ಮೈಸೂರು

ಪ್ರೀತಿಯ ನಾಟಕವಾಡಿ ಅಪ್ರಾಪ್ತ ಬಾಲಕಿ ಅಪಹರಿಸಿ  ಅತ್ಯಾಚಾರ : ವ್ಯಕ್ತಿಗೆ 10ವರ್ಷ ಕಠಿಣ ಸಜೆ

ಮೈಸೂರು, ಆ.20:- ಪ್ರೀತಿಯ ನಾಟಕವಾಡಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ  ಅತ್ಯಾಚಾರವೆಸಗಿದ ವ್ಯಕ್ತಿಗೆ  ಮೈಸೂರಿನ ಎಫ್‌ ಟಿಎಸ್‌ ಸಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ   ಶ್ಯಾಮಾ ಕಂರೋಜ್ ಅವರು 10 ವರ್ಷ ಕಠಿಣ ಸಜೆ ಮತ್ತು 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಅಲ್ಲದೆ ಈತನಿಗೆ ಆಶ್ರಯ ನೀಡಿ  ಬಾಲಕಿ ಮೇಲೆ ಹಲ್ಲೆ ನಡೆಸಿದ್ದ ಮಹಿಳೆಗೆ 4 ಸಾವಿರ ರೂ. ದಂಡ ವಿಧಿಸಿದ್ದಾರೆ. ಶಿಕ್ಷೆಗೆ ಗುರಿಯಾದವನನ್ನು ಪಿರಿಯಾಪಟ್ಟಣ ತಾಲೂಕು ಬೇಕ್ಯಾ ಗ್ರಾಮದ ಬಿ.ಡಿ.ಮಂಜು ಎಂದು ಹೇಳಲಾಗಿದ್ದು,  ಮಹಿಳೆ ವಿಮಲಾ  ಕೂಡ ಶಿಕ್ಷೆಗೆ ಒಳಗಾದವರಾಗಿದ್ದಾರೆ.

ಬೇಕ್ಯಾ ಗ್ರಾಮದ ಮಂಜು ಹುಣಸೂರಿನ ಕಾರ್ತಿಕ್ ಎಂಬವರ ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಂಗಡಿ ಎದುರಿನಿಂದಲೇ ಹೋಗುತ್ತಿದ್ದ  ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಆಕೆಗೆ ಜ್ಯೂಸ್ ಮತ್ತು ತಿಂಡಿ ಕೊಡುತ್ತ ಪ್ರೀತಿಯ ನಾಟಕವಾಡಿದ್ದ ಎನ್ನಲಾಗಿದೆ.  2018ರ ನ.14ರಂದು ಬಾಲಕಿಯನ್ನು ಹುಣಸೂರಿನಿಂದ ಅಪಹರಿಸಿ ಬೇಕ್ಯಾ ಗ್ರಾಮದ ತನ್ನ ಮನೆಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಈ ವಿಷಯ ಗ್ರಾಮಸ್ಥರಿಗೆ ತಿಳಿದ ಕಾರಣ ಈತ ವಿಮಲಾ ಎಂಬ ಮಹಿಳೆಯ ಸಹಕಾರದೊಂದಿಗೆ ಬಾಲಕಿಯನ್ನು ವಿರಾಜಪೇಟೆ ತಾಲೂಕು ಕೆದಮುಳ್ಳೂರಿನ ದೇವಮ್ಮ ಎಂಬವರ ಮನೆಗೆ ಕರೆದೊಯ್ದಿದ್ದ.

ಬಾಲಕಿಯನ್ನು ಕೆಲಸಕ್ಕಿಟ್ಟುಕೊಂಡಿದ್ದ ದೇವಮ್ಮ ಕೆಲಸ ಮಾಡಿಲ್ಲವೆಂದು ಬೆಂಕಿಕೊಳ್ಳಿಯಿಂದ ಬಾಲಕಿಯ ಕೈ ಮತ್ತು ಕಾಲನ್ನು ಸುಟ್ಟು ಹಿಂಸಿಸಿದ್ದಾಳೆ ಎಂದು ಆರೋಪಿಸಲಾಗಿತ್ತು.   ಹುಣಸೂರು ಪಟ್ಟಣ ಠಾಣೆ ಪೊಲೀಸರು 2018ರ ಡಿಸೆಂಬರ್ 24ರಂದು ಬಾಲಕಿಯನ್ನು ರಕ್ಷಿಸಿದ್ದರು. ಈ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.  ವಿಚಾರಣೆ ನಡೆಸಿದ ನ್ಯಾಯಾಧೀಶರು ಮಂಜುಗೆ 10 ವರ್ಷ ಕಠಿಣ ಸಜೆ ಮತ್ತು 30 ಸಾವಿರ ರೂ. ದಂಡ, ಮಂಜುಗೆ ಆಶ್ರಯ ನೀಡಿ, ಬಾಲಕಿಯನ್ನು ಹಿಂಸಿಸಿದ ವಿಮಲಾಳಿಗೆ 4 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಮೊತ್ತದಲ್ಲಿ ಸಂತ್ರಸ್ತೆಗೆ 25 ಸಾವಿರ ರೂ, ನೀಡಬೇಕೆಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ   ಎಸ್‌.ಪುಷ್ಪಲತಾ ವಾದ ಮಂಡಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: