ದೇಶಪ್ರಮುಖ ಸುದ್ದಿ

ಉದ್ಧವ್ ಠಾಕ್ರೆ ಕಪಾಳಕ್ಕೆ ಬಾರಿಸುತ್ತಿದ್ದೆ ಹೇಳಿಕೆ: ಕೇಂದ್ರ ಸಚಿವ ರಾಣೆಗೆ ಮಧ್ಯರಾತ್ರಿ ಜಾಮೀನು

ಮುಂಬೈ,ಆ.25-ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕಪಾಳ ಮೋಕ್ಷ ಮಾಡುತ್ತಿದ್ದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಬಂಧನಕ್ಕೆ ಒಳಗಾಗಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರಿಗೆ ಮಂಗಳವಾರ ತಡರಾತ್ರಿ ಜಾಮೀನು ದೊರಕಿದೆ.

ಜಾಮೀನು ದೊರಕಿದ ಬಳಿಕ ‘ಸತ್ಯಮೇವ ಜಯತೇ’ ಎಂದು ರಾಣೆ ಟ್ವೀಟ್ ಮಾಡಿದ್ದಾರೆ. ರಾಣೆ ವಿರುದ್ಧ ನಾಲ್ಕು ಕಡೆ ಎಫ್‌ಐಆರ್‌ಗಳು ದಾಖಲಾಗಿದ್ದವು. ಅವರಿಗೆ ಬಂಧನದಿಂದ ರಕ್ಷಣೆ ನೀಡುವ ನಿರೀಕ್ಷಣಾ ಜಾಮೀನು ನೀಡಲು ರತ್ನಗಿರಿ ನ್ಯಾಯಾಲಯ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಅವರನ್ನು ಬಂಧಿಸಲಾಗಿತ್ತು.

ರಾಣೆ ಅವರನ್ನು ಮಂಗಳವಾರ ರಾತ್ರಿ ಮಹದ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಪೊಲೀಸರು ಪ್ರಕರಣದ ದಿನಚರಿಯನ್ನು ದಾಖಲಿಸುವುದು ಇದರಲ್ಲಿ ಕಡ್ಡಾಯವಾಗಿಲ್ಲ ಹಾಗೂ ರಾಣೆ ಅವರನ್ನು ವಶದಲ್ಲಿರಿಸಿಕೊಂಡು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ತಮ್ಮ ಆದೇಶದಲ್ಲಿ ಹೇಳಿದರು.

ರಾಣೆ ಅವರನ್ನು ಏಳು ದಿನಗಳ ವಶಕ್ಕೆ ಮತ್ತು ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಪೊಲೀಸರ ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದರು.

ರಾಣೆ ಅವರ ಪ್ರಕರಣದ ವಿಚಾರಣೆ ರಾತ್ರಿ 9.30ಕ್ಕೆ ಆರಂಭವಾಗಿತ್ತು. ಮಧ್ಯರಾತ್ರಿಯ ವೇಳೆ ಅವರಿಗೆ 15,000 ರೂ. ಬಾಂಡ್ ಆಧಾರದಲ್ಲಿ ಜಾಮೀನು ಮಂಜೂರು ಮಾಡಲಾಯಿತು. ಆಗಸ್ಟ್ 30 ಹಾಗೂ ಸೆಪ್ಟೆಂಬರ್ 13ರಂದು ಮಹದ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ಅವರಿಗೆ ಷರತ್ತು ವಿಧಿಸಲಾಗಿದೆ. ಜತೆಗೆ ಅವರ ಧ್ವನಿ ಮಾದರಿಗಾಗಿ ಏಳು ದಿನಗಳ ನೋಟಿಸ್ ಹೊರಡಿಸಲು ಪೊಲೀಸರಿಗೆ ಸೂಚಿಸಲಾಗಿದೆ.

ಇನ್ನು ನಾಸಿಕ್ ಪೊಲೀಸರು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಸಂಬಂಧ ಸೆಪ್ಟೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ರಾಣೆ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ರಾಯಗಡ ಜಿಲ್ಲೆಯಲ್ಲಿ ಮಾತನಾಡಿದ್ದ ರಾಣೆ ಅವರು, ಠಾಕ್ರೆ ಅವರು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಷಣ ಮಾಡುವಾಗ, ದೇಶಕ್ಕೆ ಸ್ವಾತಂತ್ರ್ಯ ಬಂದು ಎಷ್ಟು ವರ್ಷ ಆಗಿದೆ ಎಂಬುದನ್ನೇ ಮರೆತು ಹೋದರು. ಪಕ್ಕದಲ್ಲಿ ಇರುವವರನ್ನು ಕೇಳಿ, ಭಾಷಣ ಮುಂದುವರಿಸಿದ್ದರು. ನಾನು ಅಲ್ಲಿ ಇದ್ದಿದ್ದರೆ, ಅವರ ಕೆನ್ನೆಗೆ ಬಾರಿಸುತ್ತಿದ್ದೆ ಎಂದು ಹೇಳಿದ್ದರು.

ಅವರ ಈ ಹೇಳಿಕೆಗೆ ಶಿವಸೇನಾ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ರಾಣೆ ವಿರುದ್ಧ ಮಹದ್, ನಾಸಿಕ್ ಮತ್ತು ರಾಯಗಡ ಜಿಲ್ಲೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ರಾಣೆ ಅವರ ಭಾಷಣದ ನಂತರ ಹಲವೆಡೆ ಘರ್ಷಣೆಯೂ ನಡೆದಿತ್ತು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: