ಕರ್ನಾಟಕಪ್ರಮುಖ ಸುದ್ದಿಮೈಸೂರು

ದೆಹಲಿಯ ರೈತರ ಹೋರಾಟ ಕೇವಲ ದಲ್ಲಾಳಿಗಳ ಹೋರಾಟವಾಗಿ ಉಳಿದಿದೆ: ಸಚಿವೆ ಶೋಭಾಕರಂದ್ಲಾಜೆ

ಮೈಸೂರು,ಆ.17:- ನಿದ್ರೆ ಮಾಡುವವರನ್ನು ಎಬ್ಬಿಸಬಹುದು,ನಿದ್ರೆ ಮಾಡುವವರಂತೆ ನಟಿಸುವವರನ್ನು ಎಬ್ಬಿಸಲು ಸಾಧ್ಯವಿಲ್ಲ ಎಂದು ಕೇಂದ್ರ ರಾಜ್ಯ ಖಾತೆ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಮೈಸೂರು ಪ್ರವಾಸದಲ್ಲಿರುವ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಕೇಂದ್ರ ಕೃಷಿ ಕಾಯ್ದೆಗೆ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ನಿದ್ರೆ ಮಾಡುವವರನ್ನು ಎಚ್ಚರಿಸಬಹುದು. ಆದರೆ ನಿದ್ರೆ ಮಾಡುವಂತೆ ನಟಿಸುವವರನ್ನು ಅಲ್ಲ. ದೆಹಲಿಯ ರೈತರ ಹೋರಾಟ ಈಗ ಕೇವಲ ದಲ್ಲಾಳಿಗಳ ಹೋರಾಟವಾಗಿ ಉಳಿದಿದೆ. ರೈತರ ಮನವೊಲಿಸಬಹುದು.
ಆದರೆ ರೈತರಂತೆ ನಟಿಸುವವರ ಮನವೊಲಿಸಲು ಸಾಧ್ಯವಿಲ್ಲ. ನೂತನ ಕಾಯ್ದೆಯಿಂದ ರೈತರು ಎಪಿಎಂಸಿ ಹೊರತಾಗಿ ಹೊರಗೆ ವ್ಯಾಪಾರ ಮಾಡಬಹುದು. ಇದರಿಂದ ಮಂಡ್ಯದ ರೈತನ ಹೊಲಕ್ಕೆ ಮುಂಬೈನಿಂದ ಟ್ರಕ್ ಬಂದು ನಿಲ್ಲುವಂತೆ ಆಗುತ್ತೆ. ರೈತ ಹೆಚ್ಚಿನ ಬೆಲೆಗೆ ತನ್ನ ಬೆಳೆ ಮಾರಾಟ ಮಾಡಲು ಅನುಕೂಲ ಆಗಿದೆ ಎಂದರು.

ಕೇಂದ್ರ ಕೃಷಿ ಸಚಿವೆಯಾದ ನಂತರ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡುತ್ತೇನೆ. ಒಂದೊಂದು ಜಿಲ್ಲೆಯ ರೈತರ ಸಮಸ್ಯೆ ಬೇರೆಯದಾಗಿದೆ. ಆಯಾ ಜಿಲ್ಲೆಗಳಿಗೆ ತೆರಳಿ ಅಲ್ಲಿನ ಬೆಳೆ, ಸಮಸ್ಯೆಗಳನ್ನು ಪರಿಹಾರ ಮಾಡುವ ಕೆಲಸ ಮಾಡುತ್ತೇನೆ ಎಂದು   ಹೇಳಿದರು.

ಕೋವಿಡ್ ನಿಂದ ಕೃಷಿಗೆ ತೊಡಕಾಗಿದೆ ಎಂದೇನಿಲ್ಲ. ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಆಹಾರ ಪದಾರ್ಥಗಳ ಶೇಖರಣೆ ಆಗಿರುವುದನ್ನು ವರದಿಗಳು ಹೇಳುತ್ತಿವೆ. ಕೋವಿಡ್ ಸಂದರ್ಭದಲ್ಲೂ ದೇಶದಲ್ಲಿ ದಾಖಲೆ ಪ್ರಮಾಣದ ಕೃಷಿ ಉತ್ಪನ್ನ ಶೇಖರಣೆಯಾಗಿದೆ. ಅದೇ ರೀತಿ ದಾಖಲೆ ಪ್ರಮಾಣದಲ್ಲಿ ಹಣ್ಣು ತರಕಾರಿ ಬೆಳೆಯಲಾಗಿದೆ. ನಗರಗಳಲ್ಲಿ ಇದ್ದ ನಮ್ಮ ಯುವಕರು ಹಳ್ಳಿಗೆ ಹೋಗಿ ಕೃಷಿ ಮಾಡಿದರ ಪರಿಣಾಮ ಇದು ಸಾಧ್ಯವಾಗಿದೆ ಎಂದರು.

ನಾನು ಪ್ರತಿ ವರ್ಷ ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತುತ್ತಿದ್ದೆ. ಈ ವರ್ಷ ಸಚಿವರೆಲ್ಲ ದೆಹಲಿಯಲ್ಲೇ ಇರಬೇಕು ಎಂಬ ಆದೇಶ ಬಂದಿತ್ತು.
ಈ ಹಿನ್ನೆಲೆಯಲ್ಲಿ ಆಷಾಢ ಕ್ಕೆ ಬರಲು ಸಾಧ್ಯ ಆಗಿರಲಿಲ್ಲ.
ಮುಂದೆ ನವರಾತ್ರಿಗೆ ಬಂದು ಮೆಟ್ಟಿಲು ಹತ್ತುತ್ತೇನೆ ಎಂದು ತಿಳಿಸಿದರು. ತಾಯಿ ಚಾಮುಂಡೇಶ್ವರಿ ನನಗೆ ಎಲ್ಲಾ ಬಗೆಯ ಶಕ್ತಿ ತುಂಬಿದ್ದಾಳೆ. ನಾನು ಮೊದಲು ಮೈಸೂರಿಗೆ ಬಂದಾಗ ಎಲ್ಲರೂ ಗೇಲಿ ಮಾಡಿದ್ದರು. ದಸರಾ ಆಚರಣೆ ಮಾಡೋದು ಗೊತ್ತಿಲ್ಲ ಅಂತ ಗೇಲಿ ಮಾಡುತ್ತಿ ದ್ದರು. ಆದರೆ ತಾಯಿ ಕೃಪೆಯಿಂದ ಅದನ್ನು ಮಾಡಿ ತೋರಿಸಿದ್ದೇನೆ ಎಂದರು.
ಆಫ್ಗಾನ್‌‌ ನಲ್ಲಿ ತಾಲಿಬಾನ್ ಉಗ್ರರ ಹಾವಳಿ ಹಿನ್ನೆಲೆ ಕುರಿತು ಪ್ರತಿಕ್ರಿಯೆ ನೀಡಿ ತಾಲಿಬಾನ್ ವಿರುದ್ದ ಎಲ್ಲಾ ರಾಷ್ಟ್ರಗಳು ಒಗ್ಗೂಡಬೇಕು. ವಿಶ್ವಸಂಸ್ಥೆಗೆ ದೂರು ನೀಡುವ ಮೂಲಕ ತಾಲಿಬಾನ್‌‌‌ಗೆ ಕಡಿವಾಣ ಹಾಕಬೇಕು. ತಾಲಿಬಾನ್ ಕೃತ್ಯದಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಗಡಿ ಭಾಗಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಆಫ್ಘಾನಿಸ್ಥಾನ ಪಾಕಿಸ್ತಾನ‌ದ ಪಕ್ಕದಲ್ಲೇ ಇದೆ. ತಾಲಿಬಾನ್ ಉಗ್ರರ ಹಿಂದೆ ಪಾಕಿಸ್ತಾನ ದ ಕೈವಾಡವಿದೆ ಎಂದು ಗಂಭೀರ ವಾಗಿ ಆರೋಪಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: