ಮೈಸೂರು

ಮಹಾಜನ ಕಾಲೇಜಿನಲ್ಲಿ ‘ಒಂದು ದೇಶ ಮತ್ತು ಒಂದೇ ತುರ್ತು ಸೇವೆ-112’ ಜಾಗೃತಿ ಕಾರ್ಯಕ್ರಮ

ಮೈಸೂರು, ಆ.24:-ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಸಿ.ಸಿ. ಘಟಕದ ವತಿಯಿಂದ  ತುರ್ತು ಸೇವೆ 12 ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮೈಸೂರು ಜಿಲ್ಲಾ ನಿಯಂತ್ರಣ ಕೊಠಡಿ ಸಬ್ ಇನ್ಸ್ ಪೆಕ್ಟರ್ ಆಫ್ ಪೊಲೀಸ್  ಮಹೇಶ್ ವಿ.  ಮಾತನಾಡಿ, ‘ಒಂದು ದೇಶ ಒಂದು ತುರ್ತು ಸೇವೆ’ ದೇಶಾದ್ಯಂತ ಲಭ್ಯವಿದ್ದು, ಯಾವುದೇ ಅಪಘಾತ, ತುರ್ತು ಸಂದರ್ಭ, ಅವಘಡಗಳು ಸಂಭವಿಸಿದಾಗ ಹಾಗೂ ಕಾನೂನು ಬಾಹಿರವಾಗಿರುವಂತಹ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಾಗ 112 ಈ ನಂಬರ್‌ಗೆ ನೀವು ಕರೆ ಮಾಡುವ ಮೂಲಕ ಇದರ ಸದುಪಯೋಗವನ್ನು ಸಾರ್ವಜನಿಕರು ಹೇಗೆ ಸುಲಭವಾಗಿ ಪಡೆದುಕೊಳ್ಳಬಹುದು ಎಂಬುದನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಅವರ ಮೊಬೈಲ್ ಮೂಲಕವೇ ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂ ಫೇಜ್‌ಗಳ ಮೂಲಕ ಹೇಗೆ ಉಪಯೋಗ ಪಡೆಯಬಹುದೆಂಬುದನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ಅವರು ಮಾತನಾಡಿ, ಈ ನೂತನ ಸೇವೆಯನ್ನು ತಾವು ಹಾಗೂ ಸಾರ್ವಜನಿಕರಿಗೆ ತಿಳಿಸಿಕೊಡುವ ಮೂಲಕ ಪ್ರಜ್ಞಾವಂತ ನಾಗರಿಕರಾಗಿ, ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಕೈಜೋಡಿಸಬೇಕು ಎಂದು ಹೇಳಿದರು. ಒಂದು ದೇಶ ಮತ್ತು ಒಂದೇ ತುರ್ತುಸೇವೆಯ ಕುರಿತು ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಸಂವಾದದ ಮೂಲಕ ವಿದ್ಯಾರ್ಥಿಗಳು ಈ ಸೇವೆಯ ಪ್ರಯೋಜನವನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಎನ್.ಸಿ.ಸಿ. ವಿಭಾಗದ ಕ್ಯಾಪ್ಟನ್ ನಿಖಿಲ್ ಬಿ.ಆರ್ ಎಲ್ಲರನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಎಚ್.ಎನ್. ಭಾಸ್ಕರ್‌ ಅವರು ವಂದಿಸಿದರು. ಎನ್.ಸಿ.ಸಿ. ಅಧಿಕಾರಿಗಳು, ಅಧ್ಯಾಪಕ, ಅಧ್ಯಾಪಕೇತರರು, ಎನ್.ಸಿ.ಸಿ. ಕ್ಯಾಡೆಟ್‌ಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: