
ಕರ್ನಾಟಕಪ್ರಮುಖ ಸುದ್ದಿ
ಹೊತ್ತಿ ಉರಿದ ಬಸ್: ಪ್ರಯಾಣಿಕರು ಪಾರು
ಕೊಪ್ಪಳ: ಇಲ್ಲಿನ ಹಲಗೇರಿ ಗ್ರಾಮದ ಬಳಿ ಖಾಸಗಿ ಗ್ರೀನ್ ಲೈನ್ ಬಸ್ ಗೆ ಬೆಂಕಿ ತಗುಲಿದ್ದು, ಬಸ್ ಹೊತ್ತಿ ಉರಿದಿದೆ. ಪರಿಣಾಮ ಅದರಲ್ಲಿದ್ದ ಎಂಟು ಪ್ರಯಾಣಿಕರು ಪವಾಡ ಸದೃಶ ಪಾರಾಗಿದ್ದಾರೆ. ಬೆಂಗಳೂರಿನಿಂದ ಮುಂಡರಗಿಗೆ ಬಸ್ ಸಂಚರಿಸುತ್ತಿತ್ತು. ಇದರಲ್ಲಿ 22 ಮಂದಿ ಪ್ರಯಾಣಿಕರಿದ್ದರು. ಕೆಲವರು ಹೊಸಪೇಟೆ ಬಳಿ ಇಳಿದಿದ್ದರು. ಎಂಟು ಮಂದಿ ಕೊಪ್ಪಳದ ಮುಂಡರಗಿ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದರು.
ಬಸ್ ಹಲಗೇರಿ ಗ್ರಾಮದ ಕ್ರಾಸ್ ದಾಟಿದ ಬಳಿಕ ಹಿಂದಿನ ಇಂಡಿಕೇಟರ್ ನಲ್ಲಿ ಬೆಂಕಿ ಕಾಣಿಸಿದೆ. ಬೆಳಗ್ಗೆ ವಾಕಿಂಗ್ ತೆರಳಿದ್ದ ಸ್ಥಳೀಯ ನಿವಾಸಿ ವೀರಭದ್ರಪ್ಪ ಎನ್ನುವರು ಬೆಂಕಿ ಕಂಡು ಚಾಲಕನಿಗೆ ಕೂಗಿ ಹೇಳಿದ್ದಾರೆ. ತಕ್ಷಣ ಬಸ್ ಚಾಲಕ ವಾಹನ ನಿಲ್ಲಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾನೆ.
ಸ್ಥಳದಲ್ಲಿದವರು ಬೆಂಕಿ ನಂದಿಸಲು ಪ್ರಯತ್ನ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಸದ್ಯ ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ ಎಂಬ ಮಾಹಿತಿ ದೊರಕಿದೆ.