ಹಿರಿಯ ಸಾಹಿತಿಗಳು ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು, ವಿವೇಕಾನಂದರ ಸ್ಮಾರಕಕ್ಕೆ ಅವಕಾಶ ಕೊಡದಿದ್ದರೆ ಕಪ್ಪು ಚುಕ್ಕೆ ಆಗತ್ತೆ ಅನ್ನುತ್ತಾರೆ. ಮಹಾರಾಣಿಯವರು ಕಟ್ಟಿದ ಶಾಲೆ ಕೆಡವಿ ಅದರ ಮೇಲೆ ವಿವೇಕಸ್ಮಾರಕ ಕಟ್ಟಿದರೆ ಗೌರವನಾ? ಸಾಹಿತಿಗಳು ಯೋಚಿಸಬೇಕು.  ಶಾಲೆ ಉಳಿಯಬೇಕು,   ಮೈಸೂರಿನ ಘನತೆ ಉಳಿಯಬೇಕು. ಬೃಹತ್ ರ್ಯಾಲಿ ನಡೆಸಿ ನಿದ್ದೆ ಮಾಡುತ್ತಿರುವ ರಾಮಕೃಷ್ಣಾಶ್ರಮದವರನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಮಠಾಧೀಶರು, ಪುರುಷೋತ್ತಮ, ಪ.ಮಲ್ಲೇಶ, ಮೋಹನಕುಮಾರಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: