ಮೈಸೂರು

ಆದಿ ಜಾಂಬವ ಸಮುದಾಯದ ಮಕ್ಕಳಿಗೆ ಪುಸ್ತಕ ಹಾಗೂ ವೃದ್ಧರು, ವಿಧವೆಯರು, ಅಂಗವಿಕಲರಿಗೆ ಸಹಾಯಧನ ವಿತರಣೆ

ಮೈಸೂರು,ಸೆ.1:- 18 ನೇ ಚಾತುರ್ಮಾಸ ವ್ರತ ದೀಕ್ಷಾ ಮಹೋತ್ಸವದ ಅಂಗವಾಗಿ ಆದಿ ಜಾಂಬವ ಸಮುದಾಯದ ಮಕ್ಕಳಿಗೆ ಪುಸ್ತಕ ಹಾಗೂ ವೃದ್ಧರು, ವಿಧವೆಯರು, ಅಂಗವಿಕಲರಿಗೆ ಸಹಾಯಧನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಗೋಕುಲಂನ 3 ನೇ ಹಂತದಲ್ಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ದತ್ತಪೀಠದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಪಾಲ್ಗೊಂಡು ಸಹಾಯಧನ ವಿತರಣೆ ಮಾಡಿದರು.

ಬಳಿಕ ಆಶಿರ್ವಚನ ನೀಡಿದ ಅವರು ಕೃಷ್ಣಾಷ್ಟಮಿಯನ್ನು ನಿನ್ನೆ ತಾನೇ ಆಚರಣೆ ಮಾಡಿದ್ದೇವೆ. ಕೃಷ್ಣನಿಗೆ ಮಕ್ಕಳು ಸೇರುವುದು, ಹಿರಿಯರು ಸೇರುವುದು ಎಲ್ಲ ಸೇರಿ ಹಬ್ಬದಂತೆ ಕಾರ್ಯಕ್ರಮ ಮಾಡಿ ಕೊಡುವುದು ಬಹಳ  ಇಷ್ಟ. ಇಂದು ನಾವೆಲ್ಲ ಸೇರಿ ಹಬ್ಬದ ವಾತಾವರಣದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ.  ಇಲ್ಲಿ ಸೇರಿದವರಿಗೆ ಯೋಗಾಭ್ಯಾಸ ಮಾಡಿಸಿದ್ದಾರೆ. ರಾಮಸಂಕೀರ್ತನೆ ಮಾಡಿಸಿದ್ದಾರೆ. ಅದನ್ನು ಪ್ರತಿದಿನವೂ ಅಭ್ಯಾಸ ಮಾಡಿ. ಚೆನ್ನಾಗಿ ಆರೋಗ್ಯವಾಗಿರುತ್ತೀರಿ, ಪ್ರಾಣಾಯಾಮ ಹೇಳಿಕೊಟ್ಟಿದ್ದಾರೆ. ಯೋಗಾಸನ ಹೇಳಿಕೊಟ್ಟಿದ್ದಾರೆ. ನಾಮಸಂಕೀರ್ತನೆ ಹೇಳಿಕೊಟ್ಟಿದ್ದಾರೆ. ಇದನ್ನು ಪ್ರತಿದಿನ ನೀವು ಮಾಡಿಕೊಂಡರೆ ನಿಮ್ಮ ಬುದ್ಧಿ ಚುರುಕಾಗಿರತ್ತೆ. ನಿಮ್ಮ ಮೈ ಆರೋಗ್ಯವಾಗಿರತ್ತೆ. ಮನಸ್ಸು ಶುದ್ಧವಾಗಿರತ್ತೆ. ಅದಕ್ಕಾಗಿ ಯೋಗಾಭ್ಯಾಸ ಪ್ರತಿದಿವಸ ಮಾಡಬೇಕು. ಓದಿನ ವಿಚಾರದಲ್ಲೂ ಕೂಡ ಉಪಯೋಗವಾಗಲಿದೆ ಎಂದರು.

ಚಾತುರ್ಮಾಸ್ಯದ ಸಂದರ್ಭದಲ್ಲಿ ಮೈಸೂರಿನಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮ ಅವಧೂತ ದತ್ತಪೀಠದಲ್ಲಿ ಬೇಕಾದಷ್ಟು ಕಾರ್ಯಕ್ರಮ, ನಡೆಯಲಿದೆ. ಈಗ ನಾಲ್ಕು ವೇದದ ಹೋಮ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಬರಲಿಕ್ಕಾಗತ್ತೋ ಇಲ್ಲವೋ ಅಂದ್ಕೋತಿದ್ವಿ, ಆದರೆ ನಿಮ್ಮೆಲ್ಲರ ಪ್ರೀತಿ ನನ್ನನ್ನು ಇಲ್ಲಿಗೆ ಎಳೆದು ತಂತು, ಬರಲೇ ಬೇಕು ಅನ್ನಿಸಿತು. ಅದಕ್ಕೆ ಬಂದುಬಿಟ್ಟೆ. ಹೊರಡುವಾಗ ವಿಪರೀತ ಮಳೆ. ಈ ಮಳೆಯಲ್ಲಿ ಹೇಗೆ ಹೊರಡುವುದು ಎಂದರು. ಪರವಾಗಿಲ್ಲ ಹೋಗೋಣ ಎಂದೆ. ದೇವರ ಅನುಕೂಲ ನೋಡಿ ಒಳ್ಳೆಯ ಮನಸ್ಸಿನಿಂದ ಕಾರ್ಯಕ್ರಮ ಮಾಡಿದರೆ ಪ್ರಕೃತಿ ನಮಗೆ ಸಹಕರಿಸುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಮಕ್ಕಳು, ಮಹಿಳೆಯರು, ವೃದ್ಧರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: