ದೇಶಪ್ರಮುಖ ಸುದ್ದಿ

ಭದ್ರತಾ ಪಡೆಗಳ ಯಶಸ್ವಿ  ಕಾರ್ಯಾಚರಣೆ :  ಹಿಜ್ಬುಲ್ ಭಯೋತ್ಪಾದಕನ ಬಂಧನ ;   ಮತ್ತೋರ್ವನ ಹತ್ಯೆ

ದೇಶ(ಶ್ರೀನಗರ),ಆ.14:-  ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ ಭದ್ರತಾ ಪಡೆಗಳು ಯಶಸ್ವೀ ಕಾರ್ಯಾಚರಣೆ ನಡೆಸಿವೆ.

ರಾಷ್ಟ್ರೀಯ ಹೆದ್ದಾರಿ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಪಾಕಿಸ್ತಾನದ ಭಯೋತ್ಪಾದಕನನ್ನು ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ. ಅದೇ ವೇಳೆ ಹಿಜ್ಬುಲ್ ಮುಜಾಹಿದ್ದೀನ್ ನ ಭಯೋತ್ಪಾದಕನನ್ನು ಕಿಶ್ತ್ವಾರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದ  ಮುಜಮ್ಮಿಲ್ ಷಾ ಅವನನ್ನು ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಪಾಟಿಮುಹಲ್ಲಾ ಪಲ್ಮಾರ್‌ನ ಕುಲ್ನಾ ಅರಣ್ಯ ಪ್ರದೇಶದಲ್ಲಿ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತನಿಂದ ಒಂದು ಗ್ರೆನೇಡ್, ಒಂದು ಮ್ಯಾಗ್ ಝಿನ್ ಮತ್ತು 30 ಸುತ್ತಿನ ಎಕೆ -47 ರೈಫಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ ಡೆಕ್ಕನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತನಿಖೆ ನಡೆಯುತ್ತಿದೆ.

ಕುಲ್ಗಾಮ್‌ ನಲ್ಲಿ ರಾತ್ರಿಯಲ್ಲಿ  ಗುಂಡಿನ ದಾಳಿ ನಡೆದಿದ್ದು,  ಕಟ್ಟಡದಲ್ಲಿ ಅಡಗಿದ್ದ ಇಬ್ಬರು ಭಯೋತ್ಪಾದಕರು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಎಸ್‌ಎಫ್ ಬೆಂಗಾವಲಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಭಯೋತ್ಪಾದಕರ ಚಲನವಲನದ ಮೇಲೆ ನಿಗಾ ಇಡಲು ಭದ್ರತಾ ಪಡೆಗಳು ಡ್ರೋನ್‌ ಗಳ ಸಹಾಯವನ್ನು ಪಡೆದುಕೊಂಡಿದ್ದವು.  ಹತ್ಯೆಯಾದ ಭಯೋತ್ಪಾದಕನನ್ನು ಪಾಕಿಸ್ತಾನದ ಉಸ್ಮಾನ್ ಎಂದು ಗುರುತಿಸಲಾಗಿದೆ, ಕಳೆದ ಆರು ತಿಂಗಳಿಂದ ಸಕ್ರಿಯವಾಗಿದ್ದ  ಅಪಾಯಕಾರಿ ಭಯೋತ್ಪಾದಕನಾಗಿದ್ದ ಎಂದು ಕಾಶ್ಮೀರದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿಪಿ) ವಿಜಯ್ ಕುಮಾರ್ ಹೇಳಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: