ಮೈಸೂರು

ಬಂದವರಿಗೆಲ್ಲ ಟಿಕೇಟ್ ಕೊಡೋ ಪರಿಸ್ಥಿತಿಗೆ ಕಾಂಗ್ರೆಸ್ ಬಂದಿಲ್ಲ : ಮಾಜಿ ಶಾಸಕ ವಾಸು

ಮೈಸೂರು,ಸೆ.2:- ಮಾಜಿ ಸಚಿವ, ಹಾಲಿ ಶಾಸಕರಾಗಿರುವ ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಅವರು ಕಾಂಗ್ರೆಸ್ ಸೇರ್ಪಡೆಯಾದಲ್ಲಿ ತಮ್ಮ ಮಗನಿಗೆ ಕೆ.ಆರ್.ನಗರ ಇಲ್ಲವೇ ಚಾಮರಾಜ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಟಿಕೇಟ್ ನೀಡುವಂತೆ ಷರತ್ತು ಇಟ್ಟಿದ್ದಾರೆ ಎನ್ನಲಾಗಿದೆ. ಅವರು ಮಗನಿಗೂ ಟಿಕೇಟ್ ನೀಡುವಂತೆ ಕೇಳಿದ್ದಾರೆ ಎಂಬುದನ್ನು ಮಾಜಿ ಸಿಎಂ ಸಿದ್ದರಾಮಯ್ಯನವರೂ ಕೂಡ ಒಪ್ಪಿಕೊಂಡಿದ್ದಾರೆ.

ಅವರು ಟಿಕೇಟ್ ಕೇಳಿದ್ದಾರೆ ಎನ್ನುವ ಮಾಹಿತಿ ಹೊರ ಬರುತ್ತಿದ್ದಂತೆ  ಕಾಂಗ್ರೆಸ್ ಮುಖಂಡರೂ ಕೂಡ ತಮಗೂ ಟಿಕೇಟ್ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಮರೀಗೌಡ ಅವರೂ ಕೂಡ ನೀವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲದಿದ್ದಲ್ಲಿ ನನಗೇ ಟಿಕೇಟ್ ಕೊಡಿ ಎಂದು ಸಿದ್ದರಾಮಯ್ಯನವರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇತ್ತ ಕೆ.ಆರ್.ನಗರದಲ್ಲಿ ಕೂಡ ಕಾಂಗ್ರೆಸ್ ಮುಖಂಡ ರವಿಶಂಕರ್ ತಾನು ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿದ್ದು, ತನಗೂ ಟಿಕೇಟ್ ಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ಮೈಸೂರಿನಲ್ಲಿ ಶಾಸಕ ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿರುವುದನ್ನು ಮಾಜಿ ಶಾಸಕ ವಾಸು ಸ್ವಾಗತಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು ಪಕ್ಷದ ಸಿದ್ದಾಂತವನ್ನು ಒಪ್ಪಿ ಬೇರೆ ಪಕ್ಷದಿಂದ ಬರುವವರಿಗೆ ಪಕ್ಷಕ್ಕೆ ಬರೋದು ಬೇಡ ಅಂತ ಹೇಳಲು ನಾವ್ಯಾರು? ಹೈಕಮಾಂಡ್ ಒಪ್ಪೋದಾದರೆ ಯಾರು ಬೇಕಾದರೂ ಬರಬಹುದು, ಆದರೆ ಪಕ್ಷದ ಸಿದ್ಧಾಂತ ನೀತಿ, ನಿಯಮಗಳಿಗೆ ಒಳಪಟ್ಟು ಬರಬೇಕಾಗುತ್ತದೆ. ಪಕ್ಷವನ್ನು ಆಳಲು ಬರುವವರಿಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ಮೊದಲು ಪಕ್ಷ ಸೇರಬೇಕು, ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಳ್ಳಬೇಕು. ನಂತರ ಪಕ್ಷದವರು ಅರ್ಜಿ ಕರೆಯುತ್ತಾರೆ. ಆಗ ಮುಖ್ಯಮಂತ್ರಿಯಾದವರನ್ನು ಹಿಡಿದು ಪಕ್ಷದ ನಾಯಕರಾಗಿ ಬಂದವರನ್ನು ಹಿಡಿದು, ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರಿಂದ ಹಿಡಿದು ಎಲ್ಲರೂ ಸ್ಪರ್ಧಿಸಲು ಅರ್ಜಿ ಹಾಕಬೇಕಾಗುತ್ತದೆ. ತೀರ್ಮಾನ ಮಾಡುವ ಕೆಲಸ ಹೈಕಮಾಂಡ್ ನದ್ದು. ನಾನು ಬೇಡ ಅಂದರೆ ಅವರೇನು ತಡೆಯೋದಿಲ್ಲ, ಅಥವಾ ಅವರು ಕೊಟ್ಟರೆ ನಾನು ತಡೆಯೋಕಾಗಲ್ಲ ಎಂದರು.

ಯಾರೂ ಪಕ್ಷದ ಟಿಕೇಟ್ ಕೇಳೋದು ಬೇಡ ಅಂತ ನಾನು ನಿರ್ಬಂಧ ಮಾಡಲಿಕ್ಕಾಗಲ್ಲ, ಪ್ರತಿಯೊಬ್ಬರು ಪಕ್ಷಕ್ಕೆ ಬಂದ ಮೇಲೆ ಅವರ ಮಗನಿಗೆ ಕೇಳಲಿ, ಸೊಸೆಗೆ ಕೇಳಲಿ ಮನೆಯವರಿಗೂ ಕೇಳಲಿ, ಇನ್ನೊಬ್ಬರಿಗೂ ಕೇಳಲಿ, ಕೇಳೋದಿಕ್ಕೆ ಅವರು ಸ್ವತಂತ್ರರು. ಅದನ್ನು ತಡೆಯೋದಕ್ಕೆ ನಾನ್ಯಾರು ಎಂದು ಪ್ರಶ್ನಿಸಿದರು.

ನನಗೂ ಮೂರು ಮಕ್ಕಳಿದ್ದಾರೆ ಚಾಮರಾಜ ಕೊಡಿ, ಕೃಷ್ಣರಾಜ ಕೊಡಿ, ನರಸಿಂಹರಾಜ ಕೊಡಿ ಅಂತ ಎಲ್ಲ ಯುವರಾಜರನ್ನು ತಯಾರು ಮಾಡುತ್ತಿದ್ದರೆ ತಪ್ಪಾಗಲ್ವಾ? ಬೇರೆಯವರಿಗೆ ನಾವು ಮಾತನಾಡುತ್ತೇವೆ. ನನ್ನ ಮಕ್ಕಳಿಗೆ ಕೊಡಿ ಅನ್ನೋದು ನನ್ನ ದೃಷ್ಟಿಯಲ್ಲಿ ನನ್ನ ವಿಷಯದಲ್ಲಿ ಸರಿಯಲ್ಲ, ಕೇಳೋದು ಬಿಡೋದು ಅವರ ಹಕ್ಕು, ಮೊದಲು ಪಕ್ಷಕ್ಕೆ ಬರಲಿ, ಆಮೇಲೆ ಕೇಳಲಿ, ಈ ಪಕ್ಷದಲ್ಲೇ ಆರಂಭದಿಂದಲೂ ಇದ್ದವನು, ಇಲ್ಲೇ ಇರುತ್ತೇನೆ.ಕೊನೆಯೂ ಇರುತ್ತೇನೆ.  ನಾನು ಯಾವ ಪಕ್ಷದಿಂದಲೂ ಅರ್ಜಿ ಹಾಕಿ ಈ ಪಕ್ಷಕ್ಕೆ ಬಂದವನಲ್ಲ. ವಿದ್ಯಾರ್ಥಿ ಇರುವಾಗಲೇ  ಕಾಂಗ್ರೆಸ್ ಲ್ಲಿ ಇದ್ದೇನೆ. ನಾನು ಯಾವತ್ತು ಬದಲಾಗಲ್ಲ. 2004ರಲ್ಲಿ ನನಗೆ ಸೀಟ್ ಕೊಟ್ಟಿಲ್ಲ, ನಾನು ಪಕ್ಷ ಬಿಟ್ಟಿದ್ದೀನಾ? ಬಂದ ಬಂದವರಿಗೆಲ್ಲ ಟಿಕೇಟ್ ಕೊಡೋ ಪರಿಸ್ಥಿತಿಗೆ ಕಾಂಗ್ರೆಸ್ ಬಂದಿಲ್ಲ, ನಾನಿನ್ನೂ ನಿವೃತ್ತಿಯೇ ಆಗಿಲ್ಲ, ನಿವೃತ್ತಿಯಾಗಬೇಕು, ಅನಾರೋಗ್ಯ ದಿಂದ ನರಳುತ್ತಿರಬೇಕು, ಇಲ್ಲದಿದ್ದರೆ ಸಾವಾಗಿರಬೇಕು. ಇಷ್ಟು ಬಿಟ್ಟರೆ ವೆಕೆನ್ಸಿ ಇರಬೇಕು. ಹಾಗೆಲ್ಲ ಕೊಡಲಿಕ್ಕಾಗಲ್ಲ. ನಾನೂ ಒಬ್ಬ ಪ್ರಬಲ ಆಕಾಂಕ್ಷಿ ಅಲ್ಲ ಅಂತ ಹೇಳಿದವರು ಯಾರು  ಎಂದು ಪ್ರಶ್ನಿಸಿದರು.

Leave a Reply

comments

Related Articles

error: