
ಪ್ರಮುಖ ಸುದ್ದಿಮೈಸೂರು
ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ: ಹಂಚ್ಯಾ-ಸಾತಗಳ್ಳಿ ನಡುವೆ 19 ಎಕರೆ ಜಾಗ; ಮುಡಾ-ಕೆಎಸ್ ಸಿಎ ಮಾತುಕತೆ
ಮೈಸೂರು,ಸೆ.2-ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಮುಂದಾಗಿದೆ. ಇದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಹೊಂದಿರುವ ನಗರಗಳ ಪಟ್ಟಿಗೆ ಮೈಸೂರು ಸೇರುವ ದಿನಗಳು ಸಮೀಪಿಸುತ್ತಿದೆ.
ಕೆಎಸ್ ಸಿಎಯ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ತಂಡ ನಿನ್ನೆ ನಗರಕ್ಕೆ ಭೇಟಿ ನೀಡಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಕೆಎಸ್ ಸಿಎಗೆ ಹಂಚ್ಯಾ-ಸಾತಗಳ್ಳಿ ಬಡಾವಣೆಯ `ಬಿ’ ವಲಯದಲ್ಲಿ ರಿಂಗ್ ರಸ್ತೆಗೆ ಹೊಂದಿಕೊಂಡಂತೆ ವಿಟಿಯು ಕಾಲೇಜು ಪಕ್ಕದಲ್ಲಿ ಗುರುತಿಸಿರುವ 19.30 ಎಕರೆ ಜಾಗವನ್ನು ನೀಡಲು ಮುಡಾ ನಿರ್ಧರಿಸಿದ್ದು, ಈ ಕುರಿತು ಮುಡಾ ಹಾಗೂ ಕ್ರಿಕೆಟ್ ಸಂಸ್ಥೆ ನಡುವೆ ಮಾತುಕತೆ ನಡೆಯಿತು.
ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಿಸಲು ಭೂಮಿ ನೀಡಲು ಕೆಎಸ್ ಸಿಎ ಏಳು ವರ್ಷದ ಹಿಂದೆಯೇ ಮುಡಾಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆಗಿನಿಂದಲೂ ಇಲ್ಲಿವರೆಗೂ ಆಗಾಗ ಇದರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈಗ ಅದಕ್ಕೆ ಒಂದು ರೂಪ ದೊರೆತಿದೆ.
ಹಂಚ್ಯಾ-ಸಾತಗಳ್ಳಿ ನಡುವೆ ಇರುವ ಮುಡಾಗೆ ಸೇರಿದ ಜಾಗವನ್ನು ಕೆಎಸ್ ಸಿಎಗೆ ನೀಡಲು ತೀರ್ಮಾನಿಸಲಾಗಿದ್ದು, ಇದನ್ನು ಕ್ರಯಕ್ಕೆ ಅಥವಾ ಗುತ್ತಿಗೆ ಆಧಾರದಲ್ಲಿ ನೀಡಬೇಕೆ ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಸೆ.9 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಲು ತೀರ್ಮಾನಿಸಲಾಗಿದೆ.
ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಹಾಗೂ ಆಯುಕ್ತ ಡಾ.ಡಿ.ಬಿ.ನಟೇಶ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಕೆಎಸ್ ಸಿಎ ಅಧ್ಯಕ್ಷ ರೋಜರ್ ಬಿನ್ನಿ, ಮೈಸೂರು ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಅವಶ್ಯಕತೆ ಇದೆ. ಇಲ್ಲಿ ಕ್ರೀಡಾಂಗಣ ನಿರ್ಮಾಣಗೊಂಡರೆ ಐಪಿಎಲ್ ಸೇರಿದಂತೆ ಪ್ರಮುಖ ಪಂದ್ಯಗಳನ್ನು ಮುಂದಿನ ದಿನಗಳಲ್ಲಿ ನಡೆಸಬಹುದು ಎಂದು ಹೇಳಿದರು.
ಕೆಎಸ್ ಸಿಎ ಖಜಾಂಚಿ ವಿನಯ್ ಮೃತ್ಯುಂಜಯ ಮಾತನಾಡಿ, ಮುಡಾ ನೀಡುವ ಜಾಗದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲಾಗುವುದು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿಕ ಎರಡನೇ ಪ್ರಮುಖ ಸ್ಟೇಡಿಯಂ ಇದಾಗಲಿದೆ. ಆಲೂರಿನಲ್ಲಿ 30 ಕೋಟಿ ರೂ., ಹುಬ್ಬಳ್ಳಿಯಲ್ಲಿ 25 ಕೋಟಿ ರೂ., ಬೆಳಗಾವಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಮೈಸೂರಿನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಸ್ಟೇಡಿಯಂ ನಿರ್ಮಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ 50 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಮುಡಾದಿಂದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಜಾಗ ನೀಡಲು ಈ ಹಿಂದೆಯೇ ತೀರ್ಮಾನಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಹಸ್ತಾಂತರ ಮಾಡಲಾಗಲಿಲ್ಲ. ಶೀಘ್ರದಲ್ಲೇ ಅವರಿಗೆ ಜಾಗ ನೀಡಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ಗಂಗೋತ್ರಿ ಗ್ಲೇಡ್ಸ್ ನಿರ್ವಹಣೆ ಅವಧಿ ವಿಸ್ತರಣೆ:
ಮಾನಸಗಂಗೋತ್ರಿಯಲ್ಲಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ (ಗ್ಲೇಡ್ಸ್) ಮೈದಾನವನ್ನು ಕೆಎಸ್ ಸಿಎ ನಿರ್ವಹಣೆ ಮಾಡುತ್ತಿದ್ದು, ಮತ್ತೆ 16 ವರ್ಷಗಳ ಅವಧಿಗೆ ನಿರ್ವಹಣೆ ಅವಧಿ ವಿಸ್ತರಿಸಲಾಗಿದೆ. ಇದೇ ಆವರಣದಲ್ಲಿ ರೆಸ್ಟೋರೆಂಟ್ ಸೇರಿದಂತೆ ನಾನಾ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಸ ಸ್ಟೇಡಿಯಂನಲ್ಲಿ ಎಲ್ಲ ರೀತಿಯ ಸೌಲಭ್ಯಗಳು ಲಭ್ಯವಾಗಲಿದೆ.
ಈ ವೇಳೆ ಕೆಎಸ್ ಸಿಎ ಮೈಸೂರು ವಲಯ ಸಂಯೋಜಕ ಎಸ್.ಸುಧಾಕರ್ ರೈ, ನಗರ ಯೋಜಕ ಸದಸ್ಯ ಜಯಸಿಂಹ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.