ದೇಶಪ್ರಮುಖ ಸುದ್ದಿ

ಸಂಸತ್ತಿನ ಮೇಲ್ಮನೆಯಲ್ಲಿ ಪ್ರತಿಪಕ್ಷಗಳ ಗದ್ದಲ: ಸಂಸದರ ವರ್ತನೆಯನ್ನು ಖಂಡಿಸಿ ಭಾವುಕರಾದ ಸಭಾಪತಿ ವೆಂಕಯ್ಯನಾಯ್ಡು

ನವದೆಹಲಿ,ಆ.11-ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಆರಂಭವಾದಗಿನಿಂದ ಸಂಸದರ ಅಶಿಸ್ತಿನ ವರ್ತನೆ ವಿರುದ್ಧ ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಂಸತ್ತಿನ ಮೇಲ್ಮನೆಯಲ್ಲಿ ಮಂಗಳವಾರ ಉಂಟಾದ ಗದ್ದಲಗಳ ಬಗ್ಗೆ ಇಂದು ಮಾತನಾಡುತ್ತಾ ಅವರು ಭಾವುಕರಾದರು.

ಕಲಾಪ ಸುಸೂತ್ರವಾಗಿ ನಡೆದುಕೊಂಡು ಹೋಗಲು ಅನುವು ಮಾಡಿಕೊಡದೇ ರಾಜ್ಯಸಭೆಯಲ್ಲಿ ಪದೇಪದೆ ಗದ್ದಲ ಸೃಷ್ಟಿಸುತ್ತಿರುವುದನ್ನು ಖಂಡಿಸಿದರು. ಸಂಸತ್ತಿನ ಟೇಬಲ್​ ಮೇಲೆ ಎಗರುವ ಮೂಲಕ ಕೆಲ ಸದಸ್ಯರು ಸದನದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ. ಇದೇ ನೋವಿನಿಂದ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆಂದು ಭಾವುಕರಾದರು.

ಬಳಿಕ ಕೆಲ ಕಾಲ ಮೌನರಾದ ಸಭಾಪತಿಗಳು, ನಂತರ ಮಾತನಾಡಿ, ಈ ಬಾರಿಯ ಅಧಿವೇಶನವನ್ನು ಇಷ್ಟು ಕೆಳಮಟ್ಟಕ್ಕೆ ಇಳಿಸಲು ಕಾರಣ, ಪ್ರಚೋದನೆಯನ್ನು ಕಂಡುಹಿಡಿಯಲು ನಾನು ಹೆಣಗಾಡುತ್ತಿದ್ದೇನೆಂದು ಹೇಳಿದರು. ಪ್ರಜಾಪ್ರಭುತ್ವದ ದೇವಸ್ಥಾನದಲ್ಲಿ ಇಂತಹ ಕೃತ್ಯಗಳು ನಡೆದಿದ್ದು, ಸಭಾಪತಿಯಾಗಿ ಇದರ ಪರಿಣಾಮಗಳನ್ನು ಊಹಿಸಲು ನನಗೆ ಭಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಬಳಿ ಆಕ್ಷೇಪಣೆಗಳಿದ್ದರೆ ಆ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬಹುದು. ಪ್ರತಿಭಟಿಸಬಹುದು ಅಥವಾ ಅದರ ವಿರುದ್ಧ ಮತ ಚಲಾಯಿಸಬಹುದು. ಆದರೆ, ಈ ಬಗ್ಗೆ ಅಂತಿಮವಾಗಿ ಸರ್ಕಾರನೇ ನಿರ್ಧಾರ ಕೈಗೊಳ್ಳಬೇಕು. ಇದನ್ನು ಮಾಡಿ, ಇನದ್ನು ಮಾಡಬೇಡಿ ಎಂದು ನೀವು ಸರ್ಕಾರವನ್ನು ಒತ್ತಾಯಿಸಲು ಸಾಧ್ಯವಿಲ್ಲ. ದಾಖಲೆಗಳೊಂದಿಗೆ ಚರ್ಚೆ ನಡೆಸಲು ಸದಸ್ಯರಿದೆ ನಿನ್ನೆ ಸುವರ್ಣಾವಕಾಶಗಳಿತ್ತು. ಆದರೆ, ಕಲಾಪ ಸುಗಮವಾಗಿ ನಡೆಯುವಂತೆ ಬಿಡದಿರುವುದೇ ಅವರ ಏಕೈಕ ಉದ್ದೇಶವಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಪೆಗಾಸಸ್ ಬೇಹುಗಾರಿಕೆ ಮತ್ತು ಕೃಷಿ ಕಾಯ್ದೆಗಳ ಸಂಬಂಧ ಚರ್ಚೆಗೆ ಅವಕಾಶಕ್ಕೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯ ಪ್ರತಾಪ್ ಸಿಂಗ್ ಬಜ್ವಾ, ಸದನದ ಪ್ರಧಾನ ಕಾರ್ಯದರ್ಶಿಗಳ ಮೇಜು ಹತ್ತಿ ಕೋಲಾಹಲವೆಬ್ಬಿಸಿದ ಘಟನೆ ನಿನ್ನೆ ರಾಜ್ಯಸಭೆಯಲ್ಲಿ ನಡೆದಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಗಿತ್ತು. ಬಜ್ವಾ ಕೃಷಿ ಮಸೂದೆ ಚರ್ಚೆಗೆ ಆಗ್ರಹಿಸಿ ಮೇಜು ಹತ್ತಿ ಕಾಗದಪತ್ರ ಎಸೆದರು. ಆಪ್ ಸದಸ್ಯ ಸಂಜಯ ಸಿಂಗ್ ಸೇರಿ ಕೆಲವರು ಮೇಜಿನ ಮೇಲೆ ಕುಳಿತಿದ್ದರು.

ಅಧಿವೇಶನ ಆರಂಭವಾದಗಿನಿಂದ ಅನೇಕ ವಿಚಾರವಾಗಿ ಸದನದಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆಗಳು ಗದ್ದಲ ರೂಪಕ್ಕೆ ತಿರುಗಿ ಸದನ ಸರಿಯಾಗಿ ನಡೆದುಕೊಂಡು ಹೋಗಲು ತೊಂದರೆ ಆಗುತ್ತಿರುವುದರಿಂದ ವೆಂಕಯ್ಯನಾಯ್ಡು ಅವರು ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: