ಮೈಸೂರು

ನೀರಿಗಾಗಿ ಸ್ವಲ್ಪ ಸಮಯ ಕೊಡಿ : ಕೆರೆಗಳ ಸಂರಕ್ಷಣೆಗಾಗಿ ಸಮಾನ‌ ಮನಸ್ಕರ ಮುಕ್ತ ಚರ್ಚೆ

ಮೈಸೂರು,ಆ.14:-  ಭವಿಷ್ಯದ ದಿನಗಳಲ್ಲಿ ನೀರಿನ ಹಾಹಾಕಾರ ತಪ್ಪಿಸುವುದು ಹಾಗೂ  ಮುಂದಿನ ತಲೆಮಾರಿಗೆ ಏನೇನನ್ನೋ ಕೂಡಿಡುವುದಕ್ಕಿಂತ ನೀರನ್ನು ಕಾಪಿಡುವ ಕುರಿತು ಸಮಾನ ಮನಸ್ಕರ ಬಳಗವೊಂದು ಗಂಭೀರವಾದ ಚರ್ಚೆಗೆ ಶುಕ್ರವಾರ ಚಾಲನೆ ನೀಡಿದೆ.

ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ನಗರದ ತಿಪ್ಪಯ್ಯನ ಕೆರೆ ಆವರಣದಲ್ಲಿ ನಡೆದ ಗುಂಪು ಚರ್ಚೆ ವೇಳೆ ಸಮಾನ ಮನಸ್ಕರ ವೇದಿಕೆ, ಪರಿಸರ ಬಳಗ, ಕ್ಲೀನ್ ಮೈಸೂರು ಫೌಂಡೇಶನ್, ಕ್ರೆಡಿಟ್ – ಐ ಸಂಸ್ಥೆ , ಟೀಮ್ ಮೈಸೂರು, ಸ್ವಚ್ಛಂದ ಮೈಸೂರು, ಹೆಲ್ಪಿಂಗ್ ಹ್ಯಾಂಡ್ ಟೀಮ್ ಫೌಂಡೇಶನ್, ಮೈಸೂರು ಪೀಪಲ್ ಟ್ರೀ, ಮೈಸೂರು ಗ್ರಾಹಕ ಪರಿಷತ್ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

ಮೈಸೂರು ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ನಗರ ಬಡಾವಣೆಗೆ ಹೊಂದಿಕೊಂಡಿರುವ ತಿಪ್ಪಯ್ಯನ ಕೆರೆಗೆ ನೇತಾಜಿನಗರ, ಗಿರಿದರ್ಶಿನಿ ಬಡಾವಣೆ, ಸುಖದಾಯಿ ಬಡಾವಣೆ, ಎಸ್ವಿಪಿ ನಗರ  ಹಾಗೂ ಕೆಂಪಯ್ಯನ ಕೆರೆಗೆ ಐಪಿಎಸ್ ಶ್ರೀನಿವಾಸನ್ ನಗರ ಹಾಗೂ ಜೆಎಸ್ಎಸ್ ಬಡಾವಣೆಗಳ ಒಳಚರಂಡಿ ನೀರು ಸೇರಿ ಮಲೀನಗೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ತೀವ್ರ ಆತಂಕ ವ್ಯಕ್ತವಾಯಿತು.

ಎರಡೂ ಕೆರೆಗಳಿಗೆ ಅಂದಾಜು ಐದು ಸಾವಿರ ಮನೆಗಳ ಮಲೀನ ನೀರು ಬಂದು ಸೇರುತ್ತಿರುವುದು ಭವಿಷ್ಯದ ದಿನಗಳ ಬಗ್ಗೆ ಆತಂಕ ಸೃಷ್ಟಿಸಿದೆ. ಮಾತ್ರವಲ್ಲದೆ ತತ್ ಕ್ಷಣವೇ ಈ ಕುರಿತು ಯೋಜನೆಯೊಂದರ ಅನುಷ್ಠಾನ ಮಾಡಬೇಕಾದ ಅನಿವಾರ್ಯತೆ ಬಗ್ಗೆ ಸಭೆಯಲ್ಲಿ ಸಮಗ್ರವಾದ ಚರ್ಚೆ ನಡೆಯಿತು.

ತಿಪ್ಪಯ್ಯನ ಕೆರೆ, ಕೆಂಪಯ್ಯನ ಕೆರೆ, ಅಂಕನ ಕೆರೆಗಳನ್ನು ಉಳಿಸುವ ಸಲುವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಮೃಗಾಲಯ ಪ್ರಾಧಿಕಾರ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಗೆ ಮನದಟ್ಟು ಮಾಡಿಕೊಡುವ ಬಗ್ಗೆ ತೀರ್ಮಾನಿಸಲಾಯಿತು.

ಕೆರೆಗಳ ಉಳಿವಿಗಾಗಿ ಜಿಲ್ಲಾಡಳಿತಕ್ಕೆ ಮನವಿ ನೀಡುವುದು, ಕೆರೆ ಸುತ್ತಲಿರುವ ಬೋರ್ವೆಲ್ ಗಳ ನೀರನ್ನು ಪರೀಕ್ಷೆಗೊಳಪಡಿಸುವುದು, ಬಡಾವಣೆಯ ಕಸದ ನಿರ್ವಹಣೆಯನ್ನು ವ್ಯವಸ್ಥಿತಗೊಳಿಸುವುದು, ಕೆರೆಯ ಪರಿಸರ ಉನ್ನತೀಕರಿಸಲು ಬಡಾವಣೆಯ ಮಹಿಳಾ ಸಂಘಗಳು ಮನೆ ಮನೆಗೆ ತೆರಳಿ ಮನವರಿಕೆ ಮಾಡಿಕೊಡುವುದು, ನಿರ್ಮಾಣ ಹಂತದಲ್ಲಿರುವ ಹಾಗೂ ನಿರ್ಮಾಣ ಮಾಡಲು ಉದ್ದೇಶಿಸಿರುವ ಮಾಲಿಕರಿಗೆ ಮಳೆ ನೀರು ಕೊಯ್ಲು ಬಗ್ಗೆ ಮನವರಿಕೆ ಮಾಡಿಕೊಡುವುದು, ಕೆರೆಗಳ ಉಳಿವಿಗಾಗಿ ಸಂಘಟನಾತ್ಮಕ ಕಾರ್ಯಚಟುವಟಿಕೆಗಳನ್ನು ರೂಪಿಸುವುದು, ಕೆರೆಗಳ ಒತ್ತುವರಿ ತೆರವು ಮಾಡಲು ಕಾನೂನಾತ್ಮಕ ಹೋರಾಟ ರೂಪಿಸುವ ಬಗ್ಗೆ ಸಭೆಯಲ್ಲಿ ಮುಕ್ತ ಚರ್ಚೆ ನಡೆದು ನಿರ್ಧರಿಸಲಾಯಿತು.

ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಡಾ.ಕೆ.ಕಾಳಚನ್ನೇಗೌಡ, ಡಾ.ಮ.ಪು.ಪೂರ್ಣಾನಂದ, ಜಲತಜ್ಞ ಯು.ಎನ್. ರವಿಕುಮಾರ್, ಪರಶುರಾಮೇಗೌಡ, ಡಾ.ಶಿವಮೂರ್ತಿ, ಪರಿಸರ ಚಂದ್ರು,  ಥಾಮಸ್, ಸ್ನೇಕ್ ಪ್ರದೀಪ್, ಕುಸುಮ ಆಯರಹಳ್ಳಿ, ಲೀಲಾ ಶಿವಕುಮಾರ್, ಮೋಹನ್ ಕುಮಾರ್, ಸಿದ್ದರಾಜೇಗೌಡ, ಅಹಿಂದ ಜವರಪ್ಪ, ಕಿರಣ್ ಜಯರಾಮೇಗೌಡ, ಡಾ ವಿಜೇತ್, ಮಂಜು,  ಮೋಹನರಾವ್, ಶೈಲೇಶ್, ಶೋಭಾ, ಚಿಕ್ಕಕಾಳಪ್ಪ, ಪುಟ್ಟಸ್ವಾಮಿ, ಮೋಹನಕುಮಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: