
ಮೈಸೂರು
ಅಜ್ಞಾನ ಓಡಿಸುವ ಜ್ಞಾನ ನೀಡುವ ಶಿಕ್ಷಕ ವೃತ್ತಿ ಪವಿತ್ರವಾದದ್ದು : ಮಂಗಳಾ ಮುದ್ದುಮಾದಪ್ಪ
ಮೈಸೂರು,ಸೆ.1:- ಅಜ್ಞಾನ ಓಡಿಸುವ ಜ್ಞಾನ ನೀಡುವ ಶಿಕ್ಷಕ ವೃತ್ತಿ ಪವಿತ್ರವಾದದ್ದು ಎಂದು ಅಕ್ಕನ ಬಳಗ ಶಾಲೆಯ ಹಿರಿಯ ಸದಸ್ಯರಾದ ಮಂಗಳಾ ಮುದ್ದುಮಾದಪ್ಪ ಹೇಳಿದರು.
ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯ ಶಿಕ್ಷಕಿ ಜಿ ಪುಷ್ಪಾವತಿ ಅವರು 38ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತಿ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಅಕ್ಕನ ಬಳಗ ಶಾಲಾ ಶಿಕ್ಷಕರ ಸಂಘ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಪದಾಧಿಕಾರಿಗಳು ಸನ್ಮಾನಿಸಿ ಬೀಳ್ಕೊಟ್ಟರು. ಈ ಸಂದರ್ಭ ಮಾತನಾಡಿದ ಮಂಗಳಾ ಮುದ್ದುಮಾದಪ್ಪ ಪವಿತ್ರವಾದ ಶಿಕ್ಷಕ ವೃತ್ತಿಯನ್ನು 38 ವರ್ಷಗಳ ಕಾಲ ನಡೆಸಿಕೊಂಡು ಬಂದು ಸಾವಿರಾರು ಮಕ್ಕಳ ಬಾಳಿಗೆ ಬೆಳಕು ನೀಡಿರುವ ಶಿಕ್ಷಕಿ
ಜಿ ಪುಷ್ಪಾವತಿ ಅವರ ಸೇವೆ ಸ್ಮರಣೀಯ ಎಂದರು. ಎಲ್ಲಾ ವೃತ್ತಿಗಳಿಗಿಂತಲೂ ಶಿಕ್ಷಕ ವೃತ್ತಿ ಶ್ರೇಷ್ಠವಾಗಿದೆ. ಸಮಾಜ ಕಟ್ಟುವ ಇಂತಹ ಕಾಯಕದ ಯೋಗ ಎಲ್ಲರಿಗೂ ಸಿಗುವುದಿಲ್ಲ. ಅಂತಹ ವೃತ್ತಿ ಘನತೆಗೆ ಕುತ್ತಾಗದಂತೆ 38 ವರ್ಷ ಸಲ್ಲಿಸಿರುವ ಸೇವೆ ಸದಾ ಜೀವನದಲ್ಲಿ ಸ್ಮರಿಸುವಂತಹದ್ದು ಎಂದು ತಿಳಿಸಿದರು.
ಕೋವಿಡ್ನಿಂದಾಗಿ ಶಾಲೆಗೆ ಮಕ್ಕಳು ಬರುತ್ತಿಲ್ಲ ಎಂಬ ಕೊರಗು ಶಿಕ್ಷಕರನ್ನು ಕಾಡುತ್ತಿದೆ . ಆನ್ಲೈನ್ ಕ್ಲಾಸ್ ಎಂದಿಗೂ ಕಲಿಕೆಗೆ ಪೂರಕವಾಗದು ಎಂದ ಅವರು ಗ್ರಾಮೀಣ ಮಕ್ಕಳ ಶೈಕ್ಷಣಿಕ ಹಿನ್ನಡೆಯನ್ನು ಮತ್ತೆ ಸರಿದಾರಿಗೆ ತರುವ ಹೊಣೆ ನಮ್ಮ ಶಿಕ್ಷಕರ ಮೇಲಿದ್ದು , ಬೇಗ ಕೋವಿಡ್ ಮಹಾಮಾರಿ ತೊಲಗಲೆಂದು ಪ್ರಾರ್ಥಿಸೋಣ ಎಂದರು.
ಈ ಸಂದರ್ಭ ಇಳೈ ಆಳ್ವಾರ್ ಸ್ವಾಮೀಜಿ , ಸಮಾಜ ಸೇವಕರಾದ ಡಾ. ಕೆ ರಘುರಾಂ ವಾಜಪೇಯಿ , ನಗರ ಪಾಲಿಕೆಯ ಮಾಜಿ ಸದಸ್ಯರಾದ ಎಂ ಡಿ ಪಾರ್ಥಸಾರಥಿ ,ಕಡಕೊಳ ಜಗದೀಶ್ ,ಕೃಷ್ಣ ರಾಜ್ಯದ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಕಡಕೊಳ ಜಗದೀಶ್ ,ಕಾರ್ಯದರ್ಶಿ ಲೀಲಾ ಸತೀಶ್ ಚಂದ್ರ ,ಗೌರಮ್ಮಣಿ,ಮುಖ್ಯ ಶಿಕ್ಷಕಿ ಸುಗುಣಾವತಿ ,ಉದ್ಯಮಿ ವಾಸುದೇವ ಮೂರ್ತಿ ,ಹರೀಶ್ ನಾಯ್ಡು ,ನವೀನ್ ಕೆಂಪಿ ,ಸುಚೀಂದ್ರ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)