ಮೈಸೂರು

ರೈಲ್ವೆ ನಿಲ್ದಾಣದ ಸೆಲ್ಫಿ ಪಾಯಿಂಟ್ ನಲ್ಲಿ ‘ನನ್ನ ಪ್ರೀತಿಯ ಮೈಸೂರು’  ಕನ್ನಡದಲ್ಲಿ ನಾಮಫಲಕ ಅಳವಡಿಸಲು ಮನವಿ

ಮೈಸೂರು,ಆ.24:- ರೈಲ್ವೆ ಮಂಡಲ ವ್ಯವಸ್ಥಾಪಕರನ್ನು ಭೇಟಿ ಮಾಡಿದ ಜಾಗೃತಿ ಸಮಿತಿಯ ಸದಸ್ಯರಾದ ಭೇರ್ಯ ರಾಮಕುಮಾರ್ ಹಾಗೂ ಅರವಿಂದ್ ಶರ್ಮ ಅವರುಗಳ ತಂಡವು ಈ ಹಿಂದೆ 30/01/2021 ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ.ಗುಬ್ಬಿಗೂಡು ರಮೇಶ್ ಅವರೊಂದಿಗೆ ಭೇಟಿ ನೀಡಿದ್ದು, ಇಲ್ಲಿ ಕನ್ನಡ ಭಾಷೆಯಲ್ಲಿ ನನ್ನ ಪ್ರೀತಿಯ ಮೈಸೂರು ಎಂಬ ನಾಮಫಲಕವನ್ನೂ ಸಹ ಅಳವಡಿಸುವಂತೆ ತಮಗೆ ಮನವಿ ಪತ್ರ ನೀಡಿ  7 ತಿಂಗಳುಗಳು ಕಳೆದರೂ ,ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ವಿಷಯವಾಗಿದೆ ಎಂದು ಮಂಡಲ ರೈಲ್ವೆ ವ್ಯವಸ್ಥಾಪಕರ  ಗಮನಕ್ಕೆ ತಂದರು.

ಕೇಂದ್ರ ಸರ್ಕಾರದ ಭಾಷಾ ನೀತಿಯ ಅನ್ವಯ ಕೇಂದ್ರ ಸರ್ಕಾರದ ಕಚೇರಿಗಳ ನಾಮಫಲಕದಲ್ಲಿ ಪ್ರಾದೇಶಿಕ ಭಾಷೆ,ಆಂಗ್ಲ ಭಾಷೆ ಹಾಗೂ ರಾಷ್ಟ್ರಭಾಷೆ ಹಿಂದಿ ಭಾಷೆಗಳನ್ನು ಬಳಸುವುದು ಕಡ್ಡಾಯವಾಗಿದೆ ಎಂದು ಹಕ್ಕೊತ್ತಾಯ ಮಾಡಿದರು.

ಮಂಡಲ ರೈಲ್ವೆ ವ್ಯವಸ್ಥಾಪಕರಾದ ರಾಹುಲ್ ಅಗರವಾಲ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಮೈಸೂರು ರೈಲು ನಿಲ್ದಾಣದ ಅವರಣದಲ್ಲಿ ಇರುವ ಸೆಲ್ಫಿ ಪಾಯಿಂಟ್ ನಲ್ಲಿ ಆಂಗ್ಲ ಭಾಷೆಯಲ್ಲಿ ಐ ಲವ್ ಮೈಸೂರು ಎಂಬ ಫಲಕ ಸಮೀಪದಲ್ಲಿ ಕನ್ನಡ ಭಾಷೆಯಲ್ಲಿ ‘ನನ್ನ ಪ್ರೀತಿಯ ಮೈಸೂರು’ ಎಂದು ಕನ್ನಡದಲ್ಲಿ ನಾಮಫಲಕ  ಅಳವಡಿಸಲು ಯೋಜಿಸಿದ್ದು ಈ ಬಗ್ಗೆ ಕೇಂದ್ರ ಕಚೇರಿಯ ಅನುಮತಿ ಕೋರಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಮೈಸೂರು ರೈಲು ನಿಲ್ದಾಣದಲ್ಲಿ ಎಲ್ಲ ನಾಮಫಲಕಗಳಲ್ಲಿ ತ್ರಿಭಾಷಾ ಸೂತ್ರದನ್ವಯ ಕನ್ನಡ ಭಾಷೆಯನ್ನು ಬಳಸಲು ಕ್ರಮಕೈಗೊಂಡಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ಮೈಸೂರು ಮಂಡಲ ರೈಲ್ವೆ ವ್ಯವಸ್ಥಾಪಕರ ಸಲಹೆಯಂತೆ ಹಿರಿಯ ಮಂಡಲ ಅಭಿಯಂತರರಾದ ಶುಭಂ ಶ್ರೀ ವಾತ್ಸವ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿ ರೈಲ್ವೆ ಇಲಾಖೆಯ ಕಚೇರಿಯ ಮೊಹರುಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು. ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸೂಚನಾಫಲಕಗಳನ್ನು ಕನ್ನಡದಲ್ಲಿಯೇ ಅಳವಡಿಸಬೇಕು. ಐ ಲವ್ ಮೈಸೂರು ಆಂಗ್ಲ ನಾಮಫಲಕದ ಬಳಿ ನನ್ನ ಪ್ರೀತಿಯ ಮೈಸೂರು ನಾಮಫಲಕವನ್ನು ಆದಷ್ಟು ಶೀಘ್ರವಾಗಿ ಅಳವಡಿಸಬೇಕೆಂದು ಒತ್ತಾಯಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: