ದೇಶಪ್ರಮುಖ ಸುದ್ದಿ

ಕಾಬೂಲ್‌ನಿಂದ ಇಂದು ಭಾರತಕ್ಕೆ ಆಗಮಿಸಲಿರುವ 180 ಮಂದಿ

ನವದೆಹಲಿ,ಆ.26-ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನದಿಂದ ಆಗಸ್ಟ್ 31 ರ ಗಡುವುಗಿಂತ ಮುಂಚಿತವಾಗಿ ಹಲವಾರು ದೇಶಗಳು ತಮ್ಮ ನಾಗರಿಕರನ್ನು ಸ್ಥಳಾಂತರಿಸಲು ಹರಸಾಹಸ ಪಡುತ್ತಿದೆ. ಈ ನಡುವೆ ಕಾಬೂಲ್ ನಿಂದ 180 ಜನರು ಸೇನಾ ವಿಮಾನದ ಮೂಲಕ ಗುರುವಾರ ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ.

180 ಜನರನ್ನು ಹೊತ್ತ ವಿಮಾನವು ಇಂದು ಬೆಳಿಗ್ಗೆ ದೆಹಲಿ ತಲುಪಲಿದ್ದು, ಇದರಲ್ಲಿ ಭಾರತೀಯರು ಮಾತ್ರವಲ್ಲದೆ ಅಫ್ಘಾನಿಸ್ತಾನದ‌ ಹಿಂದೂ ಮತ್ತು ಸಿಖ್ ಸಮುದಾಯದವರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಲಿಬಾನ್ ಆಗಸ್ಟ್‌ 15 ರಂದು ಹಿಡಿತ ಸಾಧಿಸಿದ ಬಳಿಕ ಅಫ್ಘಾನಿಸ್ತಾನದಲ್ಲಿ‌ ಕ್ಷೀಣಿಸುತ್ತಿರುವ ಭದ್ರತಾ ಸ್ಥಿತಿಯನ್ನು ಗಮನದಲ್ಲಿರಿಸಿ ಭಾರತವು ʼಆಪರೇಷನ್‌ ದೇವಿ ಶಕ್ತಿʼ ಮಿಷನ್‌ ಅಡಿಯಲ್ಲಿ ಈಗಾಗಲೇ 800 ಜನರನ್ನು ಭಾರತಕ್ಕೆ ಕರೆತಂದಿದೆ. ತಾಲಿಬಾನ್‌ ಕ್ರೌರ್ಯಕ್ಕೆ ಹೆದರಿ ದೇಶದಿಂದ ಪಲಾಯನ ಮಾಡಲು ಜನರು ಕಾಬೂಲ್‌ ವಿಮಾನ ನಿಲ್ದಾಣದತ್ತ ಭಾರಿ ಸಂಖ್ಯೆಯಲ್ಲಿ ಜಮಾಯಿಸುತ್ತಿರುವ ಚಿತ್ರಗಳು ವೈರಲ್‌ ಆಗಿವೆ.

ಅಫ್ಘಾನಿಸ್ತಾನದ ಬೆಳವಣಿಗೆಗಳ ಕುರಿತು ಚರ್ಚಿಸಲು ಉ-7 ರಾಷ್ಟ್ರಗಳ ನಾಯಕರು ಬುಧವಾರ ಸಭೆ ನಡೆಸಿದ್ದರು. ಈ ವೇಳೆ ಸೈನ್ಯವನ್ನು ಹಿಂಪಡೆಯಲು ನಿಗದಿಯಾಗಿರುವ ಗಡುವನ್ನು ವಿಸ್ತರಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಮನವಿ ಮಾಡಲಾಗಿತ್ತು. ಆದರೆ, ನಿಗದಿತ ಗಡುವಿಗೆ ಬದ್ಧವಾಗಿರುವುದಾಗಿ ಬೈಡನ್‌ ಹೇಳಿದ್ದಾರೆ.

ಎಷ್ಟು ಬೇಗ ಪೂರ್ಣಗೊಳಿಸುತ್ತೇವೆಯೋ ಅಷ್ಟು ಒಳ್ಳೆಯದು. ಒಂದೊಂದು ದಿನ ಕಳೆದಂತೆಯೂ ನಮ್ಮ ಪಡೆಗಳಿಗೆ ಅಪಾಯ ಹೆಚ್ಚುತ್ತಲೇ ಹೋಗುತ್ತದೆ. ಈಗಿನ ವೇಗದಲ್ಲಿ ಹೋದರೆ 31 ರೊಳಗೆ ತೆರವು ಕಾರ್ಯ ಪೂರ್ಣಗೊಳ್ಳಲಿದೆ ಎಂದು ಬೈಡನ್‌ ತಿಳಿಸಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: