ಕರ್ನಾಟಕಪ್ರಮುಖ ಸುದ್ದಿಮೈಸೂರು

ಆರ್ ಎಸ್ ಎಸ್ ನ್ನು ಇನ್ಯಾವುದಕ್ಕೋ ಹೋಲಿಕೆ ಮಾಡುವುದು ಬೌದ್ಧಿಕತೆಯ ದಿವಾಳಿತನ : ಸಚಿವ ವಿ.ಸುನಿಲ್ ಕುಮಾರ್ ಕಿಡಿ

ಮೈಸೂರು,ಆ.25:- ಆರ್ ಎಸ್ ಎಸ್ ಕುರಿತಂತೆ ಮಾಜಿ ಸಂಸದ ಧೃವನಾರಾಯಣ್ ಹೇಳಿಕೆಗೆ ಇಂಧನ ಸಚಿವ ವಿ.ಸುನಿಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಅವರು ಇಂದು ಮೈಸೂರು ಪ್ರವಾಸದಲ್ಲಿದ್ದು, ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಆರ್ ಎಸ್ ಎಸ್ ಕುರಿತು ಯಾರು ಹೇಳಿಕೆ ನೀಡಿದ್ದಾರೋ ಅವರ  ಬೌದ್ಧಿಕತೆ ದಿವಾಳಿತನವಾಗಿದೆ. ಆರ್ ಎಸ್ ಅಂದ್ರೆ ರಾಷ್ಟ್ರಭಕ್ತಿ, ಸಮರ್ಪಣೆ,  ಸೇವೆ ತ್ಯಾಗ ಸರಳತೆಯಾಗಿದೆ. ಇದ್ಯಾವುದಕ್ಕೂ ಸಂಬಂಧವಿಲ್ಲದೆ ಇನ್ಯಾವುದಕ್ಕೋ ಹೋಲಿಕೆ ಮಾಡಿಕೊಳ್ಳುತ್ತಾರೆಂದರೆ ಅವರ ಮಾನಸಿಕತೆಯ ಹುಚ್ಚುತನ ಎಂದು ತಾನು ಭಾವಿಸುತ್ತೇನೆ. ಆರ್ ಎಸ್ ಎಸ್ ನ ಬಗ್ಗೆ ಮಾತನಾಡಬೇಕಾದರೆ ಅದರ ಹಿಂದಿನ ಪರಂಪರೆ ತಿಳಿದು ಅದರ ಬಗ್ಗೆ ಮಾತನಾಡಬೇಕು ಎಂದು ಕಿಡಿ ಕಾರಿದರು.

ರಾಜ್ಯದಲ್ಲಿ ವಿದ್ಯುತ್ ನಿಗಮಗಳ ಖಾಸಗೀಕರಣ ವಿಚಾರಕ್ಕೆ ಪ್ರತಿಕ್ರಿಯಿಸಿ ವಿದ್ಯುತ್ ಕಂಪನಿಗಳ ಖಾಸಗೀಕರಣವಿಲ್ಲ. ಕೈಗಾರಿಕೆ ಹಾಗೂ ಮನೆಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಇಲ್ಲ.  ರೈತರಿಗೆ ಹಾಗೂ ಉದ್ಯಮಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಜನರ ಆರೋಗ್ಯದ ರಕ್ಷಣೆ ನಮ್ಮ ಮೊದಲ ಆದ್ಯತೆ. ನಮ್ಮ ಮೊದಲ ಆದ್ಯತೆ ಕೊರೋನಾವನ್ನು ಕಡಿಮೆ ಮಾಡುವುದು. ಗಣೇಶೋತ್ಸವ ಧಾರ್ಮಿಕವಾಗಿ ವಿಜೃಂಭಣೆಯಿಂದ ನಡೆಯಬೇಕು ಅನ್ನೋದರ ಬಗ್ಗೆ ನನ್ನ ದೇನೂ ಭಿನ್ನಾಭಿಪ್ರಾಯವಿಲ್ಲ. ಆದರೆ ಒಂದು ಸರ್ಕಾರವನ್ನು ನಡೆಸುವಂತಹ ಸಂದರ್ಭದಲ್ಲಿ ಜನರ ಆರೋಗ್ಯವನ್ನು ಕೂಡ ರಕ್ಷಣೆ ಮಾಡಬೇಕಾಗಿರುವುದರಲ್ಲೂ ಅಷ್ಟೇ ದೊಡ್ಡ ಪಾತ್ರವಿದೆ. ಎರಡನ್ನೂ ಸಮತೋಲನ ಮಾಡಿಕೊಂಡು ಕೋವಿಡ್ ನ ಶೇಖಡಾವಾರು ದರವನ್ನು ಪರಿಗಣಿಸಿ ಸರ್ಕಾರ ನಿರ್ಧಾರವನ್ನು ತೆಗದುಕೊಳ್ಳುತ್ತದೆ ಎಂದರು.

ಇಂದು ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಬಳಿಕ ಚೆಸ್ಕಾಂ ಸಭೆಯಲ್ಲಿ ಭಾಗವಹಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: