ಕರ್ನಾಟಕಪ್ರಮುಖ ಸುದ್ದಿ

ಹಸಿರು ತವರು ವೃದ್ದಿಗಾಗಿ ಮಣ್ಣು, ಜಲ, ಅರಣ್ಯ ಸಂರಕ್ಷಿಸಿ : ಬಿ. ಎ ಪರಮೇಶ್

ರಾಜ್ಯ(ಹಾಸನ) ಸೆ.3:- ಹಸಿರು ತವರು ವೃದ್ದಿಗಾಗಿ ಮಣ್ಣು ,ಜಲ, ಅರಣ್ಯ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿದರೆ ಉತ್ತಮ ಪರಿಸರ ಬೆಳವಣಿಗೆಗೆ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಎ ಪರಮೇಶ್ ಅವರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತಿ ಹೊಯ್ಸಳ ಸಭಾಂಗಣದಲ್ಲಿ ಕಾವೇರಿ ಕೂಗು ಮರ ಮಿತ್ರ ಆ್ಯಪ್‍ಗೆ ಚಾಲನೆ ನೀಡಿ ಮಾತನಾಡಿ ಅವರು ಅಭಿವೃದ್ಧಿ ಒತ್ತಡದಿಂದ ಪರಿಸರ ನಾಶವಾಗುತ್ತಿದೆ ಪ್ರತಿಯೊಬ್ಬರು ಗಿಡ ನೆಟ್ಟು ರಕ್ಷಣೆ ಮಾಡುವ ಜವಾಬ್ದಾರಿ ವಹಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಪ್ರತಿಯೊಬ್ಬ ರೈತರು ತಮ್ಮ ಜಮೀನುಗಳಲ್ಲಿ ಹಾಗೂ ನಗರ ಪ್ರದೇಶದಲ್ಲಿ ಮನೆಯ ಸುತ್ತಮುತ್ತ ಇರುವ ಸ್ಥಳದಲ್ಲಿಯೇ ಮರ ಗಿಡ ನೆಟ್ಟು ಬೆಳೆಸುವುದರಿಂದ ಪ್ರಕೃತಿಯನ್ನು ಉಳಿಸಿ ಬೆಳಸಬಹುದು ಎಂದು ಅವರು ತಿಳಿಸಿದರು.
ಕಾವೇರಿ ಕೂಗು ಅಭಿಯಾನದ ವತಿಯಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಈಗಾಗಲೇ ಸಮೀಕ್ಷೆ ನಡೆಸಿದ್ದು 52 ಲಕ್ಷ ರೈತರಿದ್ದಾರೆ. 242 ಕೋಟಿ ಮರಗಳನ್ನು ನೆಟ್ಟು ಬೆಳೆಸುವ ಯೋಜನೆ ಹಾಕಿಕೊಂಡಿದ್ದಾರೆ ಇದು ಕಾರ್ಯಗತವಾದಲ್ಲಿ ಕಾವೇರಿ ಮೂಲ ಸ್ವರೂಪಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದರು.
ಇದೊಂದು ಅದ್ಬುತವಾದ ಯೋಜನೆ ಗ್ರಾಮ ಪಂಚಾಯಿತಿ, ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಇಲಾಖೆ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಹಸಿರು ಕಂಗೊಳಿಸಲಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಅವರು ಮಾತನಾಡಿ ಗಿಡ ಮರಗಳನ್ನು ಬೆಳೆಸುವ ಕಾರ್ಯಕ್ರಮಗಳಿಗೆ ಚಾಲನೆ ನೀಡುವುದರ ಜೊತೆಗೆ ಮಾತ್ರ ಸಾಲದು ವ್ಯವಸ್ಥಿತವಾಗಿ ಅನುಷ್ಠಾನವಾಗುವಂತೆ ನಿಗಾ ವಹಿಸಬೇಕು ಎಂದರು.
ಗಿಡ ಮರಗಳನ್ನು ನೆಡುವ ಯೋಜನೆ ಉತ್ತಮವಾಗಿದೆ ಅವುಗಳನ್ನು ನಿರಂತರವಾಗಿ ನೋಡಿಕೊಂಡು ರಕ್ಷಣೆ ಮಾಡಬೇಕು ಗಿಡಗಳು ನಶಿಸಿ ಹೋದಲ್ಲಿ ಮತ್ತೆ ನೆಟ್ಟು ಪೋಷಿಸಲು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ್ ಅವರು ಮಾತನಾಡಿ ಕಾವೇರಿ ಕೂಗು ಅಭಿಯಾನದ ಮರ ಮಿತ್ರ ಆಪ್ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂದರು.
ಕಳೆದ ದಶಕಗಳಿಂದ ಅರಣ್ಯ ಕೃಷಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರು ತಮ್ಮ ಜಮೀನಲ್ಲಿ ಗಿಡ ಮರಗಳನ್ನು ಬೆಳೆಸಿ ಬದುಕುಳಿದಿರುವ ಗಿಡಗಳಿಗೆ 3 ವರ್ಷಗಳಲ್ಲಿ ಮೊದಲನೇ ವರ್ಷ 35 ರೂ ಎರಡನೇ ವರ್ಷಕ್ಕೆ 40 ರೂ ಹಾಗೂ ಮೂರನೇ ವರ್ಷಕ್ಕೆ 50 ರೂ ಸೇರಿದಂತೆ ಒಟ್ಟು 125 ರೂ ಸಹಾಯದನವನ್ನು ಇಲಾಖೆ ವತಿಯಿಂದ ನೀಡಲಾಗುತ್ತದೆ
ರೈತರಿಗೆ ಅವಶ್ಯಕವಿರುವ ಮರಗಳ ಬಗ್ಗೆ ಸಮೀಕ್ಷೆ ನಡೆಸಿ ಮಾಹಿತಿ ನೀಡುವುದರಿಂದ ಬೇಡಿಕೆಗೆ ಅನುಗುಣವಾಗಿ ಸಸಿಗಳನ್ನು ಅರಣ್ಯ ಇಲಾಖೆ ವತಿಯಿಂದ ಬೆಳಸಿ ನೀಡಲಾಗುತ್ತದೆ ಎಂದರು.
ತಲಾ ಗ್ರಾಮ ಪಂಚಾಯಿತಿಗೆ ಇಬ್ಬರಂತೆ ಮರ ಮಿತ್ರರನ್ನು ನೇಮಿಸಿರುವುದು ಮರ ಸಮೀಕ್ಷೆ ನಡೆಸಲು ಹಾಗೂ ರೈತರಿಗೆ ಸಸಿಗಳ ಬಗ್ಗೆ ಮಾಹಿತಿ ನೀಡಿ ತಲುಪಿಸಲು ಅನುಕೂಲವಾಗುತ್ತದೆ ಈ ಕಾರ್ಯಕ್ರಮ ಅನುಷ್ಠಾನವಾಗಲು ಸಾರ್ವಜನಿಕರ ಸಹಬಾಗಿತ್ವ ಅತಿ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆಯ ಉಪ ನಿರ್ದೇಶಕರಾದ ಗಿರೀಶ್ ಹಾಗೂ ತೋಟಗಾರಿಕಾ ಇಲಾಖೆ ,ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮತ್ತಿತರರು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: