ಮೈಸೂರು

ನಂಜನಗೂಡು  ತಾಲೂಕಿನ ಯಶೋಧವನ ಮೇಕೆ ಸಾಕಣೆ ಕೇಂದ್ರಕ್ಕೆ ಮಹಾರಾಷ್ಟ್ರ ಸಚಿವ ಸುನೀಲ್ ಕೇದಾರ್ ಭೇಟಿ

ಮೈಸೂರು,ಆ.27:-   ಮಹಾರಾಷ್ಟ್ರದ ಪಶುಸಂಗೋಪನೆ ಹಾಗೂ ಹೈನುಗಾರಿಕೆ ಸಚಿವ ಸುನೀಲ್ ಕೇದಾರ್ ಅವರು ನಂಜನಗೂಡು  ತಾಲೂಕಿನ ಎಡಹಳ್ಳಿ ಗ್ರಾಮದ ಯಶೋಧವನ ಮೇಕೆ ಸಾಕಣೆ ಕೇಂದ್ರಕ್ಕೆ ನಿನ್ನೆ ಭೇಟಿ  ನೀಡಿ ಕೇಂದ್ರದಲ್ಲಿ ನಡೆಯುತ್ತಿರುವ ಮೇಕೆ ಸಾಕಣೆ ಮತ್ತು ಸಂಶೋಧನೆಗಳ ಕುರಿತು ಮಾಹಿತಿ ಪಡೆದರು.

ಕೇಂದ್ರದ ಶ್ರೀನಿವಾಸ ಆಚಾರ್‌ ಅವರು ಮೇಕೆ ಸಾಕಣೆ ಬಗ್ಗೆ ವಿವರಿಸಿ 12 ವರ್ಷಗಳ ಹಿಂದೆ 50 ಎಕರೆ ಪ್ರದೇಶದಲ್ಲಿ ನೈಸರ್ಗಿಕ ಕೊಟ್ಟಿಗೆ ಪದ್ಧತಿಯನ್ನು ಅಳವಡಿಸಿಕೊಂಡು ಮೇಕೆ ಸಾಕಣೆ ಆರಂಭಿಸಲಾಯಿತು. ಕೇಂದ್ರದಲ್ಲಿ ಬೀಟಾಲ್, ಷಿರೋಹಿ ಆಡುಗಳು ಹಾಗೂ ಬಂಡೂರು ಕುರಿಗಳನ್ನು ಸಾಕಣೆ ಮಾಡಲಾಗುತ್ತಿದೆ. ಮೇಕೆ ಹಾಲು, ನೈಸರ್ಗಿಕ ಪಾನೀಯಗಳು ಹಾಗೂ ಸೋಪನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ಕೇಂದ್ರದಲ್ಲಿ ಸಂಸ್ಕರಿಸಿದ ಮೇಕೆ ಹಾಲು 28 ಔಷಧೀಯ ಗುಣಗಳನ್ನು ಹೊಂದಿದೆ. 6 ತಿಂಗಳು ಕೆಡದಂತೆ ಉಪಯೋಗಿಸಬಹುದು. ಮೇಕೆಯ ಹಾಲಿನಿಂದ ಸೋಪು ಹಾಗೂ ಮೇಕೆ ಹಿಕ್ಕೆಯಿಂದ ಉತ್ಕೃಷ್ಟ ಗೊಬ್ಬರ ತಯಾರಿಸಲಾಗುತ್ತಿದೆ. ಈ ಹಿಂದೆ 26 ತಳಿಯ ಮೇಕೆ ಹಾಗೂ ಕುರಿಗಳನ್ನು ಸಾಕಣೆ ಮಾಡಲಾಗುತ್ತಿತ್ತು. ಆರ್ಥಿಕವಾಗಿ ಲಾಭವಾಗಲಿಲ್ಲ. ಇಲ್ಲಿನ ಹವಾಗುಣಕ್ಕೆ ಹೊಂದಿಕೊಳ್ಳಬಲ್ಲ 3-4 ತಳಿಗಳನ್ನು ಮಾತ್ರ ಸಾಕಾಲಾಗುತ್ತಿದೆ. ಮೇಕೆ ಸಾಕಣೆ ಮಾಡಲು ಇಚ್ಛಿಸುವ ರೈತರಿಗೆ ಪ್ರತಿ ಮಂಗಳವಾರ ತರಬೇತಿ ನೀಡಲಾಗುತ್ತದೆ ಎಂದು ವಿವರಿಸಿದರು.

ವಿಶಿಷ್ಟ ತಳಿಯ ಮೇಕೆ ಮರಿಗಳನ್ನು ರೈತರಿಗೆ ಕೆ.ಜಿ.ಗೆ  1,200ರೂ. ದರದಲ್ಲಿ ಮಾರಾಟ ಮಾಡಲಾಗುತ್ತದೆ. ಮೇಕೆಗಳ ಮೇವಿಗಾಗಿ ಕೇಂದ್ರದಲ್ಲಿ ಅಗಸೆ, ಮುಸುಕಿನ ಜೋಳ, ಕುದುರೆ ಮೆಂತಿ, ನುಗ್ಗೆ, ಕಳೆ ಮುಂತಾದ ಸಸ್ಯಗಳನ್ನು ಬೆಳೆದುಕೊಳ್ಳುತ್ತೇವೆ. ಮೇಕೆಗಳು ಸಾವಿರಾರು ಬಗೆಯ ಸಸ್ಯಗಳನ್ನು ತಿನ್ನುತ್ತವೆ. ಅವುಗಳ ಬದುಕಿನ ಶೈಲಿ, ಮಾನಸಿಕ ಸ್ಥಿರತೆಯನ್ನು ಅಧ್ಯಯನ ನಡೆಸಿಯೇ ಸಾಕಣೆಗೆ ಮಾಡಲಾಗುತ್ತಿದೆ  ಎಂದರು.

ಸಚಿವ ಸುನೀಲ್ ಕೇದಾರ್ ಮಾತನಾಡಿ   ಯಶೋಧವನ ಕೇಂದ್ರದಲ್ಲಿ ನಡೆಸಿರುವ ಸಂಶೋಧನೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ನೀಡುತ್ತಿರುವ ತರಬೇತಿ ಚೆನ್ನಾಗಿದೆ. ಶ್ರೀನಿವಾಸ್ ಆಚಾರ್ ಅವರನ್ನು ಮಹಾರಾಷ್ಟ್ರಕ್ಕೆ ಆಹ್ವಾನಿಸಿ, ನಮ್ಮ ರೈತರಿಗೆ ಮೇಕೆ ಸಾಕಣೆ ಕಾರ್ಯಾಗಾರ ನಡೆಸಲಾಗುವುದು ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: