ಕರ್ನಾಟಕಪ್ರಮುಖ ಸುದ್ದಿ

ಬೆಳೆ ನಿರ್ವಹಣೆ ಮತ್ತು ಸಸ್ಯ ಸಂರಕ್ಷಣೆ

ರಾಜ್ಯ( ದಾವಣಗೆರೆ)ಆ.31:- ದಾವಣಗೆರೆ ಜಿಲ್ಲೆಯಾದ್ಯಂತ ಮುಂಗಾರು ಹಂಗಾಮಿನ ಬೆಳೆಗಳು ಬೆಳವಣಿಗೆಯಿಂದ ಕಾಳು ಕಟ್ಟುವ ಹಂತದವರೆಗೆ ಇದ್ದು ಈ ಸಮಯದಲ್ಲಿ ಕಳೆ ನಿರ್ವಹಣೆ, ಪೋಷಕಾಂಶಗಳ ನಿರ್ವಹಣೆ ಹಾಗೂ ಸಸ್ಯ ಸಂರಕ್ಷಣೆ ಚಟುವಟಿಕೆಗಳಲ್ಲಿ ರೈತರು ತೊಡಗಿಕೊಂಡಿದ್ದಾರೆ. ಅಂತಹ ರೈತಬಾಂಧವರಿಗಾಗಿ ಬೆಳೆಗಳನ್ನು ಬೆಳೆಯಲು ಕೆಲವು ಸಲಹೆಗಳನ್ನು ನೀಡಲಾಗಿದೆ.
ಭತ್ತ
ನಾಟಿ ಸಂದರ್ಭದಲ್ಲಿ ಸಸಿಗಳ ತುದಿ ಚಿವುಟಿ ನಾಟಿ ಮಾಡುವುದರಿಂದ ಕಾಂಡಕೊರಕದ ಬಾಧೆಯನ್ನು ನಿರ್ವಹಣೆ ಮಾಡಬಹುದು. ಅಜೋಸ್ಪೆರಿಲಿಯಂ ಜೈವಿಕ ಗೊಬ್ಬರದ ದ್ರಾವಣದಲ್ಲಿ ಸಸಿಗಳನ್ನು ಅದ್ದಿ ನಾಟಿ ಮಾಡುವುದರಿಂದ ಸಾರಜನಕ ಸ್ಥಿರೀಕರಣಗೊಂಡು ಭೂಮಿಯ ಫಲವತ್ತತೆಯಲ್ಲಿ ಸುಧಾರಣೆಯಾಗುತ್ತದೆ ನಾಟಿ ಸಮಯದಲ್ಲಿ ಎಕರೆಗೆ 20:20:20 ಕೆ.ಜಿ. ಸಾರಜನಕ:ರಂಜಕ:ಪೊಟ್ಯಾಷ್ ಒದಗಿಸುವ ರಾಸಾಯನಿಕ ಗೊಬ್ಬರಗಳನ್ನು ಭೂಮಿಗೆ ಸೇರಿಸಬೇಕು. ಸಾಲು ನಾಟಿ ಮಾಡುವಾಗ ಸಾಲು ತಪ್ಪಿಸಿ ನಾಟಿ ಮಾಡುವುದರಿಂದ ಕೀಟ, ರೋಗಳ ನಿರ್ವಹಣೆಗೆ ಅನುಕೂಲವಾಗುವುದು. ಕಾಂಡಕೊರಕದ ಬಾಧೆ ಕಂಡುಬಂದಲ್ಲಿ 2 ಮಿ.ಲೀ. ಕ್ಲೋರೋಪೈರಿಫಾಸ್ 20 ಇ.ಸಿ. ಯನ್ನು 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು
ಶೇಂಗಾ
ಬೆಳವಣಿಗೆ ರಭಸವಾಗಿದ್ದಲ್ಲಿ ಸಾರಜನಕಯುಕ್ತ ಗೊಬ್ಬರ ಕಡಿಮೆ ಮಾಡಬೇಕು. ಸಾಲುಗಳ ಮಧ್ಯೆ ಎಡೆಹೊಡೆದು ಕಳೆ ನಿರ್ವಹಣೆ ಮಾಡಬೇಕು. ಬಿತ್ತನೆಯಾಗಿ 25-35 ದಿನಗಳ ಬೆಳೆಯಲ್ಲಿ ಸಾಲುಗಳ ಮಗ್ಗುಲಲ್ಲಿ ಎಕರೆಗೆ 100-200 ಕೆ.ಜಿ. ಜಿಪ್ಸಂ, 5 ಕೆ.ಜಿ. ಜಿಂಕ್ ಸಲ್ಫೇಟ್, 1 ಕೆ.ಜಿ. ಬೋರಾನ್ ಕೊಡಬೇಕು. ಬಿಳಲು (ಊಡು) ಬಿಡುವ ಸಮಯದಲ್ಲಿ ಬೆಳೆಯ ಸಾಲುಗಳಿಗೆ ಮಣ್ಣೇರಿಸಬೇಕು. ಇದರಿಂದ ಬಿಳಲುಗಳು ಭೂಮಿಗೆ ಸೇರಿ ಕಾಯಿ ಕಟ್ಟಲು ಅನುಕೂಲವಾಗುತ್ತದೆ ಬೆಳೆ ಎತ್ತರವಾಗಿ ಬೆಳೆದಿದ್ದಲ್ಲಿ ಹಗುರವಾದ ಕಟ್ಟಿಗೆ ರೋಲರ್ ಅನ್ನು ಬೆಳೆಯ ಮೇಲೆ ಉರುಳಿಸುವುದರಿಂದ ಬಿಳಲುಗಳು ಮಣ್ಣಿನಲ್ಲಿ ಸೇರಿ ಕಾಯಿ ಕಟ್ಟಲು ಅನುವುಮಾಡಿಕೊಟ್ಟಂತಾಗುತ್ತದೆ. 19:19:19 ಅಥವಾ 13:0:45 ಪೋಷಕಾಂಶ ಒದಗಿಸುವ ನೀಇನಲ್ಲಿ ಕರಗುವ ರಾಸಾಯನಿಕ ಗೊಬ್ಬರ ಮತ್ತು ಲಘು ಪೋಷಕಾಂಶ ಹಾಗೂ 1 ಮಿ.ಲೀಹೆಕ್ಸಾಕೊನೊಜೋಲ್ 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು. ಸುರುಳಿ ಪೂಚಿ ಬಾಧೆ ಕಂಡುಬಂದಲ್ಲಿ 2 ಮಿ.ಲೀ. ಪ್ರೊಫೆನೊಫಾಸ್ 50 ಇ.ಸಿ. ಅಥವಾ 0.075 ಮಿ.ಲೀ. ಪ್ಲೊಬೆಂಡಿಯಾಮೈಡ್ 39.35 ಇ.ಸಿ ಯನ್ನು 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಶೇಂಗಾ ಬೆಳೆಯ ಮೇಲೆ ಮುಳ್ಳಿನ ಗಿಡದ (ಜಾಲಿ ಗಿಡ) ರೆಂಬೆಗಳನ್ನು ಹಾಯಿಸುವುದರಿಂದ ಎಲೆ ಸುರುಳಿಗಳು ತೆರೆದುಕೊಂಡು ಕೀಟಗಳು ಸಾಯುತ್ತವೆ.
ಮುಸುಕಿನ ಜೋಳ
ಹಾಲು ತುಂಬುವ ಕಾಳುಕಟ್ಟುವ ಸಮಯದಲ್ಲಿ ಗಿಡದ ತುದಿಯನ್ನು ಮುರಿಯಬಾರದು. ಸೂಲಂಗಿ ಒಣಗುವ ಹಂತದಲ್ಲಿ, ಅದನ್ನು ಮುರಿದಾಗ ಇಳುವರಿ ಮೇಲೆ ಪರಿಣಾಮ ಬೀರುವುದಿಲ್ಲ. ಹಾಗಾಗಿ ಅದನ್ನು ಮುರಿದು ಮೇವಿಗಾಗಿ ಬಳಸಬಹುದು. ಸೂಲಂಗಿ ಮುರಿಯುವುದರಿಂದ ಅಕಾಲದಲ್ಲಿ ಮಳೆ ಬಂದಲ್ಲಿ, ಶಿಲೀಂಧ್ರದಿAದ ಬರುವ ರೋಗಗಳ ನಿರ್ವಹಣೆಯಾಗುತ್ತದೆ. ತುದಿ ಮುರಿಯುವುದರಿಂದ ರಭಸವಾದ ಗಾಳಿ ಬಂದಲ್ಲಿ ಬೆಳೆ ಮುರಿದು ಬೀಳುವ ಸಾಧ್ಯತೆ ಕಡಿಮೆ ಹಾಗೂ ಕಟಾವು ಕಾರ್ಯವು ಸುಲಭವಾಗುತ್ತದೆ.
ತೊಗರಿ
ಬೆಳೆಯು 55 ದಿನಗಳ ಬೆಳೆಯಿರುವಾಗ ಕುಡಿ ಚಿವುಟಬೇಕು. ಕುಡಿ ಚಿವುಟುವುದರಿಂದ ಕವಲುಗಳ ಸಂಖ್ಯೆ ಹೆಚ್ಚಾಗಿ ಅಧಿಕ ಇಳುವರಿ ಪಡೆಯಬಹುದು. 70 ದಿನಗಳ ಬೆಳೆಯಲ್ಲಿ 19:19:19 ಹಾಗೂ ಲಘು ಪೋಷಕಾಂಶಗಳ ಮಿಶ್ರಣವನ್ನು ಸಿಂಪಡಿಸುವುದರಿಂದ ಬೆಳೆಯು ಪೋಷಕಾಂಶಗಳ ಕೊರತೆಯಿಂದ ಹೊರಬರಲು ಸಾಧ್ಯವಾಗುತ್ತದೆ. ಇದೇ ಸಿಂಪರಣೆಯನ್ನು 15 ದಿನಗಳ ನಂತರವೂ ಮಾಡಬೇಕು. ತೇವಾಂಶವಿದ್ದಲ್ಲಿ ಮಾತ್ರ ಸಿಂಪರಣೆ ಕೈಗೊಳ್ಳಬೇಕು. ತೊಗರಿ ಬೆಳೆಗೆ ಕಾಯಿಕೊರಕದ ಬಾಧೆ ತಗಲುವುದು ಸರ್ವೇ ಸಾಮಾನ್ಯ. ಬಾಧೆಯ ತೀವ್ರತೆ ತಿಳಿದುಕೊಳ್ಳಲು ಎಕರೆಗೆ 2-5 ಮೋಹಕ ಬಲೆಗಳನ್ನಿಟ್ಟು ಉಸ್ತುವಾರಿ ಕೈಗೊಳ್ಳಬಹುದು. ಬಾಧೆ ಕಂಡುಬಂದಲ್ಲಿ 1 ರಿಂದ 1,5 ಮಿ.ಲೀ. ಅಜಾಡಿರೆಕ್ಟಿನ್‌ನ್ನು 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು. ಮೊದಲನೇ ಪೋಷಕಾಂಶ ಸಿಂಪರಣೆಯೊAದಿಗೆ ಈ ಸಿಂಪರಣೆ ಕೈಗೊಳ್ಳಬಹುದು. ಅಜಾಡಿರೆಕ್ಟಿನ್‌ನಿಂದ ಮೊಟ್ಟೆ ಹಂತದಲ್ಲಿಯೇ ಕಾಂಡಕೊರಕದ ಬಾಧೆ ನಿರ್ವಹಣೆ ಮಾಡಬಹುದು. ಮಳೆ ಅಥವಾ ಮೋಡ ಮುಸುಕಿದ ವಾತಾವರಣವಿದ್ದಲ್ಲಿ ಕಾಯಿಕೊರಕದ ಬಾಧೆ ತೀವ್ರವಾಗುವ ಸಾಧ್ಯತೆಯಿರುವುದರಿಂದ, ಅಂತಹ ಸಂದರ್ಭದಲ್ಲಿ 0.5 ಗ್ರಾಂ. ಇಮಾಮೆಕ್ಟಿನ್ ಬೆನ್ಜೋಯೇಟ್ ಅಥವಾ 0.2- 0.4 ಮಿ.ಲೀ. ಕ್ಲೋರಂಟ್ರಿನಿಲಿಪೋಲ್‌ನ್ನು 1 ಲೀ. ನೀರಿಗೆ ಬೆರೆಸಿ ಸಿಂಪಡಿಸುವುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: