ಮೈಸೂರು

ಪ್ರೀತಿಸಿದ ಯುವತಿಯೊಂದಿಗೆ ಅದ್ಧೂರಿ ನಿಶ್ಚಿತಾರ್ಥ : ಬಳಿಕ ವಿವಾಹ ನಿರಾಕರಿಸಿ ಯುವತಿಯ ಮೇಲೆ ಹಲ್ಲೆ ನಡೆಸಿದ ಯುವಕ ; ಮೈಸೂರಿನಲ್ಲಿ ಘಟನೆ

ಮೈಸೂರು, ಆ.23:-  ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕಯೋರ್ವ ಯುವತಿಯೋರ್ವಳನ್ನು ಪ್ರೀತಿಸಿ ನಿಶ್ಚಿತಾರ್ಥವನ್ನು ಅದ್ಧೂರಿಯಾಗಿ ನಡೆಸಿಕೊಂಡ ಬಳಿಕ ವಿವಾಹಕ್ಕೆ ಒಲ್ಲೆ ಎಂದು ಯುವತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಹಾಸನದ ಸುನಿಲ್ ಎಂಬಾತನೇ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯುವಕನಾಗಿದ್ದು, ಈತ ಮೈಸೂರಿನ ಕೆ.ಬ್ಲಾಕ್ ನಿವಾಸಿ ಯುವತಿಯೋರ್ವಳನ್ನು ಪ್ರೀತಿಸಿದ್ದ. ಇಬ್ಬರೂ ಕ್ರೀಡಾಪಟುಗಳಾಗಿದ್ದು ಕ್ರೀಡೆಯ ಸಂದರ್ಭ ಹೊರಗಡೆ ಭೇಟಿಯಾಗಿದ್ದಾಗ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ ಪ್ರೇಮಾಂಕುರವಾಗಿತ್ತು. ಬಳಿಕ ವಿವಾಹಕ್ಕೆ ತನ್ನ ಮನೆಯವರನ್ನೂ ಯುವಕ ಒಪ್ಪಿಸಿದ್ದ. ಆದರೆ ಯುವಕನ ತಾಯಿ ಹುಡುಗಿ ಸರ್ಕಾರಿ ಕೆಲಸದಲ್ಲಿಯೇ ಇರಬೇಕೆಂದು ಷರತ್ತು ವಿಧಿಸಿದ್ದಳು ಎನ್ನಲಾಗಿದೆ. ಯುವಕ ಆಕೆ ಸರ್ಕಾರಿ ಉದ್ಯೋಗಿ ಎಂದೇ ತನ್ನ ತಾಯಿಯನ್ನು ನಂಬಿಸಿದ್ದ. ಬಳಿಕ ಇಬ್ಬರ ಮನೆಯಲ್ಲೂ ಒಪ್ಪಿಗೆ ಪಡೆದು  ಮೈಸೂರಿನ ಸುಮುಖ ಜಂಕ್ಷನ್ ಹಾಲ್ ನಲ್ಲಿ ಅದ್ಧೂರಿ ನಿಶ್ಚಿತಾರ್ಥ  ನೆರವೇರಿಸಲಾಗಿತ್ತು. ನಿಶ್ಚಿತಾರ್ಥದ ವೇಳೆ ವಿವಾಹಕ್ಕೆ  ಹತ್ತು ಲಕ್ಷರೂ. ಹಾಗೂ 500ಗ್ರಾಂ ಚಿನ್ನ ಮತ್ತು ಬೆಳ್ಳಿ ಪದಾರ್ಥಗಳನ್ನು ವರದಕ್ಷಿಣೆಯಾಗಿ ನೀಡುವಂತೆ ಹುಡುಗನ ಕಡೆಯವರು ಬೇಡಿಕೆ ಇರಿಸಿದ್ದರು. ಹಾಸನದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ವಿವಾಹವನ್ನೂ ನಿಶ್ಚಿಸಲಾಗಿತ್ತು. ನಿಶ್ಚಿತಾರ್ಥದ ಬಳಿಕ ಹುಡುಗಿಯ ಮನೆಯವರು ಹುಡುಗನ ಮನೆಯವರಿಗೆ ಮೂರು ಲಕ್ಷರೂ. ನೀಡಿದ್ದರು. ಇನ್ನೂ ಹೆಚ್ಚಿನ ಹಣಕ್ಕೆ ಹುಡುಗನ ಮನೆಯವರು ಬೇಡಿಕೆ ಇರಿಸಿದ್ದು, ಸದ್ಯಕ್ಕೆ ಇಲ್ಲ ಮತ್ತೆ ನೀಡುವುದಾಗಿ ಹುಡುಗಿಯ ಮನೆಯವರು ತಿಳಿಸಿದ ಕಾರಣ ಯುವತಿಯ ಮನೆಯರಿಗೆ ಅವಾಚ್ಯವಾಗಿ ಬೈದು, ಯುವತಿಗೆ ಚಾಕುವಿನಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿದ್ದಾರೆ. ಈ ಕುರಿತು ಯುವತಿಯ ಮನೆಯವರು ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯುವತಿಯ ಮನೆಯವರೂ ತಮಗೆ ಹಲ್ಲೆ ನಡೆಸಿದ್ದಾರೆಂದು ಯುವಕನ ಕಡೆಯವರೂ ಕೂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದ್ದು, ಸತ್ಯಾಸತ್ಯತೆಗಳನ್ನು ಪರಿಶೀಲಿಸಿದ ನಂತರ ಪೊಲೀಸರ ಮುಂದಿನ ನಡೆಯೇನು ಎಂಬುದು ತಿಳಿದು ಬರಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: