ಮೈಸೂರು

ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಶಾಲಾ-ಕಾಲೇಜುಗಳ ಪುನರಾರಂಭ; ಹಸನ್ಮುಖರಾಗಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು

ಮೈಸೂರು, ಆ.23:- ಕೋವಿಡ್ 19 ಕಾರಣ ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಶಾಲಾ ಚಟುವಟಿಕೆಗಳು ಇಂದಿನಿಂದ ಮತ್ತೆ ಆರಂಭಗೊಂಡಿದೆ.

ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳು ಇಂದಿನಿಂದ ಆರಂಭವಾಗಿದೆ. ಆನ್ ಲೈನ್ ಪಾಠದಿಂದ ಜಿಡ್ಡುಗಟ್ಟಿದ ಮನಸುಗಳಲ್ಲಿ ಶಾಲೆಯ ಆರಂಭವಾಗುತ್ತಿರುವುದು ಹೊಸ ಚೈತನ್ಯ ನೀಡಿದಂತಾಗಿದೆ. ಕಳೆದ ವರ್ಷ ಕೂಡ ಸರಿಯಾಗಿ ಶಾಲೆಗೆ ಬರಲು ಸಾಧ್ಯವಾಗದೆ ಆನ್ ಲೈನ್ ನಲ್ಲಿ ಹೇಳಿಕೊಡುವ ಪಾಠಗಳು ಸರಿಯಾಗಿ ಅರ್ಥವಾಗದೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಂಚಿತರಾಗಿದ್ದರು. ಯಾವುದೇ ಕ್ರೀಡಾ ಚಟುವಟಿಕೆಗಳು, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಕ್ಷರಶಃ ಮಂಕಾಗಿದ್ದರು. ಇದೀಗ ಮತ್ತೆ ಶಾಲೆಗಳು ಆರಂಭವಾಗಿದ್ದು ಮಕ್ಕಳಲ್ಲಿ ಚೈತನ್ಯ ಮನೆ ಮಾಡಿದೆ.

ಕೆಲವು ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸ್ವಾಗತಿಸುವ ಕಾರ್ಯಕ್ರಮ ನಡೆದಿದೆ. ಎಲ್ಲ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿಯೂ ಮಕ್ಕಳಿಗೆ ಸ್ಯಾನಿಟೈಸರ್ ನೀಡಿ ಥರ್ಮಲ್ ಸ್ಕ್ಯಾನಿಂಗ್ ನಡೆಸಲಾಯಿತು.

ಕುವೆಂಪುನಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ   ಎಂ.ಎಲ್.ಚಿದಾನಂದಕುಮಾರ್ ಅವರು ಸಿಟಿ ಟುಡೆ ಯೊಂದಿಗೆ ಮಾತನಾಡಿ ಸುಮಾರು ಆರು ತಿಂಗಳುಗಳಿಂದ ಪಿಯುಸಿ ತರಗತಿಗಳು ನಿಂತು ಹೋಗಿತ್ತು. ಈಗ ಮತ್ತೆ ತರಗತಿಗಳು ಪ್ರಾರಂಭವಾಗಿದೆ. ಸರ್ಕಾರ ನಮಗೇನು ಆದೇಶ ಕೊಟ್ಟಿದೆ ಅದರ ರೀತಿಯಲ್ಲಿಯೇ ನಾವು ತರಗತಿಯನ್ನು ನಡೆಸುತ್ತಿದ್ದೇವೆ ಎಂದರು. ಶನಿವಾರ ಎಲ್ಲ ಕೋಣೆಗಳನ್ನು ಸ್ಯಾನಿಟೈಸ್ ಮಾಡಿದ್ದೇವೆ. ಪ್ರತಿಯೊಬ್ಬರನ್ನೂ ಟೆಸ್ಟ್ ಮಾಡಿ, ಥರ್ಮಲ್ ಸ್ಕ್ಯಾನ್ ಮಾಡಿ ಒಳಗಡೆ ಬಿಡಲಾಗುತ್ತಿದೆ. ಎಲ್ಲ ಕೋಣೆಗಳಲ್ಲಿಯೂ ಒಂದು ಬೆಂಚಿಗೆ ಇಬ್ಬರಂತೆ ಕೂರಿಸುತ್ತಿದ್ದೇವೆ. ಸರ್ಕಾರ ನಮಗೆ ಹೇಳಿದಂತೆ 10ರಿಂದ 1ಗಂಟೆಯವರೆಗೆ ನಾಲ್ಕು ಪಿರಿಯಡ್ ಗಳನ್ನು ಮಾಡಿಕೊಂಡಿದ್ದೇವೆ. ಈ ನಾಲ್ಕು ಪಿರಿಯಡ್ ಗಳಾದ ನಂತರ ನಾವು ಅವರನ್ನು ಮನೆಗೆ ಕಳಿಸುತ್ತೇವೆ. ಕೆಲವು ಹುಡುಗರು ಜಾಸ್ತಿ ಬಂದಲ್ಲಿ ಆನ್ ಲೈನ್ ಕ್ಲಾಸ್ ಗಳಿಗೆ ಕೇಳಲು ಹೇಳಿದ್ದೇವೆ. ಅರ್ಧಮಂದಿ ಆಫ್ ಲೈನ್, ಅರ್ಧ ಮಂದಿ ಆನ್ ಲೈನ್ ಕೇಳಲಿಕ್ಕೆ ಎಲ್ಲ ವಿದ್ಯಾರ್ಥಿಗಳಿಗೂ ವಿನಂತಿಸಿದ್ದೇವೆ. ಪೋಷಕರ ಗಮನಕ್ಕೂ ತಂದಿದ್ದೇವೆ. ಪೋಷಕರಿಂದ ಒಪ್ಪಿಗೆ ಪತ್ರ ಕೂಡ ಪಡೆದುಕೊಳ್ಳುತ್ತಿದ್ದೇವೆ. ಒಪ್ಪಿಗೆ ಪತ್ರ ಪಡೆದುಕೊಂಡು ನಾವು ಇಂದು ಎಲ್ಲ ವಿದ್ಯಾರ್ಥಿಗಳಿಗೂ ತರಗತಿ ಆರಂಭಿಸುತ್ತಿದ್ದೇವೆ ಎಂದು ತಿಳಿಸಿದರು.

ಕರ್ನಾಟಕ ಪಬ್ಲಿಕ್ ಶಾಲೆ ಕುವೆಂಪುನಗರದ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ರವಿಕುಮಾರ್ ಕಳೆದ ಒಂದೂವರೆ ವರ್ಷಗಳಿಂದ ಶಾಲೆಗಳು ಮುಚ್ಚಿತ್ತು. ಆದರೂ ನಾವು ಆನ್ ಲೈನ್ ಕ್ಲಾಸ್ ಗಳನ್ನು ನಡೆಸುತ್ತಿದ್ದೆವು. ಈಗ ಸರ್ಕಾರದ ಆದೇಶದ ಮೇರೆಗೆ 23/8/2021 ರಿಂದ  ಒಂಭತ್ತು ಮತ್ತು ಹತ್ತನೇ ತರಗತಿಗಳನ್ನು ಆರಂಭಿಸುತ್ತಿದ್ದೇವೆ. ಇಂದು ಒಂಭತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಶಾಲೆಗೆ ಬರಲು ತಿಳಿಸಿದ್ದೇವೆ. ಹತ್ತು ಗಂಟೆಗೆ ಶಾಲಾ ಮಕ್ಕಳಿಗೆ ಸ್ವಾಗತ ಕಾರ್ಯಕ್ರಮ ನಡೆಸಿದ್ದೇವೆ. ಎಲ್ಲ ಮಕ್ಕಳಿಗೆ ಎಸ್ ಒ ಪಿ ಮೆಂಟೇನ್ ಮಾಡಿ ಬರಲು ಈಗಾಗಲೇ ಗ್ರೂಪ್ ಲ್ಲಿ ಸಂದೇಶ ರವಾನಿಸಿದ್ದೇವೆ. ಅದರಂತೆ ಮಕ್ಕಳು ಶಾಲೆಗೆ ಆಗಮಿಸಿದ್ದಾರೆ. ಮಕ್ಕಳಿಗೆ ಸ್ಯಾನಿಟೈಸ್ ಮಾಡಿ , ಟೆಂಪರೇಚರ್ ಚೆಕ್ ಮಾಡಿ ಅದನ್ನೆಲ್ಲ ದಾಖಲು ಮಾಡಿ ಆನಂತರ ತರಗತಿಯೊಳಗಡೆ ಕೂರಿಸಲು ವ್ಯವಸ್ಥೆ ಮಾಡಿದ್ದೇವೆ. ಜೊತೆಗೆ ಸರ್ಕಾರದ ಆದೇಶದ ಮೇರೆಗೆ ಸೌಹಾರ್ದಯುತವಾಗಿ ಮಕ್ಕಳಿಗೆ ಈ ಶಾಲೆ ಆರಂಭಿಸುತ್ತಿರುವ ಖುಷಿ ಇದೆ. ಅದಕ್ಕಾಗಿ ಡೈರೆಕ್ಟ್ ಆಗಿ ಪಾಠದ ವಿಷಯಗಳಿಗೆ ಹೋಗದೆ ಇತರ ಚಟುವಟಿಕೆಗಳಲ್ಲಿ  ಭಾಗವಹಿಸಿ ಶಾಲೆಯಲ್ಲಿ ಆಕರ್ಷಕ ವಾತಾವರಣ ನಿರ್ಮಿಸಲು ಪರಿಸರದ ವ್ಯವಸ್ಥೆ ಬಗ್ಗೆ ಅಥವಾ ಪರೀಕ್ಷೆಗಳು  ನಡೆಯುವ ಬಗ್ಗೆ ಪೂರ್ವಭಾವಿ ಮಾಹಿತಿ ನೀಡಲು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಮಕ್ಕಳೆಲ್ಲ ಬರುತ್ತಿದ್ದಾರೆ. ಮಕ್ಕಳೆಲ್ಲ ಬರುತ್ತಿದ್ದಾರೆ. ಅವರಿಗೆ ಸ್ಯಾನಿಟೈಸರ್ ವ್ಯವಸ್ಥೆ ಮತ್ತು ಹಿಂದಿನ ದಿನವೇ ಬಿಸಿನೀರು, ಊಟದ ವ್ಯವಸ್ಥೆ ಮಾಡಿ ಬರಲು ಹೇಳಿದ್ದೇವೆ. ಮಧ್ಯಾಹ್ನದ ನಂತರ ಶಾಲೆಗಳು ಮುಚ್ಚಲ್ಪಡುವುದರಿಂದ ಊಟ  ತಗೊಂಡು ಬಂದಿಲ್ಲ, ಬಿಸಿನೀರು ವ್ಯವಸ್ಥೆ ಮಾಡಿದ್ದೇವೆ. ಶಾಲೆಯಲ್ಲೂ ಬಿಸಿಯೂಟದ ಸಿಲಿಂಡರ್ ಬಳಕೆಯಾಗುತ್ತಿರುವುದರಿಂದ ಅದರಲ್ಲೂ ಕೂಡ ಬಿಸಿನೀರಿನ ವ್ಯವಸ್ಥೆ ಮಾಡಿದ್ದೇವೆ. ಪಾಲಿಕೆ ವತಿಯಿಂದ ಶನಿವಾರವೇ ಎಲ್ಲ ತರಗತಿಯ ಕೋಣೆಗಳನ್ನು ಸ್ಯಾನಿಟೈಸ್ ಮಾಡಿ ಕೊಟ್ಟಿದ್ದಾರೆ. ಶೌಚಾಲಯದಲ್ಲಿಯೂ ಸ್ವಚ್ಛತೆ ಮಾಡಿದ್ದಾರೆ. ಕೈತೊಳೆಯಲು ಸೋಪು ನೀಡಲಾಗಿದೆ. ಸಾಮಾಜಿಕ ಅಂತ ಕಾಪಾಡಿಕೊಳ್ಳಲು ವಿಶೇಷವಾಗಿ ಅವರಿಗೆ ಕೊರೋನಾ ಕುರಿತು ಮಾಹಿತಿ ನೀಡುವಂತಹ ಕಾರ್ಯಕ್ರಮವನ್ನು ಹಾಕಿಕೊಂಡಿದ್ದೇವೆ. ಅದರಲ್ಲಿ ಮಕ್ಕಳ ಕೂಟ ಅಂತ ಆಸ್ಪತ್ರೆ ಇದೆ ಅವರಿಗೆ ಲೆಟರ್ ಕೊಟ್ಟಿದ್ದೇವೆ. ವೈದ್ಯರು ಬಂದು 11.30ಕ್ಕೆ ತಿಳಿಸುವುದಾಗಿ ಹೇಳಿದ್ದಾರೆ. ಅದಕ್ಕೆ ಎಲ್ಲ ಸಿದ್ಧತೆ ಕೂಡ ಮಾಡಿಕೊಂಡಿದ್ದೇವೆ. ಮಕ್ಕಳು ಯಾವುದೇ ಭಯವಿಲ್ಲದೆ ತರಗತಿಗೆ ಹಾಜರಾಗಬಹುದು ಎಂದರು.

ಹಲವು ತಿಂಗಳುಗಳ ನಂತರ ತೆರೆದ ಶಾಲೆಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅರಳಿದ ಕಣ್ಣುಗಳಿಂದ, ಹಸನ್ಮುಖರಾಗಿ ಬರುತ್ತಿರುವುದು ಕಂಡು ಬಂತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: