ಕರ್ನಾಟಕಪ್ರಮುಖ ಸುದ್ದಿ

‘ಸಾಂಸ್ಥಿಕ ಕ್ವಾರಂಟೈನ್’ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ : ರಾಜು ಮೊಗವೀರ

ರಾಜ್ಯ(ಮಡಿಕೇರಿ),ಸೆ.3:- ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವಿಟಿ ಪ್ರಮಾಣ ಶೇ.2 ಕ್ಕಿಂತ ಕಡಿಮೆಯಾದಲ್ಲಿ ಸರ್ಕಾರವು ಶಾಲಾ-ಕಾಲೇಜು ಆರಂಭಕ್ಕೆ ಅವಕಾಶ ನೀಡಲಿದ್ದು, ಆ ದಿಸೆಯಲ್ಲಿ ಕೇರಳ ರಾಜ್ಯದಿಂದ ವಿದ್ಯಾಭ್ಯಾಸಕ್ಕಾಗಿ ಕೊಡಗು ಜಿಲ್ಲೆಗೆ ಆಗಮಿಸುವ ವಿದ್ಯಾರ್ಥಿಗಳ ‘ಸಾಂಸ್ಥಿಕ ಕ್ವಾರಂಟೈನ್’ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪದವಿ ಪೂರ್ವ ಕಾಲೇಜು, ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳ ಪ್ರಾಂಶುಪಾಲರ ಜೊತೆ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸ್ಥಳೀಯ ಪಂಚಾಯಿತಿಗಳಿಗೆ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡಬೇಕು. ಕೇರಳ ವಿದ್ಯಾರ್ಥಿಗಳು ಯಾವ ಯಾವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಒದಗಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳು ಆರಂಭಗೊಂಡರೆ ಶಾಲಾ-ಕಾಲೇಜಿನಲ್ಲಿ ಕೋವಿಡ್-19 ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಭೌತಿಕ ತರಗತಿಗಳು ಆರಂಭವಾದಾಗ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಬೇಕಿದೆ. ಆದ್ದರಿಂದ ಕೇರಳ ರಾಜ್ಯದಿಂದ ಬರುವ ವಿದ್ಯಾರ್ಥಿಗಳು ಕೋವಿಡ್ ನಿರೋಧಕ ಲಸಿಕೆ ಪಡೆದಿದ್ದರೂ ಸಹ 72 ಗಂಟೆ ಅವಧಿಯ ಕೋವಿಡ್ ನೆಗೆಟಿವ್ ವರದಿ ಇರಬೇಕು. ಜೊತೆಗೆ 7 ದಿನಗಳ ಕಾಲ ‘ಇನ್ಸ್‍ಟ್ಯೂಷನಲ್ ಕ್ವಾರಂಟೈನ್’ ಮಾಡಬೇಕು. 7 ದಿನದ ನಂತರ ಕೋವಿಡ್ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಲ್ಲಿ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸಬೇಕಿದೆ. ಆದ್ದರಿಂದ ತಮ್ಮ ಶಿಕ್ಷಣ ಸಂಸ್ಥೆ ವ್ಯಾಪ್ತಿಯಲ್ಲಿ ಸಾಂಸ್ಥಿಕ ಕ್ವಾರಂಟೈನ್‍ಗೆ ಸಿದ್ಧತೆ ಮಾಡಿಕೊಳ್ಳುವಂತೆ ಅವರು ಹೇಳಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ಶಾಲಾ-ಕಾಲೇಜುಗಳು ಆರಂಭವಾದ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು ಹೀಗೆ ಹಲವು ನಿಯಮಗಳನ್ನು ಪಾಲಿಸಬೇಕು ಎಂದರು.
ನೋಡಲ್ ಅಧಿಕಾರಿಗಳು ಕೋವಿಡ್-19 ಪ್ರಕರಣಗಳು ಹೆಚ್ಚು ವರದಿಯಾಗುವ ಸೂಕ್ಷ್ಮ ಪ್ರದೇಶಗಳ ಕಡೆ ವಿಶೇಷ ಗಮನಹರಿಸುವಂತೆ ಜಿಲ್ಲಾಧಿಕಾರಿ ಅವರು ಹೇಳಿದರು.
ಎಲ್ಲೆಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚು ಕಂಡುಬರುತ್ತವೆ. ಅಂತಹ ಕಡೆಗಳಲ್ಲಿ ಹೆಚ್ಚಿನ ಗಮನಹರಿಸಬೇಕು. ಗ್ರಾ.ಪಂ. ಕಾರ್ಯಪಡೆ ಸಭೆಯನ್ನು ವಾರದಲ್ಲಿ ಎರಡು ದಿನ ನಡೆಸಬೇಕು. ಸಾಂಸ್ಥಿಕ ಕ್ವಾರಂಟೈನ್ ಪರಿಶೀಲನೆ ಮಾಡಬೇಕು. ಆರೋಗ್ಯ ಇಲಾಖೆ ಪಂಚಾಯತ್ ರಾಜ್, ಕಂದಾಯ ಇತರ ಇಲಾಖಾ ಅಧಿಕಾರಿಗಳು ಗಮನಹರಿಸುವಂತೆ ಸೂಚಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಶ್ರೀಧರನ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ವಿಷ್ಣುಮೂರ್ತಿ, ಹಲವು ಪದವಿ ಕಾಲೇಜಿನ ಪ್ರಾಂಶುಪಾಲರು, ವೈದ್ಯಕೀಯ ಕಾಲೇಜಿನ ಸೂಕ್ಷ್ಮಾಣು ಜೀವಿ ವಿಭಾಗದ ಮುಖ್ಯಸ್ಥರಾದ ಡಾ.ನಜೀಮ ತಬಶಿರ, ಸಮುದಾಯ ಆರೋಗ್ಯ ಅಧಿಕಾರಿ ಡಾ.ಮಹೇಶ್, ಡಾ.ಗೋಪಿನಾಥ್, ಡಾ.ಆನಂದ್, ನೋಡಲ್ ಅಧಿಕಾರಿಗಳಾದ ಶೇಖರ್, ವಿರೂಪಾಕ್ಷ, ಕೆ.ಟಿ.ದರ್ಶನ್, ಲಿಂಗರಾಜಪ್ಪ, ತಹಶೀಲ್ದಾರ್ ಮಹೇಶ್, ಇತರರು ಹಲವು ಮಾಹಿತಿ ನೀಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: