ಕ್ರೀಡೆಪ್ರಮುಖ ಸುದ್ದಿ

ದ್ವಿತೀಯ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ತಂಡದಿಂದ ಫೀಲ್ಡಿಂಗ್ ಆಯ್ಕೆ; ಭಾರತ ತಂಡದಲ್ಲಿ ಬದಲಾವಣೆ

ಲಂಡನ್,ಆ.12-ಪ್ರವಾಸಿ ಭಾರತ ತಂಡದ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.

ಇಲ್ಲಿನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡ ಸದ್ಯ 7 ಓವರ್ ಗಳಲ್ಲಿ 8 ರನ್ ಗಳಿಸಿದೆ. ರೋಹಿತ್ ಶರ್ಮಾ 5, ಕೆ.ಎಲ್.ರಾಹುಲ್ 3 ರನ್ ಗಳಿಸಿ ಆಡುತ್ತಿದ್ದಾರೆ.

ಗಾಯಾಳುಗಳ ಸಮಸ್ಯೆಯಿಂದ ಎರಡೂ ತಂಡಗಳಲ್ಲಿ ಬದಲಾವಣೆ ಮಾಡಲಾಗಿದೆ. ಭಾರತದ ತಂಡದಲ್ಲಿ ಶಾರ್ದೂಲ್ ಠಾಕೂರ್ ಬದಲಿಗೆ ಇಶಾಂತ್ ಶರ್ಮಾ ಇಂದು ಆಡುವ ಬಳಗದಲ್ಲಿ ಅವಕಾಶ ಪಡೆದಿದ್ದಾರೆ. ಇಂಗ್ಲೆಂಡ್ ನಲ್ಲಿ ಮೂರು ಬದಲಾವಣೆ ಮಾಡಿಕೊಂಡಿದ್ದು, ಜ್ಯಾಕ್ ಕ್ವಾಲಿ, ಸ್ಟುವರ್ಟ್ ಬ್ರಾಡ್, ಲಾರೆನ್ಸ್ ಬದಲಿಗೆ ಮೋಯಿನ್ ಅಲಿ, ಹಮೀದ್ , ಮಾರ್ಕ್ ವುಡ್ ಸ್ಥಾನ ಪಡೆದಿದ್ದಾರೆ.

ಲಾರ್ಡ್ಸ್ ನಲ್ಲಿ ಭಾರತ ಈವರೆಗೆ ಒಟ್ಟು 18 ಟೆಸ್ಟ್‌ ಗಳನ್ನಾಡಿದ್ದು, ಕೇವಲ ಎರಡನ್ನಷ್ಟೇ ಜಯಿಸಿದೆ. 12ರಲ್ಲಿ ಸೋಲನುಭವಿಸಿದೆ. 4 ಪಂದ್ಯ ಡ್ರಾಗೊಂಡಿದೆ. ಭಾರತ ಲಾರ್ಡ್ಸ್‌ನಲ್ಲಿ ಗೆಲುವಿನ ಖಾತೆ ತೆರೆಯಲು ಭರ್ತಿ 54 ವರ್ಷ ಕಾಯಬೇಕಾಯಿತು. 1986ರಲ್ಲಿ ಕಪಿಲ್‌ದೇವ್‌ ನಾಯಕತ್ವದ ಭಾರತ ಇಲ್ಲಿ ಆಡಲಾದ ಸರಣಿಯ ಮೊದಲ ಟೆಸ್ಟ್‌ ಪಂದ್ಯವನ್ನೇ 5 ವಿಕೆಟ್‌ ಗಳಿಂದ ಗೆದ್ದು ಇತಿಹಾಸ ಬರೆಯಿತು.

ಭಾರತ ಇಲ್ಲಿ ಮತ್ತೊಂದು ಜಯ ಕಾಣಲು 2014ರ ತನಕ ಕಾಯಬೇಕಾಯಿತು. ಅಂತರ 5 ವಿಕೆಟ್‌. ನಾಯಕರಾಗಿದ್ದವರು ಧೋನಿ ಮತ್ತು ಕುಕ್‌. 319 ರನ್‌ ಗುರಿ ಪಡೆದಿದ್ದ ಇಂಗ್ಲೆಂಡ್‌ ಇಶಾಂತ್‌ ಶರ್ಮ ದಾಳಿಗೆ ತತ್ತರಿಸಿ 223ಕ್ಕೆ ಆಲೌಟ್‌ ಆಗಿತ್ತು. ಇಶಾಂತ್‌ ಸಾಧನೆ ‌ 74ಕ್ಕೆ 7 ವಿಕೆಟ್‌. 2018ರಲ್ಲಿ ‌ ಕೊನೆಯ ಸಲ ಇಲ್ಲಿ ಆಡಿದ್ದ ವಿರಾಟ್‌ ಕೊಹ್ಲಿ ಪಡೆ ಇನ್ನಿಂಗ್ಸ್‌ ಹಾಗೂ 159 ರನ್ನುಗಳ ಆಘಾತಕಾರಿ ಸೋಲಿಗೆ ತುತ್ತಾಗಿತ್ತು. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: