ಮೈಸೂರು

ಛಾಯಾಗ್ರಹಣ ಒಂದು ಮಾಯಾಜಾಲ : ಇಡೀ ವಿಶ್ವವನ್ನೇ  ಅಕರ್ಷಿಸುವ  ಶಕ್ತಿ ಛಾಯಾಗ್ರಹಣಕ್ಕಿದೆ ; ಎಂ ಕೆ ಸೋಮಶೇಖರ್ ಬಣ್ಣನೆ

ಮೈಸೂರು,ಆ.19:- ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವೀಡಿಯೋಗ್ರಾಫರ್ಸ್ ಅಸೋಸಿಯೇಷನ್(ರಿ) ಇವರ ಆಶ್ರಯದಲ್ಲಿ 182ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಮೈಸೂರು ನಗರದ ಚಾಮುಂಡಿಪುರಂ ನ ನಾದಬ್ರಹ್ಮ ಸಂಗೀತಾ ಸಭಾ ಭವನದಲ್ಲಿಂದು ನಡೆಯಿತು.

ಸಂಘದ ಗೌರವ ಅಧ್ಯಕ್ಷರೂ ಮಾಜಿ ಶಾಸಕರೂ ಆದ   ಎಂ ಕೆ ಸೋಮಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು  ಕ್ಯಾಮರಾವನ್ನು ವಿಶ್ವದ ಮೂರನೇ ಕಣ್ಣು ಎಂದರೆ ತಪ್ಪಾಗಲಾರದು. ಎರಡು ಕಣ್ಣುಗಳಿಂದ  ನಮ್ಮ ಎದುರು ನಡೆಯುವುದನ್ನು ನೋಡುತ್ತೇವೆ. ಆದರೆ ಈ ಮೂರನೇ ಕಣ್ಣಿಂದ ವಿಶ್ವವನ್ನೇ ನೋಡಬಹುದು. ಇವತ್ತು ಮೊಬೈಲ್ ನಲ್ಲಿ ಮುಳುಗಿ ಹೋಗಿದ್ದೇವೆ. ಸ್ನೇಹಿತರ ಜೊತೆ ಇದ್ದರೂ ಪ್ರತಿಯೊಬ್ಬರು ಭಾವನಾತ್ಮಕ ಸಂಬಂಧಗಳನ್ನು ಮರೆತು ಮೊಬೈಲ್ ನೊಳಗೆ ಮುಳುಗಿ ಹೋಗಿರುತ್ತಾರೆ. ಅಂತಹುದರಲ್ಲಿ ಈ ಸಮಾಜದ ಪರಿಸರದ ಆಗುಹೋಗುಗಳನ್ನು ನಾವು ಮೂರನೇ ಕಣ್ಣಾದ ಕ್ಯಾಮರಾದ ಮೂಲಕ ನೋಡಬಹುದಾಗಿದೆ ಎಂದರು.

ಕ್ಯಾಮರಾ ಎಷ್ಟು ಬೆಲೆ ಬಾಳುವಂತದ್ದು ಎನ್ನುವುದಕ್ಕಿಂತ ಅದನ್ನು ಬಳಸುವ ನೈಪುಣ್ಯತೆಯಿಂದ ವಿಭಿನ್ನ ಮತ್ತು ವಿಶಿಷ್ಠವಾಗಿ ಚಿತ್ರಗಳನ್ನು ತೆಗೆಯಬಹುದು. ಛಾಯಾಗ್ರಾಹಣ ಎನ್ನುವಂತದ್ದು ಒಂದು ಮಾಯಾಜಾಲ. ಆ ಕಲೆಯಿಂದ ಎಷ್ಟು ಎತ್ತರಕ್ಕಾದರೂ ಬೆಳೆಯಬಹುದು. ಬಹಳಷ್ಟು ಅವಕಾಶಗಳನ್ನು ಈ ಕಲೆ ಎಲ್ಲರಿಗೂ ನೀಡುತ್ತದೆ. ಒಂದು ಚಿತ್ರವನ್ನು ಸೆರೆ ಹಿಡಿಯಲು ಸಾಕಷ್ಟು ಸಮಯವನ್ನು ವ್ಯಯಮಾಡಿ ಶ್ರಮವನ್ನು ಹಾಕುತ್ತಾರೆ. ಆ ಒಂದು ಚಿತ್ರವೇ ಬಹಳಷ್ಟು ಸಾರಾಂಶವನ್ನು ಅರ್ಥವನ್ನು ನೀಡುತ್ತವೆ. ಆ ಮೂಲಕವೇ ಜನಮನ್ನಣೆಯನ್ನು ಗಳಿಸುತ್ತವೆ. ಇಷ್ಟೆಲ್ಲಾ ಬಣ್ಣ ಬಣ್ಣದ ಆಕರ್ಷಿತ ಚಿತ್ರಗಳನ್ನು ಸೆರೆ ಹಿಡಿಯುವ ಹಾಗೂ ಗ್ರಾಹಕರ ಮೊಗದಲ್ಲಿ ಮಂದಹಾಸವನ್ನು ಮೂಡಿಸುವ   ಛಾಯಾಗ್ರಾಹಕರು ತಮ್ಮ ವೈಯುಕ್ತಿಕ ಬದುಕಿಗೂ ಅಷ್ಟೇ ಗೌರವವನ್ನು ಕೊಡಬೇಕು ಹಾಗಿದ್ದಾಗ ಮಾತ್ರ ಬದುಕು ಸುಂದರ ಮತ್ತು ಅರ್ಥಪೂರ್ಣವಾಗುತ್ತದೆ ಎಂದು ತಿಳಿಸಿದರು.

ಇಂದು ಕೋವಿಡ್ ನಂತಹ ವಿಷಮ ಪರಿಸ್ಥಿತಿಯಲ್ಲಿ ಯಾವುದೇ ಮದುವೆ,ಸಮಾರಂಭಗಳು ನಿರಂತರವಾಗಿ ನಡೆಯದೆ ಫೋಟೋಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್  ಕುಟುಂಬಗಳ ಬದುಕು ಅತ್ಯಂತ ಕಷ್ಟದ ಸ್ಥಿತಿಯಲ್ಲಿವೆ, ಆ ದಿಸೆಯಲ್ಲಿ ಸರ್ಕಾರ ಇವರ ಬಗ್ಗೆಯೂ ಕಾಳಜಿ ವಹಿಸಿ ಸರ್ಕಾರದ ವತಿಯಿಂದ ಕೋವಿಡ್ ಪರಿಹಾರ ನಿಧಿ ನೀಡುವ ಮೂಲಕ ಅವರ ಬದುಕಲ್ಲೂ ಸಂತೋಷವನ್ನು ಮೂಡಿಸಬೇಕೆಂದು ಸರ್ಕಾರವನ್ನು  ಒತ್ತಾಯಿಸಿದರು.

ಎಂ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷರಾದ ಜಿ ಡಿ ಹರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷರಾದ ದಡದಹಳ್ಳಿ ಮಹೇಶ್,ಕಾನೂನು ಸಲಹೆಗಾರರಾದ ಎನ್ ಗೋವಿಂದ್,ಉಪಾಧ್ಯಕ್ಷರಾದ ಜಿ ಎಂ ಸುದರ್ಶನ್,ಕಾರ್ಯದರ್ಶಿ ಧನಂಜಯ್,ಸಹಕಾರ್ಯದರ್ಶಿ ಎಂ ಜೆ ಶ್ರೀನಿವಾಸ್,ಖಜಾಂಚಿ ಮಾದೇಶ,ಆರೋಗ್ಯ ನಿಧಿ ಛೇರ್ಮನ್ ಮಂಜುನಾಥ,ಜನಸಂಪರ್ಕಾಧಿಕಾರಿ ಚೈತನ್ಯ ರಾವ್,ನಿರ್ದೇಶಕರುಗಳಾದ ವರ್ಗೀಶ್, ಅರುಣ್, ಪ್ರಮೋದ್, ಪರಮೇಶ್, ಕಾಂತರಾಜು, ರೇಣುಕಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಈ ವೇಳೆ ಸಂಘದ ಹಿರಿಯ ಸದಸ್ಯರಾದ ಜಿ ಟಿ ಸುರೇಶ್,ಉಮೇಶ್ ಬಾಬು, ಜಗದೀಶ, ವಿಠಲ್ ರಾವ್ ಅವರನ್ನು ಸನ್ಮಾನಿಸಲಾಯಿತು.  ಎಸ್ ಎಸ್ ಎಲ್ ಸಿ ,ಪಿಯುಸಿ ಯಲ್ಲಿ ಅದ್ವಿತೀಯ ಸಾಧನೆ ಮಾಡಿದ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಿ  ಮತ್ತು ಕೊರೊನಾ ಸಂದರ್ಭದಲ್ಲಿ ಸಂಘದ ಸದಸ್ಯರ ಕುಟುಂಬಗಳಿಗೆ ದಿನಸಿ ಕಿಟ್ ನೀಡಲು ಅರ್ಥಿಕ ಸಹಾಯ ಮಾಡಿದ   ಸದಸ್ಯರುಗಳನ್ನು ಅಭಿನಂದಿಸಲಾಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: