ಮೈಸೂರು

ಈ ಬಾರಿಯೂ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಚಿಣ್ಣರು ಭಾಗವಹಿಸುವಂತಿಲ್ಲ; ಚಿಣ್ಣರ ಸಂಭ್ರಮ ಕಸಿದ ಕೊರೋನಾ

ಮೈಸೂರು,ಆ. 13:-  ಈ ಬಾರಿ 75ನೇ ವರ್ಷದ ಸ್ವಾತಂತ್ರೋತ್ಸವ ಸಂಭ್ರಮವನ್ನಾಚರಿಸಲಾಗುತ್ತಿದೆ. ಆದರೆ ಈ ಬಾರಿಯೂ ಧ್ವಜಾರೋಹಣ ಸಂಭ್ರಮದಲ್ಲಿ ಪಾಲ್ಗೊಂಡು ವಿವಿಧ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಚಿಣ್ಣರು ಮಾತ್ರ ಪಾಲ್ಗೊಳ್ಳುವಂತಿಲ್ಲ. ಮಹಾಮಾರಿ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಈ ಬಾರಿಯೂ ಮಕ್ಕಳಿಗೆ ನಿರ್ಬಂಧ ವಿಧಿಸಲಾಗಿದ್ದು, ಕೊರೋನಾ ಮಕ್ಕಳ ಸಂಭ್ರಮವನ್ನು ಕಸಿದಿದೆ.

75ನೇ ಸ್ವಾತಂತ್ರ್ಯೋತ್ಸವ ದಿನ ಆಚರಣೆಗೆ ಮೈಸೂರು ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಡಿಪಿಐ ರಾಮಚಂದ್ರರಾಜೇ ಅರಸ್ ಆ.15ರಂದು ಮೈಸೂರು ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಧ್ವಜಾರೋಹಣ ಮಾಡುವುದು ಕಡ್ಡಾಯವಾಗಿದ್ದು 9ಗಂಟೆಯೊಳಗೆ ಕಾರ್ಯಕ್ರಮ ಮುಗಿಸಬೇಕು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕರು, ಸಹ ಶಿಕ್ಷಕರು ಮಾತ್ರ ಭಾಗಿಯಾಗಲು ಅವಕಾಶವಿದ್ದು, ಮಕ್ಕಳು ಭಾಗಿಯಾಗುವಂತಿಲ್ಲ, ಧ್ವಜಾರೋಹಣಕ್ಕೆ ಮಾತ್ರ ಸೀಮಿತವಾಗಿದ್ದು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವಂತಿಲ್ಲ ಎಂದರು.

ಈಗಾಗಲೇ ಸರ್ಕಾರದಿಂದ ಮತ್ತು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪೂರ್ವಭಾವಿ ಸಭೆ ನಡೆದಿದೆ. ಅದರ ಅನುಷ್ಠಾನವಾಗಿ ನಾವೀಗ   ಶಾಲೆಗಳಲ್ಲಿ  ಹೇಗೆ ಆಚರಣೆ ಮಾಡಬೇಕು ಎನ್ನುವ ಕುರಿತು 10/8/2021ರಂದು ಎಲ್ಲಾ ಶಾಲಾ ಕಛೇರಿಗಳಿಗೆ ಜ್ಞಾಪನಾ ಪತ್ರವನ್ನು ಹೊರಡಿಸಲಾಗಿದೆ. ಇಲ್ಲಿ ಕಾರ್ಯಕ್ರಮ ನಿಗದಿತ ಸಮಯ ಅಂದರೆ 9ಗಂಟೆಯೊಳಗಡೆ ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಅನುದಾನ,ಅನುದಾನರಹಿತ ಇಲ್ಲಿ ಕಡ್ಡಾಯವಾಗಿ ಆಚರಣೆ ಮಾಡಬೇಕು ಅನ್ನೋದನ್ನು ಸ್ಪಷ್ಟವಾಗಿ ಹೇಳಿದ್ದೇವೆ. ಇಲ್ಲಿ ಇಲಾಖೆಯ ನಿಯಮದ ಅನುಸಾರ, ಮುಖ್ಯಶಿಕ್ಷಕರು, ಸಹಶಿಕ್ಷರು, ಸಿಬ್ಬಂದಿಗಳೇನಿದ್ದಾರೆ ಅವರು ಮಾತ್ರ ಹಾಜರಾಗಬೇಕು. ಮಕ್ಕಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಥವಾ ಮಕ್ಕಳು ಬರಲೇಬೇಕು ಅಂತ ಕಡ್ಡಾಯ ಮಾಡಬಾರದೆಂದು ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದ್ದೇವೆ.  ಅಲ್ಲಿನ ಶಾಲಾಭಿವೃದ್ಧಿಯ ಸಮಿತಿಯ ಸದಸ್ಯರು ಮತ್ತು ಚುನಾಯಿತ ಜನಪ್ರತಿನಿಧಿಗಳು ಮತ್ತು ಇಚ್ಛೆಪಟ್ಟಲ್ಲಿ ಸಾರ್ವಜನಿಕರು ಮಾರ್ಗಸೂಚಿ  ಅನುಸರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ನಾವೆಲ್ಲ ಮುಖ್ಯಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಈಗಾಗಲೇ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: