ಕರ್ನಾಟಕಪ್ರಮುಖ ಸುದ್ದಿ

ಸಾರ್ವಜನಿಕ ಹಬ್ಬದ ಆಚರಣೆಗಿಂತ ನಮ್ಮೊಳಗಿರುವ ದೇವರನ್ನು ಹುಡುಕೋಣ : ಮಹಾಂತೇಶ್ ಬೀಳಗಿ

ಗಣೇಶ, ಮೊಹರಂ ಆಚರಣೆಗೆ ಮಾರ್ಗಸೂಚಿ ಪ್ರಕಟ

ರಾಜ್ಯ( ದಾವಣಗೆರೆ),ಆ.18:- ಬೀಜದೊಳಗೆ ಎಣ್ಣೆ, ಹಾಲಿನೊಳಗೆ ಬೆಣ್ಣೆ ಇರುವಂತೆ, ನಮ್ಮೊಳಗಿರುವ ದೇವರನ್ನು ನಾವೇ ಹುಡುಕಬೇಕು ಎಂಬ ಸಂತ ಕಬೀರ್ ಅವರ ಸಾಲುಗಳಂತೆ, ಪ್ರಸ್ತುತ ಸ್ಥಿತಿಗತಿಯನ್ನು ಮನಗಂಡು ಸಾರ್ವಜನಿಕ ಹಬ್ಬದ ಆಚರಣೆಗಿಂತ ನಮ್ಮೊಳಗಿನ ಅರಿವಿನ ದೇವರನ್ನು ಮನಗಾಣಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ಪ್ರಯುಕ್ತ ಮಂಗಳವಾರ ಏರ್ಪಡಿಸಿದ ನಾಗರಿಕ ಸೌಹಾರ್ದ ಸಮನ್ವಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನರಲ್ಲಿ ಭಾವೈಕ್ಯತೆ ಮೂಡಿಸಲು ಹಾಗೂ ರಾಷ್ಟ್ರಭಕ್ತಿ ಉಂಟು ಮಾಡಲು ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಣೆ ಮಾಡಲು ಪ್ರಾರಂಭಿಸಿದರು. ಆದರೆ ಪ್ರಸ್ತುತ ಸ್ಥಿತಿಗತಿ ನೋಡಿದಾಗ, ಕೋವಿಡ್-19 ಸೋಂಕನ್ನು ಎದುರಿಸುವ ನಿಟ್ಟಿನಲ್ಲಿ ಕಳೆದ ಎರಡು ವರ್ಷದಿಂದ ಹಬ್ಬ-ಆಚರಣೆಗಳನ್ನು ಸಾರ್ವಜನಿಕವಾಗಿ ಮಾಡಲು ಆಗುತ್ತಿಲ್ಲ ಎಂದರು.
ಕೋವಿಡ್-19 ಮಾರ್ಗಸೂಚಿಯನ್ವಯ ದೇವಸ್ಥಾನ, ಮಸೀದಿ, ಚರ್ಚ್‍ಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಜಾತ್ರೆ, ವಿಶೇಷ ಪೂಜೆ, ಸಭೆ, ಸಮಾರಂಭ, ಮೆರವಣಿಗೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇಲ್ಲಿಯವರೆಗೂ ಬಂದ ಎಲ್ಲಾ ಹಬ್ಬ-ಮಹೋತ್ಸವಗಳನ್ನು ಕೋವಿಡ್ ಮಾರ್ಗಸೂಚಿಯನ್ವಯ ಆಚರಿಸಿದ್ದು, ಮುಂಬರುವ ಗಣೇಶ ಹಾಗೂ ಮೊಹರಂ ಹಬ್ಬಗಳನ್ನು ಕೂಡ ಸಾರ್ವಜನಿಕವಾಗಿ ಆಚರಿಸದೆ ಕೋವಿಡ್ ನಿಯಮಾವಳಿಗಳನ್ವಯ ಸರಳವಾಗಿ, ಸೌಹರ್ದಯುತವಾಗಿ ಆಚರಿಸಬೇಕು ಎಂದರು.
ಕೋವಿಡ್‍ನ 3ನೇ ಅಲೆಯನ್ನು ಎದುರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದು, ಜಿಲ್ಲೆಯಲ್ಲಿ ಬೆಡ್, ವೆಂಟಿಲೇಟರ್ ಸಾಮಥ್ರ್ಯವನ್ನು ಹೆಚ್ಚಿಸಿ, ಹೆಚ್ಚುವರಿ ವೈದ್ಯರಿಗೆ, ದಾದಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಮಕ್ಕಳ ಸರ್ವೇ ಮಾಡಲಾಗುತ್ತಿದ್ದು, ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡುತ್ತಿದ್ದೇವೆ ಹಾಗೂ ಅವರ ಪೋಷಕರಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೋವಿಡ್ ಮೂರನೇ ಅಲೆಯನ್ನು ತಪ್ಪಿಸಬೇಕಾದರೆ ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಜನಜಂಗುಳಿ ಇರುವ ಕಡೆ ಹೋಗುವುದನ್ನು ತಪ್ಪಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಆಗಾಗ ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಬೇಜವಾಬ್ದಾರಿಯಿಂದ ಕೋವಿಡ್ ಸೋಂಕನ್ನು ನಿರ್ಲಕ್ಷಿಸಿ, ಜಿಲ್ಲಾಡಳಿತಕ್ಕೂ ಹೊರೆ ಮಾಡದೆ, ನಿಮ್ಮ ಕುಟುಂಬದವರಿಗಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಎಂದು ಮನವಿ ಮಾಡಿದರು.
ಆಸ್ಪತ್ರೆಗಳಿಗೆ ಕೋವಿಡ್ ಲೈಕ್ ಇಲ್‍ನೆಸ್ (ಐಎಲ್‍ಐ) ಇರುವ ರೋಗಿಗಳು ಬಂದರೆ ಅಂತಹವರಿಗೆ ಕಡ್ಡಾಯವಾಗಿ ಐಎಲ್‍ಐ, ಸಾರಿ ಪ್ರಕರಣಗಳಿಗೆ, ಆರ್‍ಟಿಪಿಸಿಆರ್ ಅಥವಾ ರ್ಯಾಪಿಡ್ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಿಸಬೇಕು. ಇಲ್ಲದಿದ್ದಲ್ಲಿ ಕೋವಿಡ್ ಸೋಂಕು ಇರುವುದು ಪತ್ತೆಯಾಗುವುದಿಲ್ಲ ಎಂದು ಡಿಹೆಚ್‍ಓ ಡಾ.ನಾಗರಾಜ್ ಅವರಿಗೆ ಸೂಚಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಗಡಿ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಗೆ ಕೋವಿಡ್ ಸೋಂಕು ಒಂದೆರೆಡು ತಿಂಗಳು ತಡವಾಗಿ ಬರುತ್ತದೆ. ಇದರಿಂದ ಕೋವಿಡ್ ವಿರುದ್ಧ ಹೋರಾಡಲು ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲು ಹೆಚ್ಚಿನ ಸಮಯ ದೊರಕುತ್ತದೆ. ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಕೊರೊನ ಸೋಂಕಿನಿಂದ ಆಗುವ ಸಾವು-ನೋವು ತಡೆಗಟ್ಟಬಹುದು. ಅನೇಕ ಜನಜಂಗುಳಿ ಸೇರುವ ಕಡೆ ಜನರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿರ್ಲಕ್ಷ್ಯ ವಹಿಸುತ್ತಾರೆ. ಪೊಲೀಸರ ಭಯದಿಂದ ಮಾಸ್ಕ್ ಹಾಕಿಕೊಳ್ಳದೇ ನಿಮ್ಮ ಜೀವನದ ಸುರಕ್ಷತೆಗಾಗಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು. ಈಗಾಗಲೇ ರಾಜ್ಯ ಸರ್ಕಾರ ಮೊಹರಂ ಹಾಗೂ ಗಣೇಶ ಚತುರ್ಥಿ ಹಬ್ಬಗಳಿಗಾಗಿ ವಿಶೇಷ ಮಾರ್ಗಸೂಚಿ ಹೊರಡಿಸಿದ್ದು, ಜನರು ಸಾರ್ವಜನಿಕವಾಗಿ ಹಬ್ಬ ಆಚರಣೆ ಮಾಡದೆ ತಮ್ಮ ಮನೆಗಳಲ್ಲೆ ಸರಳವಾಗಿ ಹಬ್ಬ ಆಚರಿಸಿ ಎಂದು ಮನವಿ ಮಾಡಿದರು.
ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ಧಾರ್ಮಿಕ ಮುಖಂಡರು ತಮ್ಮ ಸಮುದಾಯದ ಜನರಿಗೆ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಲು ತಿಳುವಳಿಕೆ ನೀಡಬೇಕು. ಮೊಹರಂ ಹಬ್ಬದ ಪ್ರಯುಕ್ತ ಸ್ವಚ್ಚತೆ ಕುರಿತು ಹೆಚ್ಚಿನ ಗಮನ ಹರಿಸಲಾಗುವುದು. ನಗರದಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಈಗಾಗಲೇ 30 ಕಡೆ ಸ್ಥಳ ನಿಗದಿಪಡಿಸಲಾಗಿದೆ. ಹೊರವಲಯದಲ್ಲಿ ಬಾತಿ ಕೆರೆ ಹಾಗೂ ಶಿರಮಗೊಂಡನಹಳ್ಳಿ ಬಳಿ ಅವಕಾಶ ಕಲ್ಪಿಸಲಾಗಿದ್ದು, ಅಲ್ಲಿಯೇ ವಿಸರ್ಜನೆ ಮಾಡಬೇಕು ಎಂದರು.
ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್ ಮಾತನಾಡಿ, ಕೋವಿಡ್-19 ಸೋಂಕನ್ನು ಸಮರ್ಥವಾಗಿ ಎದುರಿಸಬೇಕಾದರೆ ಹಬ್ಬ-ಹರಿದಿನಗಳನ್ನು ಸಾಮಾಜಿಕವಾಗಿ ಆಚರಿಸದಂತೆ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು. ಯಾವುದೇ ದೇವರು, ಭಕ್ತಿ ಮತ್ತು ಸೇವೆಯನ್ನು ಆಪೇಕ್ಷಿಸುತ್ತಾರೆಯೇ ಹೊರತು ಆಡಂಬರವನ್ನಲ್ಲ. ಇತ್ತೀಚೆಗೆ ಜಿಲ್ಲೆಯಲ್ಲಿ ಕೊರೊನ ಸೋಂಕಿನೊಂದಿಗೆ ಚಿಕನ್‍ಗುನ್ಯ, ಡೆಂಗ್ಯೂ ನಂತಹ ರೋಗಗಳು ಪತ್ತೆಯಾಗುತ್ತಿರುವುದರಿಂದ ಸಾರ್ವಜನಿಕರು ಸ್ವಚ್ಛತೆಯತ್ತ ಗಮನಹರಿಸಬೇಕು, ಪಾಲಿಕೆಯೊಂದಿಗೆ ಜನರ ಸಹಭಾಗಿತ್ವವು ಅತಿ ಮುಖ್ಯ ಎಂದರು.
ಡಿಹೆಚ್‍ಓ ಡಾ.ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, 592 ಜನರು ಮರಣಹೊಂದಿದ್ದಾರೆ. ಜಿಲ್ಲೆಗೆ ಇದೀಗ 12 ಲಕ್ಷ ವ್ಯಾಕ್ಸಿನೇಷನ್ ಗುರಿ ನೀಡಿದ್ದು, ಶೇ.50 ರಷ್ಟು ಪೂರ್ಣಗೊಂಡಿದೆ. ನಗರದ ಹಳೆ ಭಾಗದಿಂದ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಎರಡು ಡೋಸ್ ವ್ಯಾಕ್ಸಿನೇಷನ್ ಮಾಡಿಸಿಕೊಂಡವರಿಗೆ ಕೋವಿಡ್ ಸೋಂಕು ಬರುವ ಸಾಧ್ಯತೆ ಕಡಿಮೆ ಇರುವುದರಿಂದ ಕಡ್ಡಾಯವಾಗಿ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕು ಎಂದರು.
ಪರಿಸರ ಇಲಾಖೆ ಅಧಿಕಾರಿ ಸಂತೋಷ್ ಮಾತನಾಡಿ, ಗಣೇಶ ಹಬ್ಬದಲ್ಲಿ ಸಾರ್ವಜನಿಕ ಆಚರಣೆಗೆ ನಿಷೇಧವಿದ್ದು, ಸಾರ್ವಜನಿಕರು ಒಂದು ಅಡಿಗಿಂತ ಎತ್ತರದ ಗಣಪತಿ ಮೂರ್ತಿಗಳನ್ನು ಕೂರಿಸಬಾರದು. ಪಿಒಪಿ, ಪ್ಲಾಸ್ಟಿಕ್ ಗಣಪ ಮೂರ್ತಿ ಬಳಕೆಯನ್ನು ನಿಷೇಧಿಸಲಾಗಿದ್ದು, ಸಾರ್ವಜನಿಕರು ಮನೆಯಲ್ಲೇ ಅರಿಶಿಣದಿಂದ ಗಣಪತಿ ಮೂರ್ತಿ ತಯಾರಿಸಿ, ಮನೆಯಲ್ಲೇ ವಿಸರ್ಜನೆ ಮಾಡಿ, ನೀರನ್ನು ಮರ, ಗಿಡಗಳಿಗೆ ಹಾಕಿ. ಅಥವಾ ಪಾಲಿಕೆಯಿಂದ ನಿರ್ಮಿಸಲಾಗಿರುವ ತಾತ್ಕಾಲಿಕ ತೊಟ್ಟಿಗಳಲ್ಲಿ ವಿಸರ್ಜನೆ ಮಾಡಿ. ಇದರಿಂದ ಪರಿಸರದ ಸಮತೋಲನ ಕಾಯ್ದುಕೊಳ್ಳಬಹುದು ಎಂದು ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ನಿಷೇಧ: ಸಾರ್ವಜನಿಕ ಸ್ಥಳಗಳಲ್ಲಿ, ಹೊರಾಂಗಣಗಳಲ್ಲಿ ಚಪ್ಪರ, ಪೆಂಡಾಲ್, ಶಾಮಿಯಾನ ವೇದಿಕೆಗಳನ್ನು ನಿರ್ಮಿಸಿ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವಂತಿಲ್ಲ. ಗಣೇಶ ಮೂರ್ತಿ ತರುವಾಗ ಮತ್ತು ವಿಸರ್ಜನೆ ವೇಳೆ ಮೆರವಣಿಗೆಯನ್ನು ನಿಷೇಧಿಸಲಾಗಿದ್ದು, ಹಬ್ಬವನ್ನು ಸರಳವಾಗಿ ದೇವಸ್ಥಾನಗಳಲ್ಲಿ ಅಥವಾ ತಮ್ಮ ಮನೆಗಳಲ್ಲಿ ಆಚರಿಸತಕ್ಕದ್ದು. ಗಣೇಶ ಹಬ್ಬ ಆಚರಿಸುವ ದೇಗುಲಗಳಲ್ಲಿ ನಿತ್ಯ ಸ್ಯಾನಿಟೈಸ್ ಮಾಡಬೇಕು. ದರ್ಶನಕ್ಕಾಗಿ ಆಗಮಿಸುವ ಭಕ್ತಾದಿಗಳಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಬೇಕು. ದೇಗುಲಗಳಲ್ಲಿ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಗಣೇಶ ಮೂರ್ತಿಯನ್ನು ಆದಷ್ಟು ತಮ್ಮ ಮನೆಗಳಲ್ಲೇ ವಿಸರ್ಜಿಸಿ ಇಲ್ಲದಿದ್ದಲ್ಲಿ ಪಾಲಿಕೆಯಿಂದ ನಿರ್ಮಿಸಲಾದ ತಾತ್ಕಾಲಿಕ ಕೃತಕ ವಿಸರ್ಜನಾ ಟ್ಯಾಂಕರ್‍ಗಳಲ್ಲಿ ವಿಸರ್ಜಿಸಬೇಕು ಎಂದು ಸೂಚನೆ ನೀಡಲಾಯಿತು.
ಮೊಹರಂ ಆಚರಣೆಗೆ ಸರ್ಕಾರದ ಮಾರ್ಗಸೂಚಿಗಳು: ಸಾರ್ವಜನಿಕ ಸ್ಥಳಗಳಲ್ಲಿ ಆಲಂಗಳನ್ನು ಅಥವಾ ಪಂಜಾ ಸ್ಥಾಪಿಸುವುದನ್ನು ಹಾಗೂ ತಾಜಿಯಾವನ್ನು ನಿರ್ಬಂಧಿಸಲಾಗಿದೆ. ಆ.12 ರಿಂದ 20 ರವರೆಗೆ ಮೊಹರಂ ಪ್ರಾರ್ಥನಾ ಸಭೆ ಮತ್ತು ಮೆರವಣಿಗೆ ನಿಷೇಧಿಸಲಾಗಿದೆ. ಸೂಕ್ತ ದೈಹಿಕ ಅಂತರ ಪಾಲಿಸಿ ಕನಿಷ್ಠ ಸಂಖ್ಯೆಯಲ್ಲಿ ಭಾಗಿಯಾಗಬಹುದು. ಪಂಜ, ಆಲಂ ಮತ್ತು ತಾಜಿಯತ್‍ಗಳನ್ನು ಜನರು ಮುಟ್ಟಬಾರದು. ಖಬರಸ್ಥಾನ್ ಒಳಗೊಂಡಂತೆ ಯಾವುದೇ ಖಾಲಿ ಜಾಗಗಳಲ್ಲಿ ಸಭೆ ಏರ್ಪಡಿಸುವುದನ್ನು ನಿರ್ಬಂಧಿಸಲಾಗಿದ್ದು, ದಫನ ಮಾಡಲು ಅನುಮತಿ ನೀಡಲಾಗಿದೆ.
60 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು. ಪ್ರಾರ್ಥನಾ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು ಹಾಗೂ ಕೋವಿಡ್-19 ಸಮುಚಿತ ವರ್ತನೆಗಳೊಂದಿಗೆ, ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಬೇಕು. ಒಂದು ವೇಳೆ ಹೆಚ್ಚು ಜನರು ಆಗಮಿಸಿದಲ್ಲಿ, ಎರಡು ಅಥವಾ ಹೆಚ್ಚಿನ ಪಾಳಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಬೇಕು. ಮಸೀದಿಗಳಲ್ಲಿ ಪ್ರವೇಶಿಸುವ ಮೊದಲು ದೇಹದ ತಾಪಮಾನವನ್ನು ತಪಾಸಣೆ ಮಾಡಿಸಿಕೊಳ್ಳಬೇಕು. ತಮ್ಮ ತಮ್ಮ ಮನೆಗಳಿಂದ ಮುಸಲ್ಲಾವನ್ನು (ಜಾಯನಮಾಜ್) ಕಡ್ಡಾಯವಾಗಿ ತರಬೇಕು ಹಾಗೂ ಪರಸ್ಪರ ಹಸ್ತಲಾಘವ ಮತ್ತು ಆಲಿಂಗನಗಳನ್ನು ಮಾಡಬಾರದು.
ಮಸೀದಿಗಳನ್ನು ಹೊರತುಪಡಿಸಿ ಇತರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ, ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್ ಮತ್ತಿತರ ತೆರೆದ ಜಾಗಗಳಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಆಯೋಜಿಸಬಾರದು. ಹಾಗೂ ಮೊಹರಂ ಪ್ರಯುಕ್ತ ಯಾವುದೇ ರೀತಿಯ ಮೆರವಣಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಭಾಷಣ ಕಾರ್ಯಕ್ರಮಗಳನ್ನು ಆಯೋಜಿಸಬಾರದು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್, ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಹಿಂದು, ಮುಸ್ಲಿಂ ಸಮಾಜದ ವಿವಿಧ ಮುಖಂಡರು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: