ಪ್ರಮುಖ ಸುದ್ದಿಮನರಂಜನೆ

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿರುವ ನಟಿ ನಯನ ತಾರಾ!

ಚೆನ್ನೈ,ಆ.11-ನಟಿ ನಯನತಾರಾ ಕೊನೆಗೂ ತಮ್ಮ ನಿಶ್ಚಿತಾರ್ಥದ ಬಗ್ಗೆ ಬಾಯ್ಬಿಟ್ಟಿದ್ದಾರೆ. ನಯನ ತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಸದ್ದಿಲ್ಲದೆ ಎಂಗೇಜ್ ಆಗಿದ್ದಾರೆ.

ತಮಿಳಿನ ಖಾಸಗಿ ವಾಹಿನಿಯ ಶೋವೊಂದರಲ್ಲಿ ನಟಿ ನಯನತಾರಾ ಭಾಗವಹಿಸಿದ್ದು, ಕಾರ್ಯಕ್ರಮದಲ್ಲಿ ಎಂಗೇಜ್ ಮೆಂಟ್ ಬಗ್ಗೆ ಮಾತನಾಡಿದ್ದಾರೆ. ಸದ್ಯ ಪ್ರೋಮೋ ಬಿಡುಗಡೆಯಾಗಿದ್ದು, ಎಂಗೇಜ್ ಮೆಂಟ್ ರಿಂಗ್ ಬಗ್ಗೆ ಮಾತನಾಡಿರುವುದು ವೈರಲ್ ಆಗುತ್ತಿದೆ.

ಕಾರ್ಯಕ್ರಮದಲ್ಲಿ ನಿರೂಪಕಿ ನಯನತಾರಾ ಅವರ ಕೈಯಲ್ಲಿರುವ ರಿಂಗ್ ಬಗ್ಗೆ ಕೇಳುತ್ತಾರೆ ಆಗ ”ಇದು ಎಂಗೇಜ್‌ಮೆಂಟ್ ರಿಂಗ್” ಎಂದು ತಮ್ಮ ಎಡಗೈ ಬೆರಳಿಗೆ ತೊಟ್ಟಿರುವ ಚಿನ್ನದ ಉಂಗುರವನ್ನು ತೋರಿಸಿದ್ದಾರೆ. ಆ ಮೂಲಕ ತಮಗೆ ವಿಘ್ನೇಶ್ ಶಿವನ್ ಜೊತೆಗೆ ನಿಶ್ಚಿತಾರ್ಥ ಆಗಿರುವುದನ್ನು ನಯನತಾರಾ ದೃಢಪಡಿಸಿದ್ದಾರೆ. ಅತಿ ಶೀಘ್ರದಲ್ಲೇ ನಯನತಾರಾ-ವಿಘ್ನೇಶ್ ಶಿವನ್ ವಿವಾಹ ಮಹೋತ್ಸವ ನಡೆಯುವ ಸಾಧ್ಯತೆ ಇದೆ.

ವಿಘ್ನೇಶ್ ಶಿವನ್ ಅವರಲ್ಲಿ ನೀವು ಲೈಕ್ ಮಾಡುವ ಅಂಶಗಳೇನು ಎಂದು ನಿರೂಪಕಿ ಕೇಳಿದಾಗ, ”ಏನು ಇಷ್ಟ ಆಗಿದೆ ಅನ್ನೋದಕ್ಕಿಂತ ಎಲ್ಲವೂ ಇಷ್ಟವಾಗಿದೆ” ಎಂದು ನಯನತಾರಾ ಹೇಳಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಲ್ಲಿ ತಮ್ಮ ಬೆರಳಿಗೆ ನಯನತಾರಾ ತೊಟ್ಟಿದ್ದ ಉಂಗುರದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಷ್ಟಕ್ಕೂ, ವಿಘ್ನೇಶ್ ಶಿವನ್ ಎದೆಯ ಮೇಲೆ ನಯನತಾರಾ ಕೈಯಿಟ್ಟಿರುವ, ಉಂಗುರವನ್ನು ಫೋಕಸ್ ಮಾಡಿರುವ ಫೋಟೋವನ್ನು ವಿಘ್ನೇಶ್ ಶಿವನ್ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಫೋಟೋವನ್ನು ನೋಡಿದ ನೆಟ್ಟಿಗರು ”ವಿಘ್ನೇಶ್ ಶಿವನ್ ಜೊತೆಗೆ ನಯನತಾರಾ ನಿಶ್ಚಿತಾರ್ಥ ಆಗೋಗಿದೆ” ಅಂತಲೇ ಮಾತನಾಡಿಕೊಂಡಿದ್ದರು.

ಅಸಲಿಗೆ, ಅದಕ್ಕೂ ಮುನ್ನ ವಿಘ್ನೇಶ್ ಶಿವನ್ ಹಂಚಿಕೊಂಡಿದ್ದ ಹಲವು ಫೋಟೋಗಳಲ್ಲಿ ನಯನತಾರಾ ಅದೇ ಉಂಗುರ ತೊಟ್ಟಿದ್ದರು. ಹೀಗಾಗಿ ನಯನತಾರಾ-ವಿಘ್ನೇಶ್ ಶಿವನ್ ನಿಶ್ಚಿತಾರ್ಥ ನಡೆದಿದ್ದು ಯಾವಾಗ ಎಂಬುದು ಗೊತ್ತಿಲ್ಲ. ಆದರೆ, ”ಇದು ಎಂಗೇಜ್‌ಮೆಂಟ್ ರಿಂಗ್” ಎನ್ನುವ ಮೂಲಕ ವಿಘ್ನೇಶ್ ಶಿವನ್ ಜೊತೆಗೆ ತಮಗೆ ನಿಶ್ಚಿತಾರ್ಥ ಆಗಿದೆ ಎಂದು ನಯನತಾರಾ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ‘ನಾನುಮ್ ರೌಡಿಧಾನ್’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಮಧ್ಯೆ ಪ್ರೀತಿ ಚಿಗುರಿತ್ತು. ಇಬ್ಬರು ಒಟ್ಟಿಗೆ ಇರುವ ಸಾಕಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಒಟ್ಟಿಗೆ ಟ್ರಿಪ್ ಕೂಡ ತೆರಳುತ್ತಿರುತ್ತಾರೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: