ಕರ್ನಾಟಕಪ್ರಮುಖ ಸುದ್ದಿ

ಪಕ್ಷ ಸಂಘಟಿಸಲು ಮಮತಾ ಬ್ಯಾನರ್ಜಿ ಅವರಿಗಿಂತ ಸ್ಫೂರ್ತಿ ಬೇಕೇ: ಎಚ್.ಡಿ.ಕುಮಾರಸ್ವಾಮಿ

ಹುಬ್ಬಳ್ಳಿ,ಆ.23- ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗಿಂತ ಸ್ಫೂರ್ತಿ ಬೇಕೇ, ಅವರೇ ನನಗೆ ಸ್ಫೂರ್ತಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಟಿಎಂಸಿಯ ಸುಮಾರು 60ರಿಂದ 70 ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆಯಿತು. ಆದರೂ, ಮಮತಾ ಅವರು ಏಕಾಂಗಿಯಾಗಿ ಹೋರಾಡಿ ಚುನಾವಣೆಯಲ್ಲಿ ಮತ್ತೆ ಗೆದ್ದು ಬಂದರು. ಪಕ್ಷ ಕಟ್ಟಲು ಅವರಿಗಿಂತ ಸ್ಫೂರ್ತಿ ಬೇಕೇ ಎಂದರು.

ಬಿಜೆಪಿ ಮತ್ತು ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರ ಮಾಡಿರುವ ನನಗೆ, ಕೆಟ್ಟ ಅನುಭವವಾಗಿದೆ. ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ರಾಜ್ಯದಾದ್ಯಂತ ಯುವಜನರನ್ನು ಒಳಗೊಂಡು ಪಕ್ಷವನ್ನು ಸಂಘಟಿಸಲು ಮುಂದಾಗಿದ್ದೇನೆ. ಕೆಲಸ ಮಾಡುವವರಿಗೆ ಶಕ್ತಿ ತುಂಬುವ ಕೆಲಸ ಮಾಡುವೆ ಎಂದರು.

ಜೆಡಿಎಸ್ ಅಡಿಪಾಯ ಗಟ್ಟಿಯಾಗಿದೆ. ಯಾರೇ ಬಂದರೂ, ಹೋದರೂ ಪಕ್ಷದ ಬೇರುಗಳು ಅಲುಗಾಡುವುದಿಲ್ಲ. ಶಾಸಕ ಜಿ.ಟಿ. ದೇವೇಗೌಡ ಅವರು ಪಕ್ಷ ತೊರೆಯುವುದು ಎಲ್ಲರಿಗೂ ಗೊತ್ತಿರುವ ಹಳೇ ಕಥೆ. ದೇವೇಗೌಡರು ಮತ್ತೊಮ್ಮೆ ಅವರಿಗೆ ಕರೆ ಮಾಡಿ ಒಟ್ಟಾಗಿ ಕೆಲಸ ಮಾಡೋಣ ಬಾ ಎಂದು ಕರೆದರೂ, ಈಗಾಗಲೇ ನಿರ್ಧರಿಸಿರುವುದಾಗಿ ಹೇಳಿದರು. ಹೀಗಿರುವಾಗ ನಾವೇನು ಮಾಡಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಸವರಾಜ ಬೊಮ್ಮಾಯಿ ಅವರು, ಮುಖ್ಯಮಂತ್ರಿಯಾದ ಬಳಿಕವೂ ನಾನು ಜನತಾ ಪರಿವಾರದವನು ಎಂದು ನೆನೆಪಿಸಿಕೊಂಡಿದ್ದಾರೆ. ಹಾಗಾಗಿಯೇ, ಎಚ್‌.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗ, ಎಂದಿಗೂ ಜನತಾ ಪರಿವಾರದವನು ಎನ್ನಲಿಲ್ಲ. ಅವರ ಮೊದಲ ಅಜೆಂಡಾ ಜೆಡಿಎಸ್ ಮುಗಿಸುವುದೇ ಆಗಿತ್ತು ಎಂದರು.

ಬಂದೂಕಿನಿಂದ ಕ್ರಾಂತಿಯಾಗದು: ಕ್ರಾಂತಿಕಾರಿ ಬದಲಾವಣೆಗಳು ಉತ್ತಮ ಆಡಳಿತದಿಂದ ಸಾಧ್ಯವೇ ಹೊರತು ಬಂದೂಕಿನಿಂದಲ್ಲ. ನಟ ಚೇತನ್‌ ಅವರಿಗೆ ಕ್ಯಾಮೆರಾ ಮುಂದೆ ನಿಂತು ಮಾತನಾಡುವುದನ್ನು ಬಿಟ್ಟರೆ, ರಾಜಕೀಯ ಗೊತ್ತಿಲ್ಲ. ನಾನೂ ಸಿನಿಮಾ ಹಲವು ಸಿನಿಮಾಗಳನ್ನು ನಿರ್ಮಿಸಿದ್ದೇನೆ ಎಂದು ತಮ್ಮ ಟ್ವೀಟ್ ಟೀಕಿಸಿದ್ದ ನಟ ಚೇತನ್ ಅವರಿಗೆ ಎಚ್‌.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು. (ಎಂ.ಎನ್)

Leave a Reply

comments

Related Articles

error: